Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ನುಡಿಚಿತ್ರ - ಲೇಖನ

ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಎಲ್ಲ ಬರಹಗಳನ್ನು (ಲೇಖನ, ನುಡಿಚಿತ್ರ, ವಿಶ್ಲೇಷಣಾತ್ಮಕ ಬರಹ, ಫಾಲೋ ಅಪ್, ಅಂಕಣ ಬರಹ ಇತ್ಯಾದಿ) ಲೇಖನಗಳು ಎಂದೇ ಕರೆದರೂ ಪತ್ರಿಕೋದ್ಯಮದಲ್ಲಿ ಇವೆಲ್ಲ ಬರವಣಿಗೆಯ ಬೇರೆಬೇರೆ ಪ್ರಕಾರಗಳು. ಈ ಪೈಕಿ ಲೇಖನ ಮತ್ತು ನುಡಿಚಿತ್ರದ ಬಗ್ಗೆ ಹೊಸಬರಲ್ಲಿ ಗೊಂದಲ ಏರ್ಪಡುವುದು ಸಹಜ. ಅನೇಕರು ಫೊಟೋಗಳಿರುವ ಬರಹಗಳನ್ನು ನುಡಿಚಿತ್ರವೆಂದೂ, ಫೊಟೋಗಳಿಲ್ಲದ ಬರಹಗಳನ್ನು ಲೇಖನವೆಂದೂ ಭಾವಿಸಿದ್ದಾರೆ. ಇದು ಸರಿಯಲ್ಲ. ಲೇಖನದಲ್ಲಿಯೂ ಫೊಟೋ, ರೇಖಾಚಿತ್ರ, ಬಾಕ್ಸ್ ಐಟಂಗಳನ್ನು ಬಳಸಬಹುದು. ಹಾಗಾದರೆ ಲೇಖನ ಮತ್ತು ನುಡಿಚಿತ್ರಗಳ ನಡುವಿನ ವ್ಯತ್ಯಾಸ ಏನು?

ಸರಳವಾಗಿ ಹೇಳುವುದಿದ್ದರೆ ಕುಳಿತಲ್ಲಿಯೇ ಬರೆಯುವಂಥದ್ದು ಲೇಖನವಾದರೆ, ತಿರುಗಾಟದ ಹಿನ್ನೆಲೆಯಲ್ಲಿ ಬರೆಯುವಂಥದ್ದು ನುಡಿಚಿತ್ರ. ಅಂದರೆ? ಯಾವುದಾದರೊಂದು ವಿಷಯದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಕಲೆಹಾಕಿ ಅವುಗಳನ್ನು ಒಂದು ಅನುಕ್ರಮಣಿಕೆಯ ಆಧಾರದಲ್ಲಿ ನೇರವಾಗಿ ನಿರೂಪಿಸುತ್ತಾ ಹೋದರೆ ಅದು ಲೇಖನವೆನಿಸುತ್ತದೆ. ಅದು ಸಾಮಾನ್ಯವಾಗಿ ಪ್ರಬಂಧ ಅಥವಾ ಪಠ್ಯದ ಶೈಲಿಯಲ್ಲಿರುತ್ತದೆ. ನುಡಿಚಿತ್ರಕ್ಕೆ ಕ್ಷೇತ್ರಭೇಟಿ ಅತ್ಯಗತ್ಯ. ಉದಾಹರಣೆಗೆ: `ನೆಲಜಲ ಸಂರಕ್ಷಣೆ ಅಗತ್ಯ ಮತ್ತು ವಿಧಾನಗಳು' ಎಂಬ ಶೀರ್ಷಿಕೆಯ ಲೇಖನ. ಇದರಲ್ಲಿ ಏನೇನಿರಬೇಕು? ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ನೀರಿನ ಅಭಾವ, ಸೊರಗುತ್ತಿರುವ ಜಲ ಸಂಪನ್ಮೂಲಗಳು, ಇದರಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಲೆದೋರಿರುವ ಸಮಸ್ಯೆಗಳು, ಇವಕ್ಕೆ ಪರಿಹಾರ ರೂಪದಲ್ಲಿ ಕೈಗೊಳ್ಳಬೇಕಾದ ನೆಲಜಲ ಸಂರಕ್ಷಣೆಯ ಕ್ರಮಗಳು, ಅದರಲ್ಲಿರುವ ಬೇರೆಬೇರೆ ವಿಧಾನಗಳು ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿ-ಮಾರ್ಗದರ್ಶನ ನೀಡುವ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿವರ. ಇವೆಲ್ಲ ನೆಲಜಲ ಸಂರಕ್ಷಣೆ ಕುರಿತ ಪ್ರಾಥಮಿಕ ಸಂಗತಿಗಳು. ಇವನ್ನು ನೀವು ನಿಮ್ಮ ಮನೆ ಅಥವಾ ಗ್ರಂಥಾಲಯದಲ್ಲಿ ಕುಳಿತು ಕಲೆಹಾಕಬಹುದು. ಸಂಬಂಧಿಸಿದ ಪುಸ್ತಕಗಳು, ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳು ಅಥವಾ ಜಾಲತಾಣಗಳಿಂದ ಮಾಹಿತಿ ಸಂಗ್ರಹಿಸಬಹುದು. ದೂರವಾಣಿ ಮಾತುಕತೆ ಅಥವಾ ಮಿಂಚಂಚೆ ಮೂಲಕವೂ ಮಾಹಿತಿ ಪಡೆಯಬಹುದು. ಈ ಎಲ್ಲ ಮಾಹಿತಿಗಳನ್ನು ಆಧರಿಸಿ ಲೇಖನ ಬರೆಯಬಹುದು. ಪೂರಕ ಫೊಟೋಗಳು, ರೇಖಾಚಿತ್ರಗಳನ್ನೂ ನೀಡಬಹುದು. ಕೆಲ ಮಾಹಿತಿಗಳನ್ನು ಬಾಕ್ಸ್ ಗಳಲ್ಲೂ ಕೊಡಬಹುದು. ಶುಂಠಿ ಬೇಸಾಯ, ಬಾಳೆ ಕೃಷಿ, ಜೇನು ವ್ಯವಸಾಯ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಗಮನಿಸಿ. ಎಲ್ಲವೂ ಒಂದು ಸಿದ್ಧ ಚೌಕಟ್ಟಿನಲ್ಲಿರುತ್ತವೆ.


ಆದರೆ ನೆಲಜಲ ಸಂರಕ್ಷಣೆ ಕುರಿತು ಕ್ಷೇತ್ರಭೇಟಿ ಮಾಡಿ ಅದರ ಆಧಾರದಲ್ಲಿ ಸಿದ್ಧಪಡಿಸುವ ಬರಹ ನುಡಿಚಿತ್ರವೆನಿಸುತ್ತದೆ. ಇಲ್ಲಿ ನೀವು ನೆಲಜಲ ಸಂರಕ್ಷಣೆ ಎಂದರೆ ಏನು ಎಂಬುದನ್ನು ನೇರವಾಗಿ ಹೇಳುವ ಬದಲು ಅಂತಹ ಕೆಲಸ ಮಾಡಿದ ವ್ಯಕ್ತಿಯ ಯಶೋಗಾಥೆಯ ಮೂಲಕ ವಿವರಿಸುತ್ತೀರಿ. ಈ ಬರಹಕ್ಕೆ ನಿರ್ದಿಷ್ಟ ಸೂತ್ರವಿಲ್ಲ. ಇಲ್ಲಿ ಅವರ ಅನುಭವ, ಅವರಿಂದ ನೀವು ಪಡೆದ ಮಾಹಿತಿ, ನೀವು ನೋಡಿದ ಸಂಗತಿಗಳು, ಅವರ ಸಾಧನೆ ಬಗ್ಗೆ ಇತರರ ಅನಿಸಿಕೆ...ಹೀಗೆ ಹತ್ತಾರು ಅಂಶಗಳು ದಾಖಲಾಗಿರುತ್ತವೆ. ಇಲ್ಲಿ ಭಾಷೆಯ ಬಳಕೆ ಅಥವಾ ನಿರೂಪಣಾ ಶೈಲಿಯಲ್ಲಿ ನಿಮ್ಮದೇ ಪ್ರಯೋಗ ಮಾಡುವ ಮೂಲಕ ಆ ವ್ಯಕ್ತಿಯ ಸಾಧನೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಬಹುದು. ಫೊಟೋಗಳು, ಬಾಕ್ಸ್ ಐಟಂಗಳು ಅಥವಾ ರೇಖಾಚಿತ್ರಗಳ ಮೂಲಕ ಬರಹವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಬಹುದು.

'ಸಾವಯವ ಕೃಷಿಯ ಮಹತ್ವ' ಲೇಖನವಾದರೆ ಸಾವಯವ ಕೃಷಿಕನ ಅನುಭವ/ಸಾಧನೆ ನುಡಿಚಿತ್ರ. `ಎಮುಸಾಕಣೆ ಹೇಗೆ?' ಲೇಖನವಾದರೆ ಎಮು ಸಾಕಿದವರ ಅನುಭವ ನುಡಿಚಿತ್ರ. `ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು' ಲೇಖನವಾದರೆ ಹಲಸಿನ ಚಿಪ್ಸ್, ಹಲ್ವ ಮಾಡಿದವರ ಬಗ್ಗೆ ಬರೆಯುವುದು ನುಡಿಚಿತ್ರ.

ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  Centre for Agricultural Media