Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಸಂವೇದನಾಶೀಲ ಸಮಾಜ ಇಂದಿನ ಅಗತ್ಯ

'ನಾವೀಗ ರೈತರ ಆತ್ಮಹತ್ಯೆ, ಹಳ್ಳಿಯಿಂದ ನಗರಕ್ಕೆ ವಲಸೆ, ವಿದೇಶಿ ಖಾಸಗಿ ಕಂಪನಿಗಳ ಹಾವಳಿ ಹಾಗೂ ಭೂಮಿ ಬಿಸಿಯಾಗುವಂತಹ ನಾಲ್ಕು ಮಹಾ ವಿಪ್ಲವಗಳನ್ನು ಎದುರಿಸುತ್ತಿದ್ದು, ಇವುಗಳ ಪರಿಣಾಮವನ್ನು ಸಮಗ್ರವಾಗಿ ಅರಿತು ವಿಶ್ಲೇಷಿಸಬಲ್ಲ ಸಂವೇದನಾಶೀಲ ಬರಹಗಾರರು ಹಾಗೂ ಮಾಧ್ಯಮ ನೀಡುವ ಮಾಹಿತಿಗೆ ಸೂಕ್ತವಾಗಿ ಸ್ಪಂದಿಸುವ ಸಮಾಜ ಇಂದಿನ ಅಗತ್ಯ’ ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅಭಿಪ್ರಾಯ ಪಟ್ಟಿದ್ದಾರೆ.
ಅವರು 13.1.2013ರಂದು ಬೆಂಗಳೂರು ನಗರದ ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕೃಷಿ ಮಾಧ್ಯಮ ಕೇಂದ್ರ ಆಯೋಜಿಸಿದ್ದ ' ಸುಸ್ಥಿರ ಕೃಷಿಗೆ ಹತ್ತಾರು ಹಾದಿ’ ಹಾಗೂ 'ಡೈರಿ ಡಾಕ್ಟರ್, ಹೋರಿ ಮಾಸ್ಟರ್’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
'ವಿಪ್ಲವಗಳ ದುಷ್ಪರಿಣಾಮವನ್ನು ಸಮರ್ಥವಾಗಿ ಎದುರಿಸಲು ಕೃಷಿಕರು, ಮಾಧ್ಯಮ, ಶೈಕ್ಷಣಿಕ ವಲಯದ ತಜ್ಞರು ಹಾಗೂ ಸಮಾಜ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಾಗಿದೆ’ ಎಂದು ಅವರು ಹೇಳಿದರು.
ಕೃಷಿಕ ಬೆಂಗಳಿ ವೆಂಕಟೇಶ ಮಾತನಾಡಿ ’ಕೃಷಿಯಿಂದ ಸಿಗುವ ನೆಮ್ಮದಿ ಬೇರೆ ಯಾವ ವೃತ್ತಿಯಲ್ಲೂ ದೊರೆಯಲಾರದು. ವ್ಯವಸಾಯವೆಂದರೆ ಕಷ್ಟ ಎನ್ನುತ್ತಾರೆ. ಸರಿಯಾದ ಯೋಜನೆ ಹಾಗೂ ಕಠಿಣ ಪರಿಶ್ರಮದಿಂದ ಇದನ್ನೂ ಲಾಭದಾಯಕ ವೃತ್ತಿಯನ್ನಾಗಿಸಬಹುದು.’ ಎಂದು ಹೇಳಿದರು. ಬೆಂಗಳಿ ವೆಂಕಟೇಶ ಅವರು ಕೈಗೊಂಡ ಸಾವಯವ ಕೃಷಿಯ ಬಗ್ಗೆ ಬೆಳಕು ಚೆಲ್ಲುವ, ಕೃಷಿ ಮಾಧ್ಯಮ ಕೇಂದ್ರದ 18ನೇ ಪ್ರಕಟಣೆ 'ಸುಸ್ಥಿರ ಕೃಷಿಗೆ ಹತ್ತಾರು ಹಾದಿ’ ಹೊತ್ತಿಗೆಯನ್ನು ಬೆಂಗಳೂರು ಪಶುವೈದ್ಯಕೀಯ ಕಾಲೇಜಿನ ಡೀನ್ ಡಾ. ಎಸ್. ಯತಿರಾಜ್ ಬಿಡುಗಡೆಗೊಳಿಸಿ ಮಾತನಾಡುತ್ತಾ ‘ಕೇವಲ ಒಂದೂಮುಕ್ಕಾಲು ಎಕರೆ ಭೂಮಿಯಲ್ಲಿ ರಾಸಾಯನಿಕ ರಹಿತ ಕೃಷಿ ಕೈಗೊಂಡು ನೆಮ್ಮದಿಯ ಜೀವನ ನಡೆಸುತ್ತಿರುವುದು ನಿಜಕ್ಕೂ ಅತ್ಯುತ್ತಮ ಸಾಧನೆ’ ಎಂದರು.
ಅಭಿವೃದ್ಧಿ ಪತ್ರಕರ್ತ ಶ್ರೀ ಪಡ್ರೆ 'ಡೈರಿ ಡಾಕ್ಟರ್, ಹೋರಿ ಮಾಸ್ಟರ್’ ಪುಸ್ತಕ ಬಿಡುಗಡೆ ಮಾಡಿ 'ಪಶುವೈದ್ಯಕೀಯ ವೃತ್ತಿಯನ್ನು ವಿಭಿನ್ನವಾಗಿ ಚಿತ್ರಿಸಿದ ಈ ಪುಸ್ತಕ ಪಶುವೈದ್ಯ ಲೋಕದ ಪೇಚು, ರೈತವರ್ಗದ ಕ್ರೌರ್ಯ, ಹಾಸ್ಯಮಯ, ಹಾಸ್ಯಾಸ್ಪದ ಘಟನೆಗಳನ್ನು ಓದುಗರಿಗೆ ಮುದನೀಡುವ ಶೈಲಿಯಲ್ಲಿ ನಿರೂಪಿಸಲಾಗಿದೆ’ ಎಂದು ಹೇಳಿದರು. ಭೂಮಿ ಬುಕ್ಸ್ ಪ್ರಕಟಿಸಿರುವ ಈ ಪುಸ್ತಕ ಪಶುವೈದ್ಯ ಜೇಮ್ಸ್ ಹೆರಿಯಟ್ ಅತ್ಮ ಕಥೆಯ ವಿವಿಧ ಪ್ರಸಂಗಗಳ ಕನ್ನಡ ರೂಪಾಂತರ.
ಎರಡೂ ಪುಸ್ತಕಗಳ ಲೇಖಕ ಡಾ. ಗಣೆಶ ಎಂ. ನೀಲೇಸರ ಪುಸ್ತಕದ ವಸ್ತು, ಬರವಣಿಗೆಯ ಕುರಿತು ತಮ್ಮ ಅನುಭವ ಹಂಚಿಕೊಂಡರು. ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು ಪ್ರಸ್ತಾವನಾ ಭಾಷಣ ಮಾಡಿ ಸಣ್ಣ ಹಿಡುವಳಿಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿರುವ ಕೃಷಿಕರ ಅನುಭವಗಳನ್ನು ದಾಖಲಿಸುವ ಕೇಂದ್ರದ ಪುಸ್ತಕ ಸರಣಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇಂತಹ ಪ್ರಯತ್ನಗಳಿಂದ ವ್ಯವಸಾಯ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಕೃಷಿ ಮಾಧ್ಯಮ ಕೇಂದ್ರದಿಂದ ಕೃಷಿ ಹಾಗೂ ಗ್ರಾಮೀಣ ಪತ್ರಿಕೋದ್ಯಮ ತರಬೇತಿ ಪಡೆದ ಕಾಮ್ ಫೆಲೋಗಳಿಗೆ ಒಂದು ದಿನದ ಪುನರ್ಮನನ ಶಿಬಿರವನ್ನುಆಯೋಜಿಸಲಾಗಿತ್ತು. ನಾಡಿನ ಹೆಸರಾಂತ ಅಭಿವೃದ್ಧಿ ಬರಹಗಾರರಾದ ನಾಗೇಶ ಹೆಗಡೆ, ಶ್ರೀ ಪಡ್ರೆ, ಹೆಚ್.ಎನ್. ಆನಂದ, ಗಾಣಧಾಳು ಶ್ರೀಕಂಠ, ಮಲ್ಲಿಕಾರ್ಜುನ ಹೊಸಪಾಳ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಶಿಬಿರದಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆಗಳ ಕೃಷಿ ಪುರವಣಿ ಸಂಪಾದಕರೊಂದಿಗೆ ಸಂವಾದವನ್ನೂ ಆಯೋಜಿಸಲಾಗಿತ್ತು.

 

 

 
ಇದುವರೆಗಿನ ಕಾಮ್ ಫೆಲೋಗಳು ಕೃಷಿ ಮಾಧ್ಯಮ ಕೇಂದ್ರದ ವಾರ್ಷಿಕೋತ್ಸವಗಳು
 
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media