Download
Kannada Fonts for Windows

ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
 
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
  ಕೃಷಿ-ಗ್ರಾಮೀಣ-ಅಭಿವೃದ್ಧಿ ಪತ್ರಿಕೋದ್ಯಮ ತರಬೇತಿ ಆರಂಭ

 

ಕೃಷಿ ಮಾಧ್ಯಮ ಕೇಂದ್ರದ 2017ನೇ ಸಾಲಿನ ಕೃಷಿ-ಗ್ರಾಮೀಣ-ಅಭಿವೃದ್ಧಿ ಪತ್ರಿಕೋದ್ಯಮ ತರಬೇತಿ 12.12.2016ರಂದು ವಿನೂತನವಾಗಿ ಆರಂಭವಾಯಿತು. ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆ ಅವರು ಕಾಮ್ ಕೋರ್ಸ್ ವಾಟ್ಸಪ್ ಗುಂಪಿನಲ್ಲಿ ದನಿ ಸಂದೇಶ ನೀಡುವ ಮೂಲಕ ತರಬೇತಿಯನ್ನು ಉದ್ಘಾಟಿಸಿದರು. ರಾಜ್ಯದ ವಿವಿಧೆಡೆಗಳಲ್ಲಿನ ಕಾಮ್ ಅಭ್ಯರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ವೀಕ್ಷಕರು ಸಕ್ರಿಯ ಪಾಲ್ಗೊಂಡಿದ್ದರು. ಕಾರ್ಯಕ್ರಮ ಯಾವುದೇ ತಾಂತ್ರಿಕ ಅಡೆತಡೆಯಿಲ್ಲದೆ ಸುಮಾರು ಒಂದೂವರೆ ಗಂಟೆ ಕಾಲ ಸುಗಮವಾಗಿ ನಡೆಯಿತು. ಪ್ರಾಥಮಿಕ ಪಠ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆಯಲ್ಲಿ ಅನೇಕರು ಉತ್ಸಾಹದಿಂದ ಭಾಗವಹಿಸಿದರು. ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಹಾಡು ಕೂಡ ಮೂಡಿಬಂದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.

ಸಂಪನ್ಮೂಲ ವ್ಯಕ್ತಿಗಳಾಗಿ ರೂಪುಗೊಂಡಿರುವ ಕಾಮ್ ಫೆಲೋಗಳ ಸಂದೇಶ ಮಹತ್ವದ್ದು.

ಸಂಜೆ 7ರಿಂದ ರಾತ್ರಿ 9ರ ವರೆಗೆ ಕಾಮ್ ಕೋರ್ಸ್ ವಾಟ್ಸಪ್ ತರಗತಿ ನಡೆಯುತ್ತದೆ. ಈಮಧ್ಯೆ, ಕೆಲ ಸಂಪನ್ಮೂಲ ವ್ಯಕ್ತಿಗಳು ಅಂಕಣ ರೂಪದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಕಾಮ್ ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಡಾ. ತಲಕಾಲುಕೊಪ್ಪ ಅವರ ‘ತಂತ್ರ-ತಾಣ’, ಜಿ. ಕೃಷ್ಣಪ್ರಸಾದ್ ಅವರ ‘ಬೀಜ ಮಾತು’, ಮಲ್ಲಿಕಾರ್ಜುನ ಹೊಸಪಾಳ್ಯ ಅವರ ‘ಬಂಡಿ ಜಾಡು’ ಅಂಕಣ ಅಂತಿಮಗೊಂಡಿವೆ. ಶ್ರೀ ಪಡ್ರೆ ಹಾಗೂ ಇತರರ ಅಂಕಣಗಳು ಶೀಘ್ರ ನಿಗದಿಯಾಗಿ ಬಹುತೇಕ ಮುಂದಿನ ವಾರದಿಂದ ಎಲ್ಲ ಅಂಕಣಗಳು ಆರಂಭವಾಗಲಿವೆ. ವಾಟ್ಸಪ್ ಅಂಕಣ ಕೂಡ ಕಾಮ್ ವಿಶೇಷ.

 

  ಪತ್ರಿಕೋದ್ಯಮ ಶಿಕ್ಷಣದ ಹೊಸ ಅಧ್ಯಾಯ - ಶ್ರೀ ಪಡ್ರೆ
 

ಕಳೆದ ದಿನಾಂಕ 12.12.2016ರಂದ್ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆ ಅವರು ಕಾಮ್ ಕೋರ್ಸ್ ವಾಟ್ಸಪ್ ಗುಂಪಿನಲ್ಲಿ ದನಿ ಸಂದೇಶ ನೀಡುವ ಮೂಲಕ ತರಬೇತಿಯನ್ನು ಉದ್ಘಾಟಿಸಿದರು. ಅವರ ಸಂದೇಶ ಹೀಗಿದೆ - "ಅವರವರು ತಿನ್ನುವ ಆಹಾರ ಅಥವಾ ಉಣ್ಣುವ ಅನ್ನ ಅವರ ಆರೋಗ್ಯವನ್ನು ನಿರ್ಧರಿಸುತ್ತದೆ ಅಂತ ಬಲ್ಲವರು ಹೇಳ್ತಾರೆ. ಈ ಮಾತನ್ನು ನಾವು ಚೆನ್ನಾಗಿ ಮನನ ಮಾಡಬೇಕಾಗಿದೆ.

ಕೃಷಿಯನ್ನು ದೇಶದ ಜನರ ಆರೋಗ್ಯ ಕಾಯುವ ಮಹತ್ವದ ಗೌರವಪೂರ್ವಕ ಉದ್ಯೋಗ ಅಂತ ನಾವು ಹೇಳಲೇಬೇಕಾಗಿದೆ. ಆದರೆ ಈಗ ನಾವು ಒಂದು ವಿಷವರ್ತುಲದ ಒಳಗೆ ಸಿಕ್ಕಿಹಾಕಿಕೊಂಡಿದ್ದೇವೆ. ನಮ್ಮ ಊಟದ ಬಟ್ಟಲಲ್ಲಿ ವಿಷ ಸೇರಿಕೊಂಡಿದೆ; ವಾತಾವರಣದಲ್ಲಿ ಹತಾರು ಕ್ಯಾನ್ಸರ್‌ಕಾರಕಗಳು ಸುಳಿದಾಡ್ತಾ ಇವೆ. ಈ ವಿಷವರ್ತುಲದಿಂದ ಹೊರಗೆ ಬರುವಂಥದ್ದು, ನೆಮ್ಮದಿಯ ಬದುಕು ಬಾಳುವಂಥದ್ದು ನಮ್ಮ ದೊಡ್ಡ ಸವಾಲಾಗಿ ನಿಂತಿದೆ.
ಇದು ಒಂದು ಸಮಸ್ಯೆಯಾದರೆ ಇನ್ನೊಂದೆಡೆ ಹಳ್ಳಿಗಳು ಮಂಕಾಗುತ್ತಿವೆ; ಕೃಷಿ ಸೋಲುತ್ತಿದ್ದು ಸಂಕಟಗಳು, ಗೊಂದಲಗಳ ಗೂಡಾಗಿದೆ; ಯುವಕರು ಪೇಟೆಕಡೆ ಮುಖ ಮಾಡ್ತಾ ಇದ್ದಾರೆ; ಹಳ್ಳಿಗಳಲ್ಲಿ ದುಡಿಯುವ ಕೈಗಳು ಕಡಿಮೆಯಾಗ್ತಾ ಇವೆ; ದೊಡ್ಡ ಪ್ರಶ್ನೆ ಹಳ್ಳಿಗಳ ಎದುರು ಎದ್ದು ನಿಂತಿದೆ. ಈಮಧ್ಯೆ, ಅಷ್ಟಿಷ್ಟು ಮಂದಿ ಐಟಿ ರಂಗ ಹಾಗೂ ಪೇಟೆಬದುಕಿನಿಂದ ಬೇಸತ್ತು ಬರುವವರು ಇದ್ದಾರೆ. ಆದರೂ ನಗರದತ್ತ ನಡೆ ಜಾಸ್ತಿಯಾಗಿದೆ. ಹಳ್ಳಿಗಳ ಕಡೆ ಪ್ರೀತಿ ಕಡಿಮೆಯಾಗ್ತಾ ಇದೆ. ಇದು ಒಂದು ದೊಡ್ಡ ಸವಾಲು.

ಹಿಂದೆಲ್ಲ ಸುಸ್ಥಿರ ಕೃಷಿಯ ಬಗ್ಗೆ ಮಾತನಾಡುತ್ತಿದ್ದೆವು. ಆದರೆ ಇಂದು ಕೃಷಿಯನ್ನೆ ಉಳಿಸಿಕೊಳ್ಳುವಂಥದ್ದು ನಮ್ಮ ಎದುರಿಗಿರುವ ದೊಡ್ಡ ಸವಾಲಾಗಿದೆ. ಇಂದಿನ ಈ ಬದಲಾದ ಕಾಲಘಟ್ಟದಲ್ಲಿ ನಮ್ಮ ಕೃಷಿ ಪತ್ರಿಕೋದ್ಯಮವೂ ಕೂಡ ಸಮಾಜಮುಖಿಯಾಗಿ ದೇಶ ಕಟ್ಟುವ ಕಡೆ ತಿರುಗುವಂಥದ್ದು ತುಂಬ ಅಗತ್ಯವಿದೆ.
ಇವತ್ತು ನಮಗೆ ಜನರಲ್ಲಿ, ಹಳ್ಳಿಗರಲ್ಲಿ ಕೃಷಿಯ ಬಗ್ಗೆ ಪ್ರೀತಿ ಹುಟ್ಟಿಸುವ, ಅವರಿಗೆ ಬದುಕಿನ ಬೆಳಕನ್ನು ಕಾಣಿಸುವ, ಕೃಷಿ ವೃತ್ತಿಯಲ್ಲಿ ಇನ್ನಷ್ಟು ಆದಾಯ ತರುವಂತೆ ಮಾಡುವ ವಿಚಾರಕ್ಕೆ ದಾರಿ ತೋರುವ ಪತ್ರಿಕೋದ್ಯಮ ಬೇಕಾಗಿದೆ.

ನಮ್ಮ ಬದುಕಿನಿಂದ ವಿಷವನ್ನು ದೂರವಿಡುವಂಥ ಜೀವನ ಶೈಲಿಯ ಬಗ್ಗೆ ಕನ್ನಡಿ ಹಿಡಿಯಬೇಕಾಗಿದೆ; ಬದುಕಿನಲ್ಲಿ ನೆಮ್ಮದಿ ಕಂಡು ಒಂದು ಸುಸ್ಥಿರ ಸಮಾಜ ಸೃಷ್ಟಿಯಾಗಬೇಕಾದರೆ ಇವೆಲ್ಲ ಅಗತ್ಯವಿದೆ. ಹಾಗಾಗಿ ಇವತ್ತು ಬರವಣಿಗೆಯ ಹಿಂದಿರುವಂತಹ ಜವಾಬ್ದಾರಿಗಳು ಹಿಂದೆಂದಿಗಿಂತ ಜಾಸ್ತಿಯಾಗಿದೆ ಎಂಬುದನ್ನು ಅರ್ಥಮಾಡಿಕೊಂಡ ಬಳಿಕ ಲೇಖನಿಯನ್ನು ಕೈಗೆತ್ತಿಕೊಳ್ಳಬೇಕಾಗಿದೆ.

ದೇಶದಲ್ಲೇ ಈ ರೀತಿಯ ಪತ್ರಿಕೋದ್ಯಮ ಶಿಕ್ಷಣ - ಇಷ್ಟು ಕಳಕಳಿಯುಳ್ಳದ್ದು, ಇಷ್ಟು ಆಳ-ವಿಸ್ತಾರ ಹರವುಗಳಿರುವಂಥದ್ದು, ನಿಮ್ಮಲ್ಲಿರುವ ಚಿಕಿತ್ಸಕ ದೃಷ್ಟಿಯನ್ನು ಮತ್ತು ನಿಮ್ಮಲ್ಲಿನ ನಿಷ್ಪಕ್ಷಪಾತ ದೃಷ್ಟಿಕೋನವನ್ನು ಹರಿತಗೊಳಿಸುವಂಥದ್ದು - ಬೇರೆಲ್ಲೂ ಸಿಗಲು ಸಾಧ್ಯವಿಲ್ಲ.

ಅಶರೀರ ಪತ್ರಿಕೋದ್ಯಮ ಶಿಕ್ಷಣದ ಹೊಸ ಅಧ್ಯಾಯ ಆರಂಭವಾಗಿದೆ. ನಿಮಗೆ ಮುಂದಿನ ಒಂದು ವರ್ಷ ಅತ್ಯಪೂರ್ವವಾದ ಶಿಕ್ಷಣ ಸಿಗಲಿದೆ. ಆದರೆ ಅದನ್ನು ಪಡಕೊಳ್ಳಲು ನೀವು ಶ್ರಮಪಡಬೇಕಾಗುತ್ತದೆ; ಜ್ಞಾನ ಸಂಪಾದನೆಯ ಹಸಿವು ಇಟ್ಟುಕೊಳ್ಳಬೇಕಾಗುತ್ತದೆ. ಪ್ರೀತಿಯಿಂದ, ಉತ್ಸಾಹದಿಂದ ಕಲಿಸಲು ನಾವೆಲ್ಲ ನಿಮ್ಮೊಂದಿಗಿದ್ದೇವೆ. ನಿಮ್ಮ ಕಲಿಕೆ ಸಂತಸಕರವಾಗಲಿ; ನಮ್ಮ ಸಂತಸವನ್ನೂ ವರ್ಧಿಸಲಿ. ಶುಭಾಶಯಗಳು."

ಪೂರ್ಣ ವರದಿ ..

 
  ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ - ಪುಸ್ತಕ ಬಿಡುಗಡೆ
 

ಹಲಸಿನ ಬಗ್ಗೆ ನಮ್ಮಲ್ಲಿರುವ ಕೀಳರಿಮೆ ಬಿಡೋಣ. ನಮ್ಮ ರಾಜ್ಯದಲ್ಲಿ, ದೇಶದಲ್ಲಿ ಹಲಸನ್ನು ಅಪರಿಚಿತವಾಗಲು ಬಿಡಬಾರದು ಎಂದು ಬೆಂಗಳೂರಿನ ಹಿರಿಯ ತೋಟಗಾರಿಕಾ ತಜ್ಞ ಡಾ. ಎಸ್.ವಿ.ಹಿತ್ತಲಮನಿ ಹೇಳಿದರು.

ಅವರು ನವೆಂಬರ್ 20ರಂದು ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಹಲಸಿನ ಮಹತ್ವವನ್ನು ಸಾರುವ ಹಲವು ಸಂದೇಶಗಳನ್ನೊಳಗೊಂಡಿರುವ - ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ- ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ನಮ್ಮ ರೈತರಿಗೆ ಭವಿಷ್ಯದಲ್ಲಿ ಹಲಸಿನ ಬೆಳೆ ಅನುಕೂಲಕರವಾಗುವುದರಲ್ಲಿ ಸಂದೇಹವೇ ಇಲ್ಲ. ದೇಶ-ವಿದೇಶಗಳಲ್ಲಿ ಹಲಸಿನ ಬಗ್ಗೆ ಸಾಕಷ್ಟು ಅಧ್ಯಯನಗಳಾಗುತ್ತಿದೆ. ಇವೆಲ್ಲಾ ಹಲಸಿನ ಮಹತ್ವ ಹಾಗೂ ಅಗತ್ಯದ ಬಗ್ಗೆ ಬೊಟ್ಟು ಮಾಡಿವೆ. ಸದ್ಯದ ಬೆಳವಣಿಗೆಗಳಿಂದ ಹಲಸಿನ ಕುರಿತ ನಿರ್ಲಕ್ಷ್ಯ ದೂರಾಗುವುದರಲ್ಲಿ ಸಂಶಯ ಇಲ್ಲ ಎಂದರು.

ಹಲಸು ಆಂದೋಳನ ಮತ್ತು ಪುಸ್ತಕ ಕುರಿತು ಕೃಷಿ ಮಾಧ್ಯಮ ಕೇಂದ್ರದ ಶಿವರಾಂ ಪೈಲೂರು ಮಾತನಾಡಿ, ಶ್ರೀಪಡ್ರೆ ಅವರ ಹಲಸಿನ ಕುರಿತ ಲೇಖನಗಳು ಅನೇಕರಿಗೆ ಹಲವು ರೀತಿಯಲ್ಲಿ ಹಲಸು ಕೃಷಿ, ಮೌಲ್ಯವರ್ಧನೆಗೆ ಪ್ರೇರಣೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಹಲಸಿನ ಬೆಳೆ-ಬಳಕೆಗೆ ಉತ್ತೇಜನ ನೀಡಲು ಶ್ರಮ ಪಡುತ್ತಿದ್ದಾರೆ. ಅದೀಗ ಒಂದು ಆಂದೋಳನವಾಗಿ ರೂಪುಗೊಂಡಿದೆ. ಮಾಧ್ಯಮ ಪರಿಣಾಮಕಾರಿಯಾಗಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದಕ್ಕೆ ಅಡಿಕೆ ಪತ್ರಿಕೆಯ ಹಲಸು ಅಭಿಯಾನ ಒಂದು ನಿದರ್ಶನ. ಅವರ ಆಳ ಅಧ್ಯಯನದ ಫಲವಾಗಿ ಹಲಸು ಪುಸ್ತಕ ರೂಪುಗೊಂಡಿದೆ ಎಂದರು.
ಶ್ರೀ ಪಡ್ರೆ ಅವರ ಹಲಸಿನ ಸಂದೇಶಗಳಿರುವ ಕಾರ್ಡ್ ನ್ನು ವಿವೇಕಾನಂದ ಶಾಲೆಯ ಅಧ್ಯಕ್ಷ ವೆಂಕಟೇಶ್ವರ ಅಮೈ ಬಿಡುಗಡೆಗೊಳಿಸಿ ಅನೇಕ ವಿಷಪೂರಿತ ಹಣ್ಣುಗಳನ್ನು ಖರೀದಿ ಮಾಡುವ ನಾವು ನಮ್ಮ ಮನೆಯ ಪಕ್ಕದ ಹಲಸನ್ನು ಮರೆತಿರುವುದು ಸರಿಯಲ್ಲ. ಪುಸ್ತಕದ ಮೂಲಕ ಮತ್ತೆ ಹಲಸಿಗೆ ಜಾಗೃತಿ ಮೂಡಲಿ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಫಾರ್ಮರ್ ಫಸ್ಟ್ ಟ್ರಸ್ಟಿನ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಮಾತನಾಡಿ ಆಂದೋಳನದ ಮೂಲಕ ಹಲಸನ್ನು ಇಡೀ ರಾಜ್ಯ ಮಾತ್ರವಲ್ಲ ದೇಶಮಟ್ಟದಲ್ಲಿ ಅಡಿಕೆಪತ್ರಿಕೆ ಉತ್ತಮ ಕೆಲಸ ಮಾಡಿದೆ. ಜೊತೆಗೆ ವಾಟ್ಸಪ್ ಕೃಷಿ ಪತ್ರಿಕೋದ್ಯಮದ ಮೂಲಕ ಹೊಸ ಬರಹಗಾರರಿಗೆ ಅವಕಾಶ ಮಾಡಿಕೊಟ್ಟಿದೆ ಎಂದರು.
ವಾಟ್ಸಪ್ ಪತ್ರಿಕೋದ್ಯಮ ಶಿಬಿರ ಹಾಗೂ ಹಲಸು ಆಂದೋಳನದ ಬಗ್ಗೆ ಮಾತನಾಡಿದ ಪತ್ರಕರ್ತ ಶ್ರೀಪಡ್ರೆ, ವಾಟ್ಸಪ್ ಬಳಕೆ ಕೃಷಿಪತ್ರಿಕೋದ್ಯಮಕ್ಕೆ ಅನುಕೂಲಕರ. ಈ ನಿಟ್ಟಿನಲ್ಲಿ ಪ್ರಥಮ ಬಾರಿಗೆ ವಾಟ್ಸಪ್ ಪತ್ರಿಕೋದ್ಯಮ ಶಿಬಿರ ಆಯೋಜಿಸಲಾಗಿದೆ. ಸವಾಲುಗಳು ಇವೆ ನಿಜ, ಆದರೆ ಇದೆಲ್ಲವನ್ನೂ ದಾಟಿ ಮುಂದೆ ಹೋಗಬೇಕಾಗಿದೆ ಎಂದರು. ಹಲಸು ಬಗ್ಗೆ ಅನೇಕರಿಗೆ ಇಂದಿಗೂ ಕೀಳರಿಮೆ ಇದೆ. ಆದರೆ ಈ ಬಗ್ಗೆ ಪಾಸಿಟಿವ್ ಯೋಚನೆ ಬರಬೇಕಾಗಿದೆ. ಏಕೆಂದರೆ ಭವಿಷ್ಯದಲ್ಲಿ ಈ ಹಣ್ಣಿಗೆ ನಿಶ್ಚಯವಾಗಿಯೂ ಬೆಲೆ ಬರಲಿದೆ ಎಂದರು.

ವಾಟ್ಸಪ್ ಕೃಷಿ ಪತ್ರಿಕೋದ್ಯಮದ ಶಿಬಿರದ ಬಗ್ಗೆ ಶಿಬಿರಾರ್ಥಿಗಳಾದ ಮೈಸೂರಿನ ಹರೀಶ್ ಹಾಗೂ ರೇಖಾ ಸಂಪತ್ ಅನಿಸಿಕೆ ವ್ಯಕ್ತಪಡಿಸಿದರು. ಪುಸ್ತಕವನ್ನು ಪ್ರಕಾಶಿಸಿದ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರವು ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್‌ನ ಟ್ರಸ್ಟಿ ಪಡಾರು ರಾಮಕೃಷ್ಣ ಶಾಸ್ತ್ರಿ ಸ್ವಾಗತಿಸಿ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಕಾರ್ಯದರ್ಶಿ ಶಂಕರ್ ಸಾರಡ್ಕ ವಂದಿಸಿದರು. ಪತ್ರಕರ್ತ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಗೇರು ಸಂಶೋಧನಾ ಕೇಂದ್ರ ವಿಜ್ಞಾನಿ ಡಾ.ಮೋಹನ ತಲಕಾಲುಕೊಪ್ಪ ಸಹಕರಿಸಿದರು.

ಪುಸ್ತಕ ಖರೀದಿಸಲು 9448354177 (ಎಸೆಮ್ಮೆಸ್) ಅಥವಾ ಇಮೇಲ್ (agriculturalmedia@gmail.com) ಮೂಲಕ ಸಂಪರ್ಕಿಸಿ.


 
  700 ಭತ್ತ, 120 ಮಾವಿನ ತಳಿಗಳ ಸಂರಕ್ಷಕ ಸೈಯದ್ ಘನಿ ಖಾನ್
 

'ಜಗತ್ತು ಮೂರು ದೊಡ್ಡ ಆತಂಕಗಳನ್ನು ಎದುರಿಸುತ್ತಿದೆ. ಭೂಮಿ ಬಿಸಿ ಆಗುತ್ತಿದೆ. ಅದಕ್ಕೆ ಮಾನವನೇ ಕಾರಣ. ಆದರೆ ಇದರಿಂದ ಹೆಚ್ಚು ತೊಂದರೆಗೀಡಾಗುತ್ತಿರುವವರು ರೈತರು. ಹವಾಮಾನ ವೈಪರೀತ್ಯವನ್ನು ಎದುರಿಸಿ ಬೆಳೆ ಬೆಳೆಯುವುದು ಸುಲಭದ ಮಾತಲ್ಲ. ಜಾಗತೀಕರಣದಿಂದಾಗಿ ಮಂಡ್ಯದ ಭತ್ತ ಬೆಳೆಗಾರ ಫಿಲಿಪ್ಪೈನ್ಸ್‌ನ ಕೃಷಿಕನೊಂದಿಗೆ ಪೈಪೋಟಿಗಿಳಿಯಬೇಕಾಗಿದೆ. ನಮ್ಮ ದೇಶದಲ್ಲಿ ಕೃಷಿಕರು ಬೀಜ ಸ್ವಾತಂತ್ರ್ಯ, ನೀರಿನ ಸ್ವಾತಂತ್ರ್ಯ, ಸಾರಿಗೆ ಸ್ವಾತಂತ್ರ್ಯವನ್ನು ಪೂರ್ಣವಾಗಿ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಇದರಿಂದ ರೈತರ ಸ್ವಾಭಿಮಾನ, ಸ್ವಾಲಂಬನೆ ಎರಡಕ್ಕೂ ಪೆಟ್ಟು ಬಿದ್ದಿದೆ. ಒಂದು ಅಂದಾಜಿನ ಪ್ರಕಾರ ಪ್ರತಿ ದಿನ 2000 ಕುಟುಂಬಗಳು ಗ್ರಾಮೀಣ ಭಾಗದಿಂದ ಪಟ್ಟಣಗಳಿಗೆ ವಲಸೆ ಹೋಗುತ್ತಿವೆ. ಅರ್ಧ ಗಂತೆಗೆ ಒಬ್ಬ ಕೃಷಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.’ ಎಂದು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಹೇಳಿದರು. ಕೃಷಿ ಮಾಧ್ಯಮ ಕೇಂದ್ರದ '700 ಭತ್ತ, 120 ಮಾವಿನ ತಳಿಗಳ ಸಂರಕ್ಷಕ ಸೈಯದ್ ಘನಿ ಖಾನ್’ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

ಪೂರ್ಣ ವರದಿ ..

 

 
 
  ಉತ್ತಮ ಫಲಿತಾಂಶ
 

ಈ ಬಾರಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿಗೆ ನೋಂದಾಯಿಸಿದ್ದ 22 ಅಭ್ಯರ್ಥಿಗಳ ಪೈಕಿ 16 ಮಂದಿ ಯಶಸ್ವಿಯಾಗಿ ತರಬೇತಿಯನ್ನು ಪೂರೈಸಿದ್ದಾರೆ. ಶೇಕಡಾವಾರು ಹೋಲಿಸಿದರೆ ಬಹುಶಃ ಕಳೆದ ಒಂಭತ್ತು ವರ್ಷಗಳಲ್ಲಿ ದೊರೆತ ಅತ್ಯುತ್ತಮ ಫಲಿತಾಂಶ ಇದಾಗಿದೆ. ತರಬೇತಿಯಲ್ಲಿ ಉತ್ತೀರ್ಣರಾದ ಅಷ್ಟೂ ಮಂದಿ ಕಳೆದ ಒಂದು ವರ್ಷ ಪೂರ್ಣಮನಸ್ಸಿನಿಂದ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನೂತನ ಕಾಮ್ ಫೆಲೋಗಳಿಗೆ ಅಭಿನಂದನೆಗಳು. ಇದರೊಂದಿಗೆ ಇದುವರೆಗಿನ ಒಟ್ಟು ಫೆಲೋಗಳ ಸಂಖ್ಯೆ 105 ತಲುಪಿದೆ.
ಪೂರ್ಣ ವರದಿ ..


 
  ಬರಸಹಿಷ್ಣು ಹಾರಕಕ್ಕೆ ಮರುಜೀವ: ಗೋಪಾಲನಹಳ್ಳಿಯ ಯಶೋಗಾಥೆ
 

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲನಹಳ್ಳಿ 25 ವರ್ಷಗಳ ಹಿಂದೆ ಸಿರಿಧಾನ್ಯ ಹಾರಕಕ್ಕೆ ಹೆಸರುವಾಸಿಯಾಗಿದ್ದ ಗ್ರಾಮ. ಆದರೆ ಕಾಲಾಂತರದಲ್ಲಿ ಅದು ನೇಪಥ್ಯಕ್ಕೆ ಸರಿಯಿತು. ಇದೀಗ ಅಲ್ಲಿ ಹಾರಕಕ್ಕೆ ಮರುಜೀವ ಪ್ರಾಪ್ತವಾಗಿದೆ. ಈ ವರ್ಷ ಗ್ರಾಮದಲ್ಲಿ ಸುಮಾರು 26 ಕ್ವಿಂಟಾಲ್ ಹಾರಕ ಬೆಳೆಯಲಾಗಿದ್ದು ‘ಹಾರಕ ಬೆಳೆಗಾರರ ಸಂಘ’ ಸ್ಥಾಪನೆಯಾಗಿದೆ. ಮುಂದಿನ ವರ್ಷ 100 ಕ್ವಿಂಟಾಲ್ ಹಾರಕ ಬೆಳೆಯುವ ಹಂಬಲ ಗ್ರಾಮಸ್ಥರಲ್ಲಿದೆ.

ಗ್ರಾಮೀಣ ಬದುಕು ಆತಂಕದಲ್ಲಿದೆ ಎಂಬ ಕಳವಳದ ಈ ದಿನಗಳಲ್ಲಿ ಗೋಪಾಲನಹಳ್ಳಿಯ ಮಾದರಿ ಹೊಸ ಭರವಸೆಯನ್ನು ಮೂಡಿಸುತ್ತದೆ. ಈ ಯಶೋಗಾಥೆಯನ್ನು ಅಭಿವೃದ್ಧಿ ಬರಹಗಾರ ಮಲ್ಲಿಕಾರ್ಜುನ ಹೊಸಪಾಳ್ಯ ಈ ಕೃತಿಯಲ್ಲಿ ವಿವರವಾಗಿ ಚಿತ್ರಿಸಿದ್ದಾರೆ.

ಪೂರ್ಣ ವರದಿ ..

 

 
ಬರವಣಿಗೆಯ ಹೊಸ ಹಾದಿ  
 

- ಡಾ. ಗಣೇಶ ಎಂ. ಹೆಗಡೆ

ಓದುವುದು ಚಿಕ್ಕಂದಿನಿಂದಲೂ ನನ್ನ ಅತ್ಯಂತ ಪ್ರಿಯ ಹವ್ಯಾಸ. ಮೊದಲೆಲ್ಲ ಆಗೊಮ್ಮೆ ಈಗೊಮ್ಮೆ ಎಂಬಂತೆ ತೀರ ವಿರಳವಾಗಿ ಲೇಖನಗಳನ್ನು ಬರೆಯುತ್ತಿದ್ದೆ. ಕಾಮ್ ತರಬೇತಿಯ ಈ ಅವಧಿಯಲ್ಲಿ ತಿಂಗಳಿಗೊಮ್ಮೆ ಅಸೈನ್‌ಮೆಂಟ್ ಕಳಿಸಬೇಕಾದ ಅನಿವಾರ್ಯತೆ. ಹೀಗಾಗಿ ಬರವಣಿಗೆಯನ್ನು ಹೆಚ್ಚು ಸೀರಿಯಸ್ ಆಗಿ ತೆಗೆದುಕೊಳ್ಳಲು ಸಾಧ್ಯವಾಯಿತು.

ಪ್ರಾಥಮಿಕ ಶಿಬಿರದಲ್ಲಿ ಭಾಗವಹಿಸಿ ಮಾರ್ಗದರ್ಶನ ಪಡೆದ ನಂತರ ಮುಂದಿದ್ದ ಪ್ರಶ್ನೆ ‘ವಿಷಯದ ಆಯ್ಕೆ ಹೇಗೆ’ ಎಂಬುದು. ಆದರೆ ನನಗೆ ಇದು ದೊಡ್ಡ ಸಮಸ್ಯೆಯಾಗಿ ಕಾಡಲಿಲ್ಲ. ಒಬ್ಬ ವೃತ್ತಿಪರ ಪಶುವೈದ್ಯನಾಗಿ ಸುಮಾರು ಹತ್ತು ಗಂಟೆಗಳಷ್ಟು ಕಾಲ ಗ್ರಾಮೀಣ ಪ್ರದೇಶದಲ್ಲಿ ಜನರ ಮತ್ತು ಜಾನುವಾರುಗಳ ಒಡನಾಟದಲ್ಲಿರುವುದು ದೈನಂದಿನ ವಿದ್ಯಮಾನ. ಇದರಿಂದ ನನ್ನ ವೃತ್ತಿಯ ಕುರಿತಾಗಿಯೇ ಅನೇಕಾನೇಕ ವಿಷಯಗಳು ಬರವಣಿಗೆಗೆ ಸಿಗುತ್ತಿರುತ್ತವೆ.

ಪೂರ್ಣ ವರದಿ ...

 
ಕಾಮ್ ಜೊತೆಗಿನ ಪಯಣ  
-ಡಾ. ನಾಗರಾಜ ಕೆ.ಎಂ.

ಮಲೆನಾಡಿನ ಪರಿಸರಕ್ಕೆ ಸೂಕ್ತವಾದ ಗುಣಗಳುಳ್ಳ ವಿಶಿಷ್ಟ ಹಸುವಿನ ತಳಿ ‘ಮಲ್ನಾಡಗಿಡ್ಡ’ಕ್ಕೆ ಕೇಂದ್ರ ಸರಕಾರ ‘ನಿರ್ದಿಷ್ಟ ತಳಿ’ ಮಾನ್ಯತೆ ನೀಡಿದ್ದನ್ನು ಆಧರಿಸಿ ಬರೆದ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಬಂದ ಹತ್ತಾರು ಕರೆಗಳಲ್ಲಿ ಒಂದು ಕರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತಗುಡ್ಡದಲ್ಲಿರುವ ನಂದಿವೇರಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳದಾಗಿತ್ತು. ಕಳೆದೊಂದು ದಶಕದಿಂದ ಕಪ್ಪತಗುಡ್ಡಕ್ಕೆ ಮರುಜೀವ ನೀಡುವ ಕಾಯಕದಲ್ಲಿ ತೊದಗಿಸಿಕೊಂಡಿರುವ ಸ್ವಾಮೀಜಿ, ನಾಲ್ಕೈದು ವರ್ಷಗಳ ಹಿಂದೆ ಅಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನೂ ತಡೆಯಲು ಪ್ರಯತ್ನಿಸಿ ಸಫಲರಾಗಿದ್ದರು. ‘ಪ್ರಜಾವಾಣ್ಯಾಗ ನಿಮ್ಮ ಮಲ್ನಾಡಗಿಡ್ಡ ಓದಿದ್ವಿ; ಭೇಷ್ ಬರ್‌ದೀರಿ. ನಮಗೆ ನಾಲ್ಕು ಮಲ್ನಾಡಗಿಡ್ಡ ಬೇಕು, ಕಳ್ಸೋ ವ್ಯವಸ್ಥೆ ಮಾಡಿದ್ರ ಉಪಕಾರ ಆಗತೈತಿ ನೋಡ್ರಪಾ’ ಎಂದು ಸ್ವಾಮೀಜಿ ಹೇಳಿದಾಗ ಇಲ್ಲವೆನ್ನಲಾಗಲಿಲ್ಲ. ರಾಮಚಂದ್ರಾಪುರ ಮಠದ ಪಶುವೈದ್ಯ ಡಾ. ಕೃಷ್ಣಮೂರ್ತಿಯವರ ಪರಿಚಯವಿದ್ದುದರಿಂದ ಸಂಪರ್ಕ ಸುಲಭವಾಯಿತು. ಮಠಕ್ಕೆ ಹಸುಗಳನ್ನು ಕಳಿಸಲು ಅವರು ಒಪ್ಪಿದರು. ಮಲ್ನಾಡಗಿಡ್ಡ ಕಪ್ಪತಗುಡ್ಡ ಸೇರಿದ್ದು ಕೇಳಿ ಖುಷಿ ಆಯಿತು. ಹಾಗೆಯೇ ಬರಹಗಾರನ ಹೆಗಲೇರುವ ಇಂತಹ ಜವಾಬ್ದಾರಿಗಳ ಅರಿವೂ ಆಯಿತು.
ಪೂರ್ಣ ವರದಿ ...

 
  ಸಂವೇದನಾಶೀಲ ಸಮಾಜ ಇಂದಿನ ಅಗತ್ಯ
 


'ನಾವೀಗ ರೈತರ ಆತ್ಮಹತ್ಯೆ, ಹಳ್ಳಿಯಿಂದ ನಗರಕ್ಕೆ ವಲಸೆ, ವಿದೇಶಿ ಖಾಸಗಿ ಕಂಪನಿಗಳ ಹಾವಳಿ ಹಾಗೂ ಭೂಮಿ ಬಿಸಿಯಾಗುವಂತಹ ನಾಲ್ಕು ಮಹಾ ವಿಪ್ಲವಗಳನ್ನು ಎದುರಿಸುತ್ತಿದ್ದು, ಇವುಗಳ ಪರಿಣಾಮವನ್ನು ಸಮಗ್ರವಾಗಿ ಅರಿತು ವಿಶ್ಲೇಷಿಸಬಲ್ಲ ಸಂವೇದನಾಶೀಲ ಬರಹಗಾರರು ಹಾಗೂ ಮಾಧ್ಯಮ ನೀಡುವ ಮಾಹಿತಿಗೆ ಸೂಕ್ತವಾಗಿ ಸ್ಪಂದಿಸುವ ಸಮಾಜ ಇಂದಿನ ಅಗತ್ಯ' ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅಭಿಪ್ರಾಯ ಪಟ್ಟಿದ್ದಾರೆ.
ಅವರು 13.1.2013ರಂದು ಬೆಂಗಳೂರು ನಗರದ ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕೃಷಿ ಮಾಧ್ಯಮ ಕೇಂದ್ರ ಆಯೋಜಿಸಿದ್ದ 'ಸುಸ್ಥಿರ ಕೃಷಿಗೆ ಹತ್ತಾರು ಹಾದಿ' ಹಾಗೂ 'ಡೈರಿ ಡಾಕ್ಟರ್, ಹೋರಿ ಮಾಸ್ಟರ್' ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

 

ಪೂರ್ಣ ವರದಿ ..


 
  ಬರವನ್ನೇ ಮಣಿಸಿದ ಮಲ್ಲಣ್ಣ
 

ದಶಕದ ಹಿಂದೆ ಮೂರು ವರ್ಷ ಎಡೆಬಿಡದೆ ಬರಗಾಲ ಆವರಿಸಿದಾಗ ಬಯಲುಸೀಮೆಯ ಸಾವಿರಾರು ರೈತರಿಗೆ ಬೇರೆ ಊರುಗಳಿಗೆ ಗುಳೆ ಹೋಗುವುದು ಅನಿವಾರ್ಯವಾಯಿತು. ಆದರೆ ರಾಜ್ಯದಲ್ಲೇ ಅತಿ ಕಡಿಮೆ ಮಳೆಯಾಗುವ ಬಾಗಲಕೋಟೆ ಜಿಲ್ಲೆ ಹುನಗುಂದದ ಸುತ್ತಲ ರೈತರಿಗೆ ಆಹಾರಕ್ಕಾಗಿ ಊರೂರು ಅರಸುವ ಪರಿಸ್ಥಿತಿ ಬರಲಿಲ್ಲ. ಆಗಾಗಲೇ 'ತಿದ್ದಿಸಿಕೊಂಡಿದ್ದ' ಅವರ ಹೊಲಗಳು ಮನೆಗಾಗುವಷ್ಟು ಆಹಾರ ಧಾನ್ಯಗಳನ್ನು ಬೆಳೆಯಲು ಶಕ್ತವಾಗಿದ್ದವು.

ಹೊಲ ತಿದ್ದಿಸುವುದರ ಹಿಂದಿರುವ ಉದ್ದೇಶ ಮಣ್ಣು ಹಾಗೂ ನೀರಿನ ಸಂರಕ್ಷಣೆ. ಹೊಲ ತಿದ್ದಿಸಿದರೆ ಪ್ರಯೋಜನವಿದೆ ಎನ್ನುವುದನ್ನು ಹುನಗುಂದದ ಸುತ್ತಮುತ್ತಲ ರೈತರು ಪ್ರತ್ಯಕ್ಷ ಅನುಭವಿಸಿದವರು. ಹಿಡುವಳಿ ಸಣ್ಣದೇ ಇರಲಿ ಅಥವಾ ನೂರಾರು ಎಕರೆ ಇರಲಿ, ಹುನಗುಂದದ ನಾಗರಾಳ ಕುಟುಂಬ ಶತಮಾನದ ಹಿಂದೆ ತಮ್ಮ ಹೊಲದಲ್ಲೇ ಪ್ರಾರಂಭಿಸಿದ ಈ ನೆಲ-ಜಲ ಸಂರಕ್ಷಣೆಯ ಮಾದರಿ ಉಪಯುಕ್ತ ಎನಿಸಿದೆ.

ಬಿಜಾಪುರದ ಪ್ರಾದೇಶಿಕ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಮುದುಕಪ್ಪ ಬಿ. ಗುಳೇದ್ ಹೇಳುವಂತೆ ನಾಗರಾಳ ಕುಟುಂಬದ ಬರನಿರೋಧಕ ಕ್ರಮಗಳು ಬಾಗಲಕೋಟೆ, ಬಿಜಾಪುರ, ರಾಯಚೂರು, ಗದಗ ಸೇರಿದಂತೆ ಉತ್ತರ ಕರ್ನಾಟಕದ ಸುಮಾರು ಎಂಟು ಜಿಲ್ಲೆಗಳಿಗೆ ಪ್ರಸ್ತುತ.

'ಬರಕಾಮಗಾರಿ' ಎಂಬ ಮಾತು ಮತ್ತೆ ಮತ್ತೆ ಕೇಳಿ ಬರುತ್ತಿರುವ ಸದ್ಯದ ಸನ್ನಿವೇಶದಲ್ಲಿ ಬರನಿರೋಧಕ ಶಕ್ತಿಯನ್ನು ಭೂಮಿಯಲ್ಲಿ, ಆ ಮೂಲಕ ಕೃಷಿಕರಲ್ಲಿ ತುಂಬುವ ಇಂತಹ ಪ್ರಯೋಗಗಳ ಅಗತ್ಯವಿದೆ. ಕೃಷಿ ಸಮುದಾಯಗಳು ಹಾಗೂ ಸರಕಾರ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಕೃಷಿಯಲ್ಲಿ ಸುಸ್ಥಿರತೆ ತರುವ ನಾಗರಾಳ ಕುಟುಂಬದ ಪ್ರಯೋಗಗಳು, ಅದರ ಹಿಂದಿರುವ ಕಾಳಜಿ ಈ ಹಿನ್ನೆಲೆಯಲ್ಲಿ ಮಹತ್ವ ಪಡೆದಿವೆ.

ನೆಲ-ಜಲ ಸಂರಕ್ಷಣೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಹಿರಿಯ ಪತ್ರಕರ್ತ ಶ್ರೀ ಪಡ್ರೆ ಅವರು ನಾಗರಾಳ ಕುಟುಂಬದ 'ಹೊಲ ತಿದ್ದಿಸುವ' ಪಯಣ, ಅದರ ಅಗತ್ಯ, ಕ್ರಮ, ಪರಿಣಾಮ, ಸಾಧ್ಯತೆಗಳನ್ನು ಅತ್ಯಂತ ವಿವರವಾಗಿ, ಸರಳವಾಗಿ ಈ ಪುಸ್ತಕದಲ್ಲಿ ಹೇಳಿದ್ದಾರೆ. ವಿಷಮುಕ್ತ ಒಕ್ಕಲುತನ ಮಾಡುತ್ತ ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿ, ನೆಮ್ಮದಿಯ ಬದುಕು ಸಾಕಾರಗೊಳಿಸಿಕೊಂಡವರ ಅನುಭವ-ಚಿಂತನೆಯ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಕೃಷಿ ಮಾಧ್ಯಮ ಕೇಂದ್ರ ಪ್ರಕಟಿಸುತ್ತಿರುವ ಪುಸ್ತಕ ಸರಣಿಯಲ್ಲಿ ಇದು ಒಂಭತ್ತನೇ ಪುಸ್ತಕ.


 
 
  ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು
 

'ಬದಲಾಗುತ್ತಿರುವ ಸಾಮಾಜಿಕ, ಜಾಗತಿಕ ವ್ಯವಸ್ಥೆಯಲ್ಲಿ ರೈತರ ಬದುಕಿನ ಮೇಲೆ ಬೆಳಕು ಚೆಲ್ಲುವಂತಹ ಲೇಖನಗಳು ಹೆಚ್ಚಾಗಿ ಹೊರಬರಬೇಕು,' ಎಂದು ಹನುಮಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಾಜೇಂದ್ರ ಪಂತ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇತ್ತೀಚೆಗೆ ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನಲ್ಲಿರುವ ಹನುಮಸಾಗರ ಬಾಲಕರ ಸರಕಾರಿ ಪ್ರೌಢಶಾಲೆಯಲ್ಲಿ 'ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು' ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಕಿಶನ್ ರಾವ್ ಕುಲಕರ್ಣಿ ಅವರು ಬರೆದ ಈ ಪುಸ್ತಕ ಕೃಷಿ ಮಾಧ್ಯಮ ಕೇಂದ್ರದ 15ನೇ ಪ್ರಕಟಣೆ. ಕೃಷಿಯಲ್ಲಿ ಸುಸ್ಥಿರತೆಯನ್ನು ಸಾಧಿಸಿ, ಇತರರಿಗೆ ಮಾದರಿಯಾಗಿರುವ ಕೊಪ್ಪಳ ಜಿಲ್ಲೆ, ತಳುವಗೇರಿ ಗ್ರಾಮದ ಯಲ್ಲಪ್ಪ ಹಾಗೂ ಯಲ್ಲವ್ವ ಬಲುಕುಂದಿ ದಂಪತಿಯ ಯಶೋಗಾಥೆಯನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ಪುಸ್ತಕವನ್ನು ಪರಿಚಯಿಸಿದ ಹನುಮಸಾಗರ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕ ಹಾಗೂ ವಿಮರ್ಶಕ ರಾಘವೇಂದ್ರ ಜಮಖಂಡಿಕರ್, 'ಹೈನುಗಾರಿಕೆಯ ಕುರಿತು ಸಾಕಷ್ಟು ಮಾಹಿತಿಯುಳ್ಳ ಈ ಪುಸ್ತಕ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ರೈತರ ಬದುಕಿಗೆ ನೆರವಾಗಬಲ್ಲ ಇಂತಹ ಸಾಹಿತ್ಯ ಹೆಚ್ಚಾಗಿ ಮೂಡಿಬರಲಿ' ಎಂದರು.

ಯಲ್ಲಪ್ಪ ಹಾಗೂ ಯಲ್ಲವ್ವ ಬಲುಕುಂದಿ ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಲೇಖಕ ಕಿಶನ್‌ರಾವ್ ಕುಲಕರ್ಣಿ, ಹನುಮಸಾಗರ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಡಿ. ಮಕಾನದಾರ, ವಿ.ಬಿ. ಉಪ್ಪಿನ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಂಗಯ್ಯ ವಸ್ತ್ರದ, ಪತ್ರಕರ್ತ ಶ್ರೀನಿವಾಸ ಜಹಗೀರ್ದಾರ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಪೂರ್ಣ ವರದಿ ...


ಪುಟದ ಮೇಲಕ್ಕೆ
ಪುಟದ ಮೇಲಕ್ಕೆ


  © Centre for Agricultural Media