Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುà²à²ªà³à²Ÿ
ಕೃಷಿಪರ_ಮಾಧ್ಯಮ
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ದೇಣಿಗೆ
  'ಕೃಷಿ ವಲಯದ ಸಂಕಟ ಇಡೀ ಪ್ರಜಾತಂತ್ರದ ಸಂಕಟ'
'ಇಂದು ಮಾಹಿತಿಯ ಸುಂಟರಗಾಳಿ ಎದ್ದಿದೆ; ಆದರೆ ಇದರ ಕೇಂದ್ರಬಿಂದುವಾಗಿರುವ ರೈತ ಮಾಹಿತಿಯ ಕೊರತೆ ಅನುಭವಿಸುತ್ತಿದ್ದಾನೆ' ಎಂದು ಹಿರಿಯ ಅಭಿವೃದ್ಧಿ ಬರಹಗಾರ ನಾಗೇಶ ಹೆಗಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು 'ಕೃಷಿ ಪತ್ರಿಕೋದ್ಯಮ ಮತ್ತು ಸವಾಲುಗಳು' ಎಂಬ ವಿಷಯದ ಕುರಿತು ಬೆಂಗಳೂರಿನಲ್ಲಿ ಫೆಬ್ರವರಿ 21, 2009ರಂದು ಏರ್ಪಟ್ಟ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಾವಿಂದು ಸುದ್ದಿಯ ಸಂತೆಯಲ್ಲಿದ್ದೇವೆ; ಅಭಿವೃದ್ಧಿಹೊಂದಿದ ದೇಶಗಳ ಕಾರ್ಪೊರೇಟ್ ವಲಯದಿಂದ ಮಾಹಿತಿಯ ಮಹಾಪೂರವೇ ಹರಿದುಬರುತ್ತಿದೆ; ಆದರೆ ನಮ್ಮ ಕೃಷಿ-ಗ್ರಾಮೀಣ ವಲಯದಿಂದ ಮಾಹಿತಿ ಲಭ್ಯವಾಗುತ್ತಿಲ್ಲ; ರೈತ ಸಮುದಾಯಕ್ಕೂ ಅಗತ್ಯಾಧಾರಿತ ಮಾಹಿತಿ ದೊರಕುತ್ತಿಲ್ಲ ಎಂದು ನಾಗೇಶ ಹೆಗಡೆ ಹೇಳಿದರು

ನಾಗೇಶ ಹೆಗಡೆ ಕಾರ್ಯಾಗಾರ ಉದ್ಘಾಟಿಸುತ್ತಿರುವುದು
ಡಾ. ಆರ್. ದ್ವಾರಕಿನಾಥ್, ಡಾ. ಎ. ರಾಜಣ್ಣ, ಜಿ. ರಘುನಾಥ್
ಅಶ್ವತ್ಥನಾರಾಯಣ ಅವರನ್ನೂ ಚಿತ್ರದಲ್ಲಿ ಕಾಣಬಹುದು

ಕನ್ನಡದ ಯಾವ ಪತ್ರಿಕೆಯಲ್ಲೂ ಕೃಷಿ ವಲಯಕ್ಕೆ ಸಂಬಂಧಿಸಿ ಪೂರ್ಣಾವಧಿ ವರದಿಗಾರರಿಲ್ಲ; ಹೀಗಾಗಿ ಈ ಕುರಿತು ಆಳ ಅಧ್ಯಯನದ ವರದಿಗಳು ಪ್ರಕಟಗೊಳ್ಳುತ್ತಿಲ್ಲ; ಬದಲಾಗಿ ವಾಣಿಜ್ಯ ಹಿತಾಸಕ್ತಿಯ ಮಾಹಿತಿಗಳೇ ಮೇಲುಗೈ ಸಾಧಿಸುತ್ತಿವೆ ಎಂದು ಅವರು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಇಂಧನ ಅಗತ್ಯ ಪೂರೈಸುವ ಬೆಳೆಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಆಹಾರಬೆಳೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದ ಅವರು, ಕೃಷಿ ಅರಣ್ಯ ಕೂಡ ಉದ್ದಿಮೆಗಳ ಅಗತ್ಯವನ್ನು ಪೂರೈಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ; ಇನ್ನೊಂದೆಡೆ, ವಿವಿಧ ಕಾರಣಗಳಿಂದ ಕೃಷಿಭೂಮಿಗೂ ಸಂಚಕಾರ ಬಂದೊದಗಿದೆ ಎಂದರು. ಒಂದೆಡೆ, ನಗರಗಳತ್ತ ಗ್ರಾಮೀಣ ಜನತೆಯ ವಲಸೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಇನ್ನೊಂದೆಡೆ ಕಾರ್ಪೊರೇಟ್ ವಲಯ ದೇಶಿ ಕೃಷಿರಂಗದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ; ಈ ಮಧ್ಯೆ ರೈತರ ಆತ್ಮಹತ್ಯೆ ಮುಂದುವರಿದಿದೆ ಎಂದು ನಾಗೇಶ ಹೆಗಡೆ ಹೇಳಿದರು.

ಕೃಷಿ ವಲಯದ ಸಂಕಟವನ್ನು ಇಡೀ ಪ್ರಜಾತಂತ್ರದ ಸಂಕಟವೆಂದೇ ಪರಿಗಣಿಸಿ, ಇದರ ಉಳಿವು ಹಾಗೂ ಸುಸ್ಥಿರ ಪ್ರಗತಿಗಾಗಿ ಕಾರ್ಯೋನ್ಮುಖವಾಗುವುದು ಇಂದಿನ ತುರ್ತು ಅಗತ್ಯ ಎಂದು ಅವರು ಪ್ರತಿಪಾದಿಸಿದರು. ವ್ಯಾಪಕ ರೈತ ಸಮುದಾಯವನ್ನು ತಲುಪುವಲ್ಲಿ ಟಿವಿಯಂತಹ ದೃಶ್ಯಮಾಧ್ಯಮ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದ್ದು, ಅವನ್ನು ಸಮರ್ಥವಾಗಿ ಬಳಸಿಕೊಳ್ಳಲು ಅಭಿವೃದ್ಧಿ ಪತ್ರಕರ್ತರು ಮುಂದಾಗಬೇಕು ಎಂದು ಹೆಗಡೆ ಕರೆನೀಡಿದರು.

ಶ್ರೀ ಪಡ್ರೆ ಅವರಿಂದ ವಿಷಯ ಮಂಡನೆ
ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಸಹಭಾಗಿತ್ವದಲ್ಲಿ ಕಾರ್ಯಾಗಾರ ಹಮ್ಮಿಕೊಂಡಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಆರ್. ದ್ವಾರಕಿನಾಥ್ ಮಾತನಾಡಿ, ಕೃಷಿರಂಗ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಗಂಭೀರ ಪ್ರಯತ್ನ ನಡೆಯಬೇಕು; ಈ ಹಾದಿಯಲ್ಲಿ ಮಾಧ್ಯಮಗಳು ಸೃಜನಾತ್ಮಕ ಪಾತ್ರ ವಹಿಸಬೇಕು ಎಂದರು.

ಅಧ್ಯಕ್ಷಸ್ಥಾನದಿಂದ ಮಾತನಾಡಿದ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ. ಎ. ರಾಜಣ್ಣ, ಜನಸಮುದಾಯದ ಉಳಿವಿನ ದೃಷ್ಟಿಯಿಂದ ಕೃಷಿರಂಗದ ಉಳಿವು ಅತ್ಯಗತ್ಯ; ಈ ಹಿನ್ನೆಲೆಯಲ್ಲಿ ರೈತರ ಹಿತರಕ್ಷಣೆಗೆ ನಾವಿಂದು ಆದ್ಯತೆ ನೀಡಬೇಕಿದೆ ಎಂದು ಹೇಳಿದರು.ರೈತರಿಗೆ ನೀಡುತ್ತಿರುವ ಸಬ್ಸಿಡಿಯ ಬಗ್ಗೆ ಆಗಾಗ ಅಪಸ್ವರ ಕೇಳಿಬರುತ್ತಿದೆ; ಆದರೆ ಸಬ್ಸಿಡಿ ನೀಡದಿದ್ದರೆ ರೈತರ ಕೃಷಿ ಉತ್ಪನ್ನಗಳ ಬೆಲೆ ಏರೀತು; ಅದನ್ನು ಕೊಳ್ಳುವುದು ಸುಲಭಸಾಧ್ಯವೇ ಎಂಬ ಬಗ್ಗೆ ಟೀಕಾಕಾರರಿಗೆ ಕಲ್ಪನೆ ಇಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಮಾಧ್ಯಮ ವಲಯದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶ್ರೀ ಪಡ್ರೆ, ಡಾ. ಜಿ.ಎನ್.ಎಸ್. ರೆಡ್ಡಿ, ಕೆ. ಗುಣಶೇಖರ್, ಜಿ.ಆರ್. ಗುಂಡಪ್ಪ, ವಿ. ಗಾಯತ್ರಿ, ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ಎಂ.ಟಿ. ಶಾಂತಿಮೂಲೆ, ಸುದರ್ಶನ ಸೇರಿದಂತೆ 12 ಮಂದಿ ಗಣ್ಯರನ್ನು ಸನ್ಮಾನಿಸಲಾಯಿತು.

ರಾಜ್ಯ ಸಾವಯವ ಕೃಷಿ ಮಿಶನ್ನಿನ ಅಧ್ಯಕ್ಷ ಡಾ. ಆ.ಶ್ರೀ. ಆನಂದ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಶ್ರೀ ಡಿ.ಪಿ. ಪರಮೇಶ್ವರ, ಐಎಟಿ ಕಾರ್ಯದರ್ಶಿ ಜಿ. ರಘುನಾಥ್, ಮಾಧ್ಯಮ ರಂಗದ ಪ್ರಮುಖರಾದ ಅರ್ಜುನ ದೇವ, ಎಚ್.ಎನ್. ಆನಂದ, ಖಾದ್ರಿ ಎಸ್. ಅಚ್ಯುತನ್, ಜಿ.ಆರ್. ಗುಂಡಪ್ಪ, ಗಾಣಧಾಳು ಶ್ರೀಕಂಠ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

'ಕೃಷಿ ಸಂಪಾದಕರ ಪರಿಷತ್' ಅಸ್ತಿತ್ವಕ್ಕೆ
 
ಪುಟದ ಮೇಲಕ್ಕೆ
 
  © Centre for Agricultural Media