Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುà²à²ªà³à²Ÿ
ಕೃಷಿಪರ_ಮಾಧ್ಯಮ
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ದೇಣಿಗೆ
ನೋಡನೋಡುತ್ತ ಹತ್ತು ವರುಷ
inauguration
ಕಾಮ್ ಉದ್ಘಾಟನೆ
ಎರಡು ಸಾವಿರನೇ ಇಸವಿ ಡಿಸೆಂಬರ್ 3. ಧಾರವಾಡ ನಾರಾಯಣಪುರದಲ್ಲಿ 'ಕೃಷ್ಣಾಲಯ'ದ ಎದುರು ಶಾಮಿಯಾನ ಎದ್ದುನಿಂತಿತ್ತು. ಮಂಗಳೂರಿನಿಂದ ಬಂದಿದ್ದ ಎಂ.ಜಿ. ಕಜೆ-ನಳಿನಿ ಅವರ ಕೈಚಳಕದಿಂದ ವೇದಿಕೆ ಶೃಂಗಾರಗೊಂಡಿತ್ತು. ಶಾಮಿಯಾನದೊಳಗೆ ಹೆಚ್ಚೆಂದರೆ ನೂರು ಕುರ್ಚಿಗಳು. ಹಿಂಭಾಗದಲ್ಲಿ ಜೋಡಿಸಿಟ್ಟಿದ್ದ ಮೂರ್ನಾಲ್ಕು ಮೇಜುಗಳ ಮೇಲೆ ಕೃಷಿ ಪತ್ರಿಕೆ-ಪುಸ್ತಕಗಳು. ಸುತ್ತಮುತ್ತಲಿನ ಜನ ಕುತೂಹಲದಿಂದ ನೋಡುತ್ತಿದ್ದರು. ಇದು ಯಾವ ಕಾರ್ಯಕ್ರಮ?! ಹಾಗೆಂದ ಮಾತ್ರಕ್ಕೆ ಶಾಮಿಯಾನದೊಳಗೆ ಕುಳಿತವರಿಗೆ ಕಾರ್ಯಕ್ರಮದ ಬಗ್ಗೆ ಸ್ಪಷ್ಟತೆ ಇತ್ತೆಂದೇನೂ ಅಲ್ಲ. ಅವರ ಮನದೊಳಗೂ ಹತ್ತಾರು ಪ್ರಶ್ನೆಗಳು.

ವೇದಿಕೆಯ ಮೇಲೆ ಶ್ರೀ ಪಡ್ರೆ, ಡಿ.ಡಿ. ಭರಮಗೌಡ್ರ ಹಾಗೂ ಡಾ. ಆರ್.ಎಂ. ಪ್ರಸಾದ್. ಮೂವರೂ ಕೃಷಿಕಪರ ಕೃಷಿ ಸಂವಹನ ಅಗತ್ಯದ ಬಗ್ಗೆ ಮಾತನಾಡಿದರು. 'ನಾವೆಲ್ಲ ಸೇರಿ ಈ ವೇದಿಕೆಯನ್ನು ಬಲಪಡಿಸೋಣ' ಎಂದರು. ನೆರೆದವರೆಲ್ಲರೂ ಚಪ್ಪಾಳೆತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಅದರೊಂದಿಗೆ 'ಪರ್ಯಾಯ ಕೃಷಿ ಮಾಧ್ಯಮ ಕೇಂದ್ರ' ಅಸ್ತಿತ್ವಕ್ಕೆ ಬಂತು. ವೇದಿಕೆಯಲ್ಲಿದ್ದ ಟಿವಿ ಪರದೆಯಲ್ಲಿ ಕಾಮ್ ಜಾಲತಾಣದ ಪುಟಗಳು ಅಸ್ಪಷ್ಟವಾಗಿ ಕಾಣಿಸಿಕೊಂಡವು. ಕಾರ್ಯಕ್ರಮ ಮುಕ್ತಾಯದ ಮುನ್ನ ಸಂತೋಷ್ ಕೌಲಗಿ ಮತ್ತು ಡಾ. ಮನೋಹರ ಉಪಾಧ್ಯ ಎದ್ದುನಿಂತರು. 'ಇದು ನಮ್ಮೆಲ್ಲರ ವೇದಿಕೆ. ಈ ಕಾರ್ಯಕ್ರಮದ ಹೊರೆಯನ್ನು ಎಲ್ಲರೂ ಸೇರಿ ಹೊರೋಣ.' ಆಗ ಸಂಗ್ರಹವಾದ ಮೊತ್ತ ಹದಿನೇಳು ಸಾವಿರ ರೂಪಾಯಿ. ರುಚಿಕಟ್ಟಾದ ಉಟವೂ ಸೇರಿ ಕಾರ್ಯಕ್ರಮಕ್ಕೆ ಆದ ಖರ್ಚಿನ ಮೊತ್ತವೂ ಸರಿಸುಮಾರು ಅಷ್ಟೇ.

ಆಗ ಕೇಂದ್ರದ ಮುಂದಿದ್ದದ್ದು ಮುಖ್ಯವಾಗಿ ಎರಡು ಉದ್ದೇಶಗಳು: ಕನ್ನಡದಲ್ಲಿ ಅಡಿಕೆ ಪತ್ರಿಕೆ ಹುಟ್ಟುಹಾಕಿದ ಕೃಷಿಕಪರ ಕೃಷಿ ಸಂವಹನ ವ್ಯವಸ್ಥೆಯನ್ನು ಇತರೆಡೆಗಳಿಗೂ ಪರಿಚಯಿಸಬೇಕು ಮತ್ತು ಇದರ ಮುಂದುವರಿಕೆಯಾಗಿ ಏನನ್ನಾದರೂ ಮಾಡಬೇಕು ಹಾಗೂ ಕೃಷಿ ಸಂಬಂಧಿಸಿ ಗ್ರಂಥಾಲಯವೊಂದನ್ನು ಅಭಿವೃದ್ಧಿಪಡಿಸಬೇಕು. ಮೊದಲನೆಯ ಉದ್ದೇಶಕ್ಕೆ ಪೂರಕವಾಗಿ ಜಾಲತಾಣ (ವೆಬ್‌ಸೈಟ್) ಅನಾವರಣಗೊಂಡಿತು. ಇಂಟರ್ನೆಟ್ ಮೂಲಕ ಇ-ಬುಲೆಟಿನ್‌ಗಳು ನಾನಾ ದೇಶಗಳಿಗೆ ತಲುಪತೊಡಗಿದವು. ಆಗ ಜಾಲತಾಣದ ಉಸ್ತುವಾರಿ ವಹಿಸಿದ್ದವರು ರಾಮಚಂದ್ರ ಪೈಲೂರು ಹಾಗೂ ಸುಮಾ ಎಂಬಾರ್. ಕೇಂದ್ರದ ಜಾಲತಾಣ ಹಾಗೂ ಇ-ಬುಲೆಟಿನ್‌ಗಳಿಂದಾದ ಬಹುದೊಡ್ಡ ಅನುಕೂಲವೆಂದರೆ ಜಗತ್ತಿನ ಬೇರೆಬೇರೆ ಕಡೆಗಳಲ್ಲಿರುವ ಸಮಾನಾಸಕ್ತ ಮನಸ್ಸುಗಳ ನಡುವೆ ಆತ್ಮೀಯ ಕೊಂಡಿ ಏರ್ಪಟ್ಟದ್ದು.

 
Harogeri
ಹಿರಿಯ ಕೃಷಿ ಪತ್ರಕರ್ತ ಕೌತಾಳ ವೀರಪ್ಪ ಅವರಿಂದ
ಆರ್.ಎಸ್. ಪಾಟೀಲ್ ಅವರಿಗೆ ಪ್ರಶಸ್ತಿ ಪ್ರದಾನ
ತನ್ನ ಮೊದಲ ವಾರ್ಷಿಕೋತ್ಸವದ ಹೊತ್ತಿಗಾಗಲೆ ಕೇಂದ್ರ ಧಾರವಾಡದ ಹೊಸ್ತಿಲು ದಾಟಿತ್ತು. ಆಗ `ನಮ್ಮಲ್ಲಿಗೆ ಬನ್ನಿ' ಎಂಬ ಆಮಂತ್ರಣ ಬಂದದ್ದು ಗದಗ ಜಿಲ್ಲೆ ಹುಲಕೋಟಿಯ ಕೆ.ಹೆಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎಲ್.ಜಿ. ಹಿರೇಗೌಡರ್ ಅವರಿಂದ. ಕಾಮ್ ಬಳಗದ ಮೇಲೆ ಅವರಿಗೆ ಅಪರಿಮಿತ ಅಕ್ಕರೆ. ರಾಜ್ಯಮಟ್ಟದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ ಸ್ಥಾಪನೆ ಮೊದಲ ವಾರ್ಷಿಕೋತ್ಸವದ ವಿಶೇಷ. ಎರಡು ವಿಭಾಗಗಳಲ್ಲಿ ಪ್ರಶಸ್ತಿ: ಕೃಷಿಕರ ವಿಭಾಗ ಹಾಗೂ ಮುಕ್ತ ವಿಭಾಗ. ಮೊದಲ ಪ್ರಶಸ್ತಿಗೆ ಭಾಜನರಾದವರು ಚಂದ್ರಶೇಖರ ಏತಡ್ಕ ಹಾಗೂ ಆರ್.ಎಸ್. ಪಾಟೀಲ. ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕುರಿತ ಎರಡು ದಿನಗಳ ಕಾರ್ಯಾಗಾರವನ್ನೂ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು.

2002ರಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಮಾಧ್ಯಮ ಆಶಯದೊಂದಿಗೆ ಕೇಂದ್ರ ನಾಲ್ಕೈದು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ರೂಪುಗೊಂಡ 'ಹಾರೋಗೇರಿಗೆ ಹೋಗೋಣ ಬನ್ನಿ' ಕಾರ್ಯಕ್ರಮದ ಮೂಲಕ ಹುಬ್ಬಳ್ಳಿ ಹಾಗೂ ಧಾರವಾಡದ ಮಾಧ್ಯಮ ಮಿತ್ರರು ಸಮುದಾಯ ಸಹಭಾಗಿತ್ವದಿಂದ ಸುಸ್ಥಿರ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದ ಹಾರೋಗೇರಿ ಗ್ರಾಮಕ್ಕೆ (ಧಾರವಾಡ ಜಿಲ್ಲೆ, ಕಲಘಟಗಿ ತಾಲೂಕು) ಹಾರೋಗೇರಿಗೆ ಭೇಟಿ ನೀಡಿ ಅಲ್ಲಿನ ರೈತರೊಂದಿಗೆ ಸಂವಾದ ನಡೆಸಿದರು.
ಬರೆಯುವುದಕ್ಕೆ ವಿಷಯಗಳಿವೆ; ಪ್ರಕಟಣೆಗೆ ಅವಕಾಶಗಳಿವೆ. ಜತೆಗೆ ಕೃಷಿರಂಗ ವರ್ಷದಿಂದ ವರ್ಷಕ್ಕೆ ಸಂಕೀರ್ಣಗೊಳ್ಳುತ್ತಿದೆ. ಆದರೆ ಕೃಷಿ-ಗ್ರಾಮೀಣ ವಿಚಾರಗಳ ಬಗ್ಗೆ ನಿಜ ಕಾಳಜಿಯಿಂದ ಬರೆಯುವವರು ಸಾಕಷ್ಟು ಮಂದಿ ಇದ್ದಾರೆಯೇ? ಈ ಪ್ರಶ್ನೆಯ ಹಿನ್ನೆಲೆಯಲ್ಲಿ ಆರಂಭವಾದದ್ದು ಒಂದು ವರ್ಷ ಅವಧಿಯ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇದೊಂದು ಹೊಸ ಪ್ರಯೋಗ. 'ಇದಕ್ಕೆ ಯಾವುದೇ ವಿಶ್ವವಿದ್ಯಾಲಯದ ಮಾನ್ಯತೆ ಇಲ್ಲ. ಕೃಷಿ-ಗ್ರಾಮೀಣ ಆಗುಹೋಗುಗಳ ಬಗ್ಗೆ ಆಳ ಒಳನೋಟಗಳಿಂದ ಬರೆಯುವವರನ್ನು ರೂಪಿಸಲೆತ್ನಿಸುವುದಷ್ಟೆ ನಮ್ಮ ಉದ್ದೇಶ' ಎಂಬ ಸ್ಪಷ್ಟನೆಯೊಂದಿಗೆ ಅರ್ಜಿಗಳನ್ನು ಆಹ್ವಾನಿಸಿದ್ದಾಯಿತು. ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ. ಮೊದಲ ತಂಡಕ್ಕೆ ಪ್ರಾಥಮಿಕ ಶಿಬಿರ ಏರ್ಪಾಡಾದದ್ದು ಕೇಂದ್ರದ ಮೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ; ಸುಳ್ಯ ತಾಲೂಕಿನ 'ಶ್ರೀರಂಗ'ದಲ್ಲಿ (ನವೆಂಬರ್ 2003).

ಕೇಂದ್ರದ ಉದ್ದೇಶ ಈಡೇರಿಕೆಗೆ ಅನುಗುಣವಾಗಿ ಪಠ್ಯ ಮತ್ತು ತರಬೇತಿ ಪ್ರಕ್ರಿಯೆ ನಿಗದಿಪಡಿಸಲಾಯಿತು. ಅದರಂತೆ ಪ್ರಾಥಮಿಕ ಶಿಬಿರದ ಬಳಿಕ ಪ್ರತಿ ಅಭ್ಯರ್ಥಿ ತಿಂಗಳಿಗೆ ಕನಿಷ್ಠ ಎರಡು ಲೇಖನ ಬರೆದು ಕೇಂದ್ರಕ್ಕೆ ಕಳುಹಿಸಬೇಕು. ಅವನ್ನು ಕೇಂದ್ರ ಪರಿಶೀಲಿಸಿ ಸೂಕ್ತ ಸಲಹೆಗಳೊಂದಿಗೆ ವಾಪಸು ಮಾಡುತ್ತದೆ. ಅಭ್ಯರ್ಥಿ ಅವನ್ನು ಪರಿಷ್ಕರಿಸಿ ಪ್ರಕಟಣೆಗೆ ಕಳುಹಿಸಬಹುದು. ತಿಂಗಳ ಅಸೈನ್‌ಮೆಂಟ್‌ಗೆ ಅಂಕಗಳು. ಪ್ರಕಟಿತ ಲೇಖನಗಳಿಗೆ ಬೋನಸ್ ಮಾರ್ಕ್! ಸತತ ಎರಡು ತಿಂಗಳು ಅಸೈನ್‌ಮೆಂಟ್ ಕಳುಹಿಸದ ಅಭ್ಯರ್ಥಿಗಳ ನೋಂದಣಿ ತನ್ನಿಂತಾನಾಗಿಯೇ ರದ್ದಾಗುತ್ತದೆ!! ಯಶಸ್ವಿ ಅಭ್ಯರ್ಥಿಗಳಿಗೆ ವರ್ಷದ ಕೊನೆಯಲ್ಲಿ ಕಾಮ್ ಫೆಲೋ ಗೌರವ ಪ್ರದಾನ. ಆರಂಭದ ಮೂರ್ನಾಲ್ಕು ವರ್ಷ ಅಭ್ಯರ್ಥಿಗಳು ತರಬೇತಿಯ ಅವಧಿಯಲ್ಲಿ ಯಾವುದಾದರೊಂದು ವಿಷಯದ ಬಗ್ಗೆ ಆಳ ಅಧ್ಯಯನ ನಡೆಸಿ ಪ್ರಬಂಧ ಸಿದ್ಧಪಡಿಸಬೇಕಿತ್ತು. ಇದು ಅನೇಕರಿಗೆ ತೀರ ಹೊರೆಯೆನಿಸಿದ್ದರಿಂದ ಅಧ್ಯಯನ ಪ್ರಬಂಧ ಕೈಬಿಡಬೇಕಾಯಿತು.

ಕಾಮ್ ಅಭ್ಯರ್ಥಿಗಳು, ಫೆಲೋಗಳ ಲೇಖನಗಳು ಪತ್ರಿಕಾ ಕಚೇರಿಗಳಲ್ಲಿ ಪ್ರಕಟಗೊಳ್ಳತೊಡಗಿದವು. ಅನೇಕರಿಗೆ ಅದು ಹೊಸ ಅನುಭವ. ಖುಷಿಯ ಕ್ಷಣ. ಇನ್ನಷ್ಟು ಬರೆಯುವ ಸ್ಫೂರ್ತಿ. 'ಈ ವಿಷಯದ ಬಗ್ಗೆ ಲೇಖನ ಬರೆಯುವುದು ಸಾಧ್ಯವೇ' ಎಂದು ಸಂಪಾದಕರಿಂದ ದೂರವಾಣಿ ಕರೆ ಬಂದಾಗ ರೋಮಾಂಚನ. ಆದರೆ ಆಗಾಗ ಕಹಿ ಅನುಭವ ಕೂಡ. ತಾವು ಬರೆದ ಮಾಹಿತಿ ತಪ್ಪಾಗಿ ಪ್ರಕಟಗೊಂಡಾಗ, ಲೇಖನದ ತಿರುಳಿಗೇ ಕತ್ತರಿ (ಮಚ್ಚು!) ಪ್ರಯೋಗವಾದಾಗ, ಬಾಕ್ಸ್ ಐಟಂಗಳನ್ನು ಕೈಬಿಟ್ಟಾಗ, ಶೀರ್ಷಿಕೆಗಳು ಬದಲಾದಾಗ 'ಪತ್ರಿಕೋದ್ಯದ ಉಸಾಬರಿಯೇ ಬೇಡ' ಅಂತನ್ನಿಸಿದ್ದೂ ಇದೆ.

ಕ್ಷೇತ್ರ ಭೇಟಿ
ಪ್ರಾಯೋಗಿಕ ತರಬೇತಿಯ ಭಾಗವಾಗಿ ಕ್ಷೇತ್ರ ಭೇಟಿ
ಈ ತರಬೇತಿಯೊಂದಿಗೆ ಕಾಮ್ ಬಳಗ ಬೆಳೆಯಲಾರಂಭಿಸಿತು. ಆಗ ಹುಟ್ಟಿಕೊಂಡದ್ದು ಕಾಮ್ ನ್ಯೂಸ್. ಇದು ಕಾಮ್ ಅಭ್ಯರ್ಥಿಗಳು, ಫೆಲೋಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ನಮ್ಮೆಲ್ಲ ಹಿತೈಷಿಗಳ ನಡುವಿನ ಸಂಪರ್ಕ ಸೇತು. ಈ ಮಧ್ಯೆ, ಕೇಂದ್ರ ಪುಸ್ತಕ ಪ್ರಕಟಣೆಯನ್ನೂ ಶುರುಮಾಡಿತು. ಕೃಷಿ ಹಾಗೂ ಪೂರಕ ವಿಚಾರಗಳ ಬಗ್ಗೆ ಉಪಯುಕ್ತ ಮಾಹಿತಿಗಳನು ಒಳಗೊಂಡ ಸುಲಭಬೆಲೆಯ ಪುಸ್ತಕಗಳನ್ನು ಪ್ರಕಟಿಸಬೇಕೆಂಬುದು ನಮ್ಮ ಆಶಯ. ಈ ವರೆಗೆ ಹೊರತಂದ ಪುಸ್ತಕಗಳು ಒಂಭತ್ತು. ಆ ಪೈಕಿ ಮೂರು ಪುಸ್ತಕಗಳನ್ನು ಕಾಮ್ ಫೆಲೋಗಳೇ ಬರೆದಿರುವುದು ಹೆಮ್ಮೆಯ ವಿಚಾರ.

ಕಾಮ್ ಕೋರ್ಸ್ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿದೆ. ಇದುವರೆಗಿನ ಒಟ್ಟು ಫೆಲೋಗಳ ಸಂಖ್ಯೆ 80. ಆ ಪೈಕಿ ಕೃಷಿಕರು 17 ಮಂದಿ. ಕೃಷಿ-ತೋಟಗಾರಿಕೆ-ಪಶುಸಂಗೋಪನಾ ಇಲಾಖೆಗಳ 17 ಮಂದಿ, ಕೃಷಿ ವಿಜ್ಞಾನ ಕೇಂದ್ರಗಳ ಮೂರು ಮಂದಿ ಫೆಲೋಗಳಾಗಿದ್ದಾರೆ. ಸ್ವಯಂಸೇವಾ ಸಂಸ್ಥೆಗಳ 10 ಕಾರ್ಯಕರ್ತರು, ಪತ್ರಿಕೋದ್ಯಮ ಕ್ಷೇತ್ರದ ಒಂಭತ್ತು ಮಂದಿ, ಬೋಧನಾವೃತ್ತಿಯಲ್ಲಿರುವ ಎಂಟು ಮಂದಿ ಕಾಮ್ ಫೆಲೋಗಳೆನಿಸಿದ್ದಾರೆ. ಇನ್ನುಳಿದ 17 ಫೆಲೋಗಳು ಬೇರೆಬೇರೆ ಉದ್ಯೋಗಗಳಲ್ಲಿರುವವರು. ವರ್ಷಕ್ಕೆ ಕಾಮ್ ಅಭ್ಯರ್ಥಿಗಳು ಹಾಗೂ ಫೆಲೋಗಳ 250ಕ್ಕೂ ಹೆಚ್ಚು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ. ಕೆಲ ಫೆಲೋಗಳು ಇಂಗ್ಲಿಷ್‌ನಲ್ಲಿಯೂ ಲೇಖನ ಬರೆಯುತ್ತಿದ್ದಾರೆ.

ಹಿತೈಷಿಗಳ ಬೆಂಬಲವೇ ಕೇಂದ್ರದ ಎಲ್ಲ ಚಟುವಟಿಕೆಗಳಿಗೆ ಆಧಾರ. ನಮ್ಮ ಬಹುದೊಡ್ಡ ಖರ್ಚಿನ ಬಾಬತ್ತೆಂದರೆ ವಾರ್ಷಿಕೋತ್ಸವ. ಆದರ ಇಷ್ಟೂ ವರ್ಷಗಳಲ್ಲಿ ಅದು ನಮಗೆ ಒಂದಿಷ್ಟೂ ಹೊರೆಯೆನಿಸದಂತೆ ಕಾರ್ಯಕ್ರಮದ ಆಯೋಜಕರೇ ನಿಭಾಯಿಸಿರುವುದು ಅಭಿಮಾನದ ಸಂಗತಿ. ಎರಡು ಬಾರಿ ವಾರ್ಷಿಕೋತ್ಸವವನ್ನು ಆಯೋಜಿಸಿರುವ ಹುಲಕೋಟಿಯ ಕೆ.ಹೆಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ `ನಮ್ಮಲ್ಲಿ ಯಾವ ವರ್ಷ ಬೇಕಿದ್ದರೂ ಕಾರ್ಯಕ್ರಮ ಹಮ್ಮಿಕೊಳ್ಳಬಹುದು' ಎಂಬ ಮುಕ್ತ ಆಮಂತ್ರಣ ನೀಡಿದೆ. ಅದೇ ರೀತಿ ಎರಡು ಬಾರಿ ಕಾಮ್ ವಾರ್ಷಿಕೋತ್ಸವ ಏರ್ಪಟ್ಟ ಸೂರಶೆಟ್ಟಿಕೊಪ್ಪದ `ಗ್ರಾಮಚೇತನ'ದಿಂದಲೂ ಇದೇ ರೀತಿಯ ಭರವಸೆ. ಹೆಚ್.ಡಿ. ಕೋಟೆ ತಾಲೂಕಿನ ಹೊಸಹಳ್ಳಿಯಲ್ಲಿ ಎಂಟನೇ ವಾರ್ಷಿಕೋತ್ಸವ ಪೂರೈಸಿ ವಾಪಸಾಗುವ ವೇಳೆ ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ನ ಅಧ್ಯಕ್ಷ ಡಾ. ಆರ್. ಬಾಲಸುಬ್ರಹ್ಮಣ್ಯಂ ಪ್ರೀತಿಯಿಂದ ಹೇಳಿದ ಮಾತು: `ಮುಂದಿನ ವರ್ಷವೂ ನಮ್ಮಲ್ಲಿಗೇ ಬನ್ನಿ.' ತುಮಕೂರು ಜಿಲ್ಲೆ ನಂದಿಹಳ್ಳಿಯ ನೀಲಕಂಠಮೂರ್ತಿ-ಅನಿತಾ ದಂಪತಿಯ ಆಹ್ವಾನ ನಾಲ್ಕೈದು ವರ್ಷಗಳಿಂದ ಹಾಗೆಯೇ ಇದೆ.

ಅಭ್ಯರ್ಥಿಗಳಿಂದ ನಾವು ಪಡೆಯುವ ಶುಲ್ಕದಿಂದ ತರಬೇತಿಯ ಇತರ ವೆಚ್ಚಗಳನ್ನು ಸರಿದೂಗಿಸಲಾಗುತ್ತಿದೆ. ಕೃಷಿ ಪತ್ರಿಕೋದ್ಯಮ ಪ್ರಶಸ್ತಿ, ಕಾಮ್ ನ್ಯೂಸ್ ಹಾಗೂ ಪುಸ್ತಕ ಪ್ರಕಟಣೆ ಕೂಡ ಆತ್ಮೀಯರ ಪ್ರಾಯೋಜಕತ್ವದಿಂದ ನಿರಾತಂಕವಾಗಿ ಮುಂದುವರಿಯುತ್ತಿವೆ. ಈ ತನಕ ನಮಗೆ ಬಹುದೊಡ್ಡ ಬೆಂಬಲ ದೊರೆತಿರುವುದು ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ನಿನಿಂದ. ಇದರ ನೆರವಿನಿಂದ ನಾವು ನಾಲ್ಕೈದು ಪುಸ್ತಕಗಳನ್ನು ಪ್ರಕಟಿಸುವುದರ ಜತೆಗೆ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ ಸರಣಿಯನ್ನೂ ಹಮ್ಮಿಕೊಂಡಿದ್ದೆವು. ಆ ಅವಧಿಯಲ್ಲೆ ಕೇಂದ್ರವನ್ನು ಟ್ರಸ್ಟ್ ಕಾಯಿದೆಯಡಿ ನೋಂದಣಿಮಾಡಿ (2007) ಕೃಷಿ ಮಾಧ್ಯಮ ಕೇಂದ್ರ ಎಂದು ಮರುನಾಮಕರಣ ಮಾಡಿದೆವು.

ನಾವು ಸಂಪಾದಿಸಿರುವ ಅಮೂಲ್ಯ ಆಸ್ತಿಯೆಂದರೆ ನಮ್ಮ ಸಂಪನ್ಮೂಲ ವ್ಯಕ್ತಿಗಳು. ಇವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ತಂತಮ್ಮ ಕ್ಷೇತ್ರಗಳಲ್ಲಿ ಗಂಭೀರವಾಗಿ ತೊಡಗಿಕೊಂಡಿರುವ ಇವರೆಲ್ಲರೂ ಕಾಮ್ ಕರೆಗೆ ಇಲ್ಲ ಎಂದಿದ್ದಿಲ್ಲ. ಪ್ರಾಥಮಿಕ ತರಬೇತಿಯ ಮೂರ್ನಾಲ್ಕು ದಿನ ಅಭ್ಯರ್ಥಿಗಳ ಜತೆಗೇ ಇದ್ದು ಮಾರ್ಗದರ್ಶನ ನೀಡುವ ಇವರು ವರ್ಷದುದ್ದಕ್ಕೂ ಅಭ್ಯರ್ಥಿಗಳ ಸಂದೇಹ ನಿವಾರಣೆಗೆ ಸಿದ್ಧ. ಕೇಂದ್ರಕ್ಕೂ ಇವರ ಸಲಹೆ-ಸಹಕಾರ ಸದಾ ಲಭ್ಯ. ಎಲ್ಲ ಅರ್ಥದಲ್ಲಿ ಕೇಂದ್ರಕ್ಕೆ ಇವರೇ ಆಧಾರ ಸ್ಥಂಭಗಳು; ದಾರಿದೀಪಗಳು.

ನಾಡಿನ ಮಾಧ್ಯಮ ರಂಗ ಕೂಡ ಕಾಮ್ ಕೆಲಸಗಳಿಗೆ ಬೆಂಬಲ ನೀಡುತ್ತಿದೆ. ಅಭ್ಯರ್ಥಿಗಳು ಹಾಗೂ ಫೆಲೋಗಳ ಲೇಖನಗಳನ್ನು ಪ್ರಕಟಿಸುವಲ್ಲಿ ಪತ್ರಿಕೆಗಳು ಮುತುವರ್ಜಿ ವಹಿಸುತ್ತಿವೆ. ತರಬೇತಿ ಹಾಗೂ ಪ್ರಶಸ್ತಿ ಕುರಿತು ನಾವು ನೀಡುವ ಪ್ರಕಟಣೆಗಳನ್ನು ಎಲ್ಲ ಪತ್ರಿಕೆಗಳು ಕಾಳಜಿಯಿಂದ ಪ್ರಕಟಿಸುತ್ತಿವೆ. ನಮ್ಮ ಪುಸ್ತಕಗಳನ್ನೂ ವಿವಿಧ ಪತ್ರಿಕೆಗಳು ಪ್ರಮುಖವಾಗಿ ಪರಿಚಯಿಸುತ್ತಿವೆ. ಅಡಿಕೆ ಪತ್ರಿಕೆ ಕಾಮ್ ಬಳಗದವರಿಗೆ ವಿಶೇಷ ಉತ್ತೇಜನ ನೀಡುತ್ತಿದೆ. ಅವರ ಲೇಖನಗಳು ಪ್ರಕಟಗೊಂಡಾಗ ಅವರ ಹೆಸರಿನ ಜತೆಯಲ್ಲಿ ಕಾಮ್ ವಿದ್ಯಾರ್ಥಿ ಅಥವಾ ಕಾಮ್ ಫೆಲೋ ಎಂದು ನಮೂದಿಸುವುದಲ್ಲದೆ ಪ್ರತಿ ವರ್ಷ ಕಾಮ್ ಬಳಗದವರು ಪತ್ರಿಕೆಗೆ ಬರೆದ ಹತ್ತು ಉತ್ತಮ ಲೇಖನಗಳಿಗೆ ಬಹುಮಾನವನ್ನೂ ಕೊಟ್ಟು ಪ್ರೋತ್ಸಾಹಿಸುತ್ತಿದೆ.

ಬರವಣಿಗೆಯ ಪರಾಮರ್ಶೆ

ಕಾಮ್ ಫೆಲೋಗಳೂ ಕೇಂದ್ರದ ದೊಡ್ಡ ಆಸ್ತಿ. ಫೆಲೋಗಳ ಪುಸ್ತಕಗಳು ಪ್ರಕಟಗೊಂಡಿರುವುದು, ಅವರು ಪತ್ರಿಕೋದ್ಯಮ ಕ್ಷೇತ್ರದ ವಿವಿಧ ಪ್ರಶಸ್ತಿಗಳಿಗೆ ಭಾಜರಾಗಿರುವುದು, ಅವರು ಕೃಷಿಕಪರ ತುಡಿತದೊಂದಿಗೆ ಬೇರೆಬೇರೆ ಮಾಧ್ಯಮಗಳಲ್ಲಿ ಕೆಲಸಮಾಡುತ್ತಿರುವುದು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಅನೇಕರು ಕೇಂದ್ರದ ಕೆಲಸಕಾರ್ಯಗಳಲ್ಲಿ ಹೆಗಲುಕೊಡುತ್ತಿರುವುದು ಸಂತಸದ ವಿಚಾರ. ಫೆಲೋಗಳೂ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆಂದರೆ ಇದಕ್ಕಿಂತ ಹೆಚ್ಚಿನ ಹಿರಿಮೆ ಇನ್ನೇನಿದೆ? ಈಚೆಗೆ ದೇವವೃಂದದಲ್ಲಿ ನಡೆದ ಕೇಂದ್ರದ ದಶಮಾನೋತ್ಸವದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದವರೂ ನಮ್ಮ ಫೆಲೋಗಳೇ!!

ಕೇಂದ್ರಕ್ಕೆ ಈ ವರೆಗೆ ವಿವಿಧ ರೀತಿಯಲ್ಲಿ ನೆರವಾಗಿರುವ ಎಲ್ಲರನ್ನೂ ನೆನೆಯುತ್ತ 11ನೇ ವರ್ಷದಲ್ಲಿ ಮುಂದುವರಿಯುತ್ತಿದ್ದೇವೆ.

 
  ಕೃಷಿ ಮಾಧ್ಯಮ ಕೇಂದ್ರದ ವಾರ್ಷಿಕೋತ್ಸವಗಳು
 
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media