+
Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಕೃಷಿ ಬದುಕಿನ ತಲ್ಲಣಗಳನ್ನು ದಾಖಲಿಸಿ - ಕೃಷ್ಣ ಪ್ರಸಾದ್

ಕೃಷಿ-ಗ್ರಾಮೀಣ-ಅಭಿವೃದ್ಧಿ ಪತ್ರಿಕೋದ್ಯಮ ತರಬೇತಿ ಉದ್ಘಾಟನಾ ಅವಧಿಯಲ್ಲಿ ಪಾಲ್ಗೊಂಡವರ ಆಶಯ, ಅಭಿಪ್ರಾಯ, ಹಾರೈಕೆಗಳು ಇಲ್ಲಿವೆ:

ಸಂಪನ್ಮೂಲ ವ್ಯಕ್ತಿಗಳ ಮಾತು:

ಶುಭಾಶಯಗಳು

- ಎಚ್.ಎನ್. ಆನಂದ

ಮೊದಲೆಲ್ಲ ಕೃಷಿ ಪತ್ರಿಕೋದ್ಯಮದಲ್ಲಿ ಅಗತ್ಯವಿರುತ್ತಿದ್ದ ಹತ್ಯಾರುಗಳೆಂದರೆ ಪೆನ್ನು, ಹಾಳೆ, ಕ್ಯಾಮರಾ ಮತ್ತು ಫೋನ್. ಮಾಹಿತಿ ಮೂಲಗಳೆಂದರೆ ಕೃಷಿಕರು, ಅಧಿಕಾರಿಗಳು, ವಿಜ್ಞಾನಿಗಳು, ಗ್ರಂಥಾಲಯದಲ್ಲಿನ ಪುಸ್ತಕಗಳು ಹಾಗೂ ಕೆಲವರ ಬಳಿ ಇರುತ್ತಿದ್ದ ಲೇಖನಗಳ ಸಂಗ್ರಹ. ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯಾಗುತ್ತಿದ್ದಂತೆ ಪತ್ರಿಕೋದ್ಯಮದ ಹತ್ಯಾರುಗಳೆಲ್ಲ ಕಂಪ್ಯೂಟರ್ ಮತ್ತು ಮೊಬೈಲ್‌ಗೆ ಬದಲಾಗಿಬಿಟ್ಟಿವೆ. ಮೊಬೈಲ್ ಸರ್ವಶಕ್ತ ಟೂಲ್ ಆಗಿ ರೂಪುಗೊಂಡಿದೆ. ಅದರೊಳಗೆ ಹಲವಾರು ಮಿನಿ ಟೂಲುಗಳು ಅಡಗಿ ಕೂತಿವೆ. ಸಾಂಪ್ರದಾಯಿಕ ಮಾಹಿತಿ ಮೂಲಗಳ ಜತೆಗೆ ಆಕರ ರೂಪದಲ್ಲಿ ಅಸಂಖ್ಯ ಜಾಲತಾಣಗಳು ಅಂತರ್ಜಾಲದಲ್ಲಿವೆ. ಇವುಗಳ ಬಳಕೆ ಬಗ್ಗೆ ನಾವು ತಿಳಿದುಕೊಂಡರೆ ಕೃಷಿ ಪತ್ರಿಕೋದ್ಯಮದಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸುವುದು ಸಾಧ್ಯ. ಈ ಕೋರ್ಸಿನಲ್ಲಿ ಗುರು-ಶಿಷ್ಯ ಭೇದವಿಲ್ಲದೆ ನಾವೆಲ್ಲರೂ ಒಟ್ಟಿಗೆ ಸೇರಿ ತಂತ್ರಜ್ಞಾನದ ವಿಷಯವನ್ನು ಕಲಿಯುತ್ತ ಸಾಗೋಣ. ನಿಮಗೆಲ್ಲರಿಗೂ ಶುಭಾಶಯಗಳು.

- ಡಾ. ಮೋಹನ್ ತಲಕಾಲುಕೊಪ್ಪ (ದನಿ ಸಂದೇಶದಲ್ಲಿ)

ನಾನು ಸಣ್ಣವನಿದ್ದಾಗ ಗಂಗಡ್ಲೆ ಅಂತ ಒಂದು ಭತ್ತ ಬೆಳೀತಾ ಇದ್ವಿ. ಅದ್ಭುತವಾದ ಸುವಾಸನೆ ಇರತಕ್ಕಂತಹ ದೇಸಿ ತಳಿ. ಕ್ರಮೇಣ ಕೆಲವು ವರ್ಷಗಳಲ್ಲಿ ಅದು ನಮ್ಮ ಗದ್ದೆಯಿಂದ, ನಮ್ಮ ಊರಿನಿಂದ, ನಮ್ಮ ಸುತ್ತಮುತ್ತಲ ಪ್ರದೇಶದಿಂದಲೇ ಕಣ್ಮರೆಯಾಯ್ತು. ಅದಾಗಿ ನಾವು ಎಷ್ಟೋ ಕಡೆ ಹುಡುಕಾಡಿದ್ವಿ, ಸಿಕ್ಲಿಲ್ಲ. 1998ರಿಂದೀಚೆಗೆ ನಾವು ದೇಸಿ ತಳಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ಮೇಲೆ ಕೂಡ ಹಲವಾರು ವರ್ಷ ಅದಕ್ಕಾಗಿ ಹುಡುಕಾಡಿದ್ವಿ, ಸಿಕ್ಕಿರ್ಲಿಲ್ಲ. ಕೊನೆಯ ಪ್ರಯತ್ನವಾಗಿ ವಿಜಯ ಕರ್ನಾಟಕದ ಕಣಜ ಅಂಕಣಕ್ಕೆ ಸಣ್ಣದೊಂದು ಪತ್ರ ಬರೆದೆ. ‘ಹುಡುಕಿಕೊಡಿ ಗಂಗಡ್ಲೆ’ ಅಂತ ಅದರ ಶೀರ್ಷಿಕೆ. ಅದರಲ್ಲಿ ಆ ತಳಿಯ ಗುಣವಿಶೇಷಗಳು ಹಾಗೂ ನನ್ನ ವಿಳಾಸ ಇತ್ತು. ಒಂದು ವಾರದ ವರೆಗೂ ಏನೂ ಪ್ರತಿಕ್ರಿಯೆ ಬರ್ಲಿಲ್ಲ. ಒಂದು ವಾರದ ನಂತರ ಒಂದು ಪತ್ರ ಬಂತು. ಅದು ಮೈಸೂರಿಂದ. ಅದರಲ್ಲಿ ಏನಿತ್ತು ಅಂದ್ರೆ ‘ನೀವು ತುಂಬ ಒಳ್ಳೆ ಕೆಲ್ಸ ಮಾಡ್ತಾ ಇದ್ದೀರಿ. ನಾವು ಕೂಡ ಅದನ್ನು ಬೆಳೀತಾ ಇದ್ವಿ. ನಿಮಗೆ ಸಿಕ್ರೆ ನಮಗೂ ಕೊಡಿ.’ ಅದಾದ ಒಂದು ವಾರದ ನಂತರ ಮತ್ತೊಂದು ಪತ್ರ ಬಂತು. ನಾಗರಾಜ ರಾವ್ ಅಂತ ಹೇಳಿ. ಅವರು ‘ನಮ್ಮಲ್ಲಿ ಈಗಲೂ ಕೂಡ ಇದೆ. ನಮ್ಮ ಗದ್ದೆಯಲ್ಲಿ ಹಾಕಿದ್ದೇವೆ. ನೀವು ಬಂದ್ರೆ ಬೀಜ ಸಿಗುತ್ತೆ’ ಅಂತ ಬರೆದಿದ್ರು. ಯಾಕೆ ಈ ಮಾತು ಹೇಳಿದೆ ಅಂತಂದ್ರೆ ಪುಟ್ಟ ಕೃಷಿ ಬರವಣಿಗೆಯಿಂದ ನಾವು ಅರ್ಥಪೂರ್ಣವಾದುದನ್ನು ಸಾಧಿಸಬಹುದು. ನೀವೆಲ್ಲ 28 ಮಂದಿ ಕೈಜೋಡಿಸಿದರೆ ನಾವು ಕೃಷಿ ಪತ್ರಿಕೋದ್ಯಮಕ್ಕೆ ಕಿರು ಕಾಣಿಕೆಯನ್ನು ಸಲ್ಲಿಸಬಹುದು.

- ಮಲ್ಲಿಕಾರ್ಜುನ ಹೊಸಪಾಳ್ಯ (ದನಿ ಸಂದೇಶದಲ್ಲಿ)

ಇಂತಹ ವಿಶಿಷ್ಟ ತರಬೇತಿ ಎಲ್ಲೂ ಸಿಗಲಾರದು. ಇಂದು ಕೃಷಿ ಪುರವಣಿಗಳ ಜತೆಗೆ ಇತರ ಪುರವಣಿಗಳಲ್ಲೂ ಕೃಷಿಗೆ ಸಾಕಷ್ಟು ಜಾಗ ಸಿಗ್ತಾ ಇದೆ. ಜತೆಗೆ ನಾವೇ ಪ್ರಕಟಿಸಬಹುದಾದ ಬ್ಲಾಗ್‌ಗಳು, ವೆಬ್ ಪತ್ರಿಕೆಗಳೂ ಇವೆ. ಫೇಸ್‌ಬುಕ್ ಕೂಡ ಇದೆ. ಇಷ್ಟೆಲ್ಲ ಅವಕಾಶಗಳ ಮಧ್ಯೆ ನಾವು ಗಮನಿಸಬೇಕಾದ ಸಂಗತಿ ಒಂದಿದೆ. ಈ ಲೇಖನ ಬರೆದರೆ ಏನಾಗಬಹುದು ಎಂಬ ಮಾತನ್ನು ನಮಗೆ ನಾವೇ ಕೇಳಿಕೊಳ್ಳುವುದು. ಅದರ ಬಳಿಕವೇ ನಾವು ಲೇಖನ ಟೈಪ್ ಮಾಡಲು ಶುರು ಮಾಡೋಣ.

- ಆನಂದತೀರ್ಥ ಪ್ಯಾಟಿ (ದನಿ ಸಂದೇಶದಲ್ಲಿ)

ಕೃಷಿ ಪತ್ರಿಕೋದ್ಯಮದಲ್ಲಿ ಹೆಜ್ಜೆಯೂರಲು ಸಿದ್ಧರಾದ ಕಾಮ್ ಕೋರ್ಸ್‌ನ ಅಭ್ಯರ್ಥಿಗಳಿಗೆ ಶುಭಾಶಯಗಳು. ಕೃಷಿ ಬದುಕಿನ ತಲ್ಲಣಗಳನ್ನು, ಎಲೆಮರೆಯ ಸಾಧಕರನ್ನು, ಹಳ್ಳಿಗಾಡಿನ ಹಾಡುಪಾಡನ್ನು ನಿಮ್ಮ ಲೇಖನಗಳ ಮೂಲಕ ಹಿಡಿದಿಡುವ ಮಹತ್ವದ ಕಾರ್ಯಕ್ಕೆ ಮುಂದಾಗಿ. ಮಗುವಿನ ಮುಗ್ಧತೆ, ಕಲಿಯುವ ತವಕ ನಿಮ್ಮಲ್ಲಿರಲಿ. ಮತ್ತೆಮತ್ತೆ ತಿದ್ದಿ ತೀಡಿ ಸುಂದರ ಲೇಖನ ರೂಪಿಸುವ ತಾಳ್ಮೆ ನಿಮಗೆ ಬರಲಿ. ನಾವು ನಿಮ್ಮ ಜೊತೆಗಿರುತ್ತೇವೆ. ನಿಮ್ಮ ಸಾಧನೆ ನೋಡಲು ಕಾಯುತ್ತಿದ್ದೇವೆ. ಶುಭವಾಗಲಿ.

- ಜಿ. ಕೃಷ್ಣ ಪ್ರಸಾದ್

ಆತ್ಮೀಯರೇ, ಕೃಷಿ ಪತ್ರಿಕೋದ್ಯಮ ತರಬೇತಿ ಶುಭಚಾಲನೆಗೊಂಡಿದೆ. ಕನ್ನಾಡಿನಲ್ಲಿ ಕೃಷಿಕರ ಕೈಗೆ ಲೇಖನಿ ನೀಡಿದ ಹಿರಿಮೆ ಅಡಿಕೆ ಪತ್ರಿಕೆಯದ್ದು. ಈ ಹಿರಿಮೆಯ ನೆರಳಿನಡಿ ನೂರಾರು ಕಾಮ್ ಫೆಲೋಗಳು ರೂಪುಗೊಂಡಿದ್ದಾರೆ. ತಾವೆಲ್ಲಾ ಇಂದು ಮೊದಲ ಹೆಜ್ಜೆ ಊರಿದ್ದೀರಿ. ಕೈತಾಂಗು ಆಗಿ ಹಿರಿಯ ಗುರುಗಳಿದ್ದಾರೆ. ಶಿಬಿರದ ಕೊನೆಗೆ ತಾವೆಲ್ಲಾ ಕೈತಾಂಗುಗಳಾಗಬೇಕು. ಕಾಮ್ ಫೆಲೋಗಳಾಗಬೇಕು. ಈ ಮೂಲಕ ಕೃಷಿ ಬರಹಗಳಿಗೆ ಮಾನ ಬರುವಂತಾದರೆ ಕಲಿಸಿದ ಗುರುಗಳಿಗೂ, ಕಾಮ್ ಸಂಸ್ಥೆಗೂ ತಾವು ಮಾನ-ಸಂಮಾನ ಸಲ್ಲಿಸಿದಂತಾಗುತ್ತದೆ. ಈ ತರಬೇತಿಯ ಹಿಂದೆ ಮತ್ತು ತಮ್ಮ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಸಮಯವನ್ನು ವಿನಿಯೋಗಿಸುವ ಸಂಪನ್ಮೂಲ ವ್ಯಕ್ತಿಗಳಿದ್ದಾರೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಇಂದು ಊರಿದ ಸಣ್ಣ ಹೆಜ್ಜೆಯು ನಾಳೆಯಿಂದ ಹಿರಿದಾಗಲಿ ಎಂದು ಶುಭ ಹಾರೈಸುತ್ತಿದ್ದೇನೆ

- ನಾ. ಕಾರಂತ

ಕಾರ್ಯಕ್ರಮದಲ್ಲಿ ವೀಕ್ಷಕರಾಗಿ ಪಾಲ್ಗೊಂಡವರು - ಡಾ. ಬಿ. ಕೃಷ್ಣಾನಂದ ಹೆಗ್ಡೆ, ಎಸ್.ಆರ್. ವಿಜಯಶಂಕರ, ಅಬ್ದುಲ್ ರಶೀದ್, ಡಾ. ಪ್ರಮೋದ್ ಕುಮಾರ್ ಜೇನಾ, ಎನ್.ಎಸ್. ಶ್ರೀಕಾಂತ, ಸವಿತಾ ಶಾಂತಪ್ರಿಯ, ಇಂದಿರಾ ಆಚಾರ್ಯ ಹಾಗೂ ಕೆ.ಜಿ. ಸುಧೀಂದ್ರ.

ಇಂತಹ ಒಂದು ಕೋರ್ಸ್ ನನಗೆ ತಿಳಿದಂತೆ ಭಾರತದಲ್ಲಿ ಪ್ರಥಮ. ನಗರಗಳ ಬೆಳವಣಿಗೆ ಹೆಚ್ಚಾಗುತ್ತಿರುವ ಕಾಲದಲ್ಲಿ ಶ್ರೀ ಪಡ್ರೆ ಅವರು ಮೌಲ್ಯಯುತ ಮಾತುಗಳನ್ನು ಹೇಳಿದ್ದಾರೆ. ನಿಮ್ಮ ಕಲಿಕೆ ಯಶಸ್ವಿಯಾಗಲಿ. ಭಾರತದ ಬಹುತ್ವವನ್ನು ಉಳಿಸಲು ನಿಮ್ಮ ಕೊಡುಗೆ ಸಲ್ಲಲಿ. ನಮ್ಮ ಬಹುತ್ವದ ಶಕ್ತಿ ನಮ್ಮ ಕೃಷಿ ಮೂಲದಿಂದ ಬಂದುದು. ಅದು ಉಳಿಯಲು ನಿಮ್ಮೆಲ್ಲರ ಕೊಡುಗೆ ಗಣನೀಯವಾಗಿ ಸಲ್ಲುವಂತೆ ಆಗಲಿ. ಶುಭಾಶಯಗಳು.

- ಎಸ್.ಆರ್. ವಿಜಯಶಂಕರ

ನಮಸ್ಕಾರ. ಇದು ದೊಡ್ಡ ಕನಸು ಸಾಕಾರವಾಗುವ ಲಕ್ಷಣ

- ಡಾ. ಬಿ.ಕೆ. ಹೆಗ್ಡೆ

ಕೃಷಿ-ಗ್ರಾಮೀಣ-ಅಭಿವೃದ್ಧಿಗಳ ಕುರಿತಾದ ಆಶಯ ಮತ್ತು ಕಳಕಳಿಯೊಡನೆ ಆರೋಗ್ಯಪೂರ್ಣ ಸಮಾಜವೊಂದರ ಬೀಜಗಳನ್ನು ಬಿತ್ತುವ ಕೈಗಳನ್ನು ಗುರುತಿಸುವ ಮತ್ತು ಬಲಪಡಿಸುವ ಕಾಮ್ ಪತ್ರಿಕೋದ್ಯಮ ತರಬೇತಿಯ ಹೊಸ ಆವೃತ್ತಿಯ ಕುರಿತು ಮನಸ್ಸು ತುಂಬಿಬರುತ್ತಿದೆ. ಆಶಯ, ಉತ್ಸಾಹ ಮತ್ತು ತಂತ್ರಜ್ಞಾನದ ಬಳಕೆಯ ಹೊಸ ಆಕರ್ಷಕ ಎರಕವೊಂದು ಇಲ್ಲಿ ಸಿದ್ಧವಾಗುತ್ತಿದೆ. ‘ಇದ್ದಲ್ಲಿ ಇದ್ಹಾಂಗ’ ಗಮನಿಸಲು ಹಾಗೂ ಭಾಗವಹಿಸಲು ಸುಲಲಿತವಾದ ಈ ವೇದಿಕೆಯ ಮೂಲಕ, ಮತ್ತು ಅದನ್ನು ಬಳಸಲು ರೂಪುಗೊಂಡಿರುವ ಹಲವು ಶಿಸ್ತುಗಳ ಮೂಲಕ ಈ ಶಿಬಿರ ಎಲ್ಲ ಅಭ್ಯರ್ಥಿಗಳಿಗೂ ಒಂದು ಅತ್ಯುಪಯುಕ್ತ ಅಂಗಣ ಆಗುತ್ತದೆ ಎಂಬುದು ಈಗಲೇ ತೋರುವಂತಿದೆ. ಈ ಹೊಸ ನರಮಂಡಲ ನಮಗೆಲ್ಲ ಉಪಕಾರಿಯಾಗುವಂತೆಯೇ ಇಂತಹ ಅನೇಕ ಜನಪರ ಸಾಹಸಗಳಿಗೆ ಮಾದರಿಯಾಗಲಿ ಎಂಬ ಹಾರೈಕೆ ನನ್ನದು.

- ಎನ್.ಎಸ್. ಶ್ರೀಕಾಂತ

ಪತ್ರಿಕೋದ್ಯಮ ರಂಗದಲ್ಲಿ ಇದೊಂದು ಕ್ರಾಂತಿಕಾರಕ ಕಾರ್ಯಕ್ರಮ. ಇದರಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಅದೃಷ್ಟವಂತರು.

- ಡಾ. ಪ್ರಮೋದ್ ಕುಮಾರ್ ಜೇನಾ

ಬಹಳ ಒಳ್ಳೆಯ ಪ್ರಯತ್ನ. ಮುಂದೆ ನಾವೆಲ್ಲರೂ ಹುಲಿಯನ್ನು ಹುಲಿಯ ಗುಹೆಯಲ್ಲೇ ಭೇಟಿ ಮಾಡೋಣ!

- ಅಬ್ದುಲ್ ರಷೀದ್

ಒಳ್ಳೆ ಕ್ಷಣ. ಒಂದು ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಹೆಮ್ಮೆಯೆನಿಸುತ್ತದೆ.

- ಸವಿತಾ ಶಾಂತಪ್ರಿಯ

ಹಳತು ಮತ್ತು ಹೊಸತರ ಸಮ್ಮಿಲನ. ಹೊಸ ಸಂವಹನ ತಂತ್ರಜ್ಞಾನದ ಬಳಕೆಯೊಂದಿಗೆ ಸಾಂಪ್ರದಾಯಿಕ ಕೃಷಿಯನ್ನು ಉಳಿಸುವ ಪ್ರಯತ್ನ. ಅಭಿನಂದನೆಗಳು.

- ಇಂದಿರಾ ಆಚಾರ್ಯ

ಸಂಪನ್ಮೂಲ ವ್ಯಕ್ತಿಗಳಾಗಿ ರೂಪುಗೊಂಡಿರುವ ಕಾಮ್ ಫೆಲೋಗಳ ಅನಿಸಿಕೆಗಳು:

ಹದಿನಾಲ್ಕು ವರ್ಷಗಳ ಹಿಂದೆ...ಶ್ರೀರಂಗದಲ್ಲಿನ ಕಲಿಕೆ ದಿನಗಳು.. ಶ್ರೀ ಪಡ್ರೆಯವರ ಅನ್ನದ ಬಟ್ಟಲಲ್ಲಿ ವಿಷ ಎಚ್ಚರಿಕೆ, ಅಡ್ಡೂರರ ಮೌನ ಆಲಿಕೆ ಪಾಠ, ಅನಿತಾರ ಬರವಣಿಗೆಯ ಅಚ್ಚುಕಟ್ಟುತನ, ಶಿವರಾಂ ಅವರ ಬರಹಗಾರನಿಗಿರಬೇಕಾದ ಬದ್ಧತೆ, ಹೂಸಪಾಳ್ಯರ ಕೃಷಿ ಬದುಕಿನ ಅವಲೋಕನ, ಪೂರ್ಣಪ್ರಜ್ಞರ ಕೃಷಿ ಛಾಯಾಗ್ರಹಣ... ಓಹ್! ಕಲಿತ ಆ ಕ್ಷಣಗಳು ಇಂದಿಗೂ ಹಚ್ಚ ಹಸಿರು. ಕಾಮ್ ವೇದಿಕೆ ಕೃಷಿ ಬರವಣಿಗೆಗೆ ಸ್ಫೂರ್ತಿಯ ಸೆಲೆ ಒಂದೆಡೆಯಾದರೆ, ಇನ್ನೊಂದೆಡೆ ಸಂಪನ್ಮೂಲ ವ್ಯಕ್ತಿಗಳ ವ್ಯಕ್ತಿತ್ವದ ಪ್ರಭಾವ ನನ್ನ ಮೇಲೆ ಅಪಾರ. ಶಿಸ್ತು, ಸಮಯ ಪರಿಪಾಲನೆ, ವಿಷಯ ಮನನ, ವಿಚಾರ ಸ್ಪಷ್ಟತೆ, ಧನಾತ್ಮಕ ನಿಲುವು, ಬರವಣಿಗೆಯ ಬದ್ಧತೆ, ಕ್ರಿಯಾತ್ಮಕ ಆಲೋಚನೆ...ಪಟ್ಟಿ ಮಾಡಿದಷ್ಟೂ ಮುಗಿಯದು. ಬರಲಿರುವ ದಿನಗಳಲ್ಲಿ ನಿಮ್ಮನುಭವಕ್ಕೆ ಇವು ದಕ್ಕುವುದು ಖಂಡಿತ. ಅಸೈನ್‌ಮೆಂಟ್ ಬರೆಯುತ್ತ ನಾವು ಮಾಡುವ ತಪ್ಪು; ತಿದ್ದುಪಡಿ ಕಂಡ ನಂತರ ತಲ್ಲಣ, ತಳಮಳ, ಅಧೀರತೆ ಒಂದು ಕ್ಷಣ ಅಷ್ಟೆ. ಅದನ್ನು ದಾಟಿ ಮುಂದುವರಿದರೆ ನೀವು ಗೆದ್ದಿರಿ! ಆಂತರಿಕ ಒಳಗಣ್ಣು ತೆರೆದಿದ್ದರೆ ಎಲ್ಲವೂ ನಿಚ್ಚಳ. ಸಿದ್ಧ ಮಾದರಿಗಳಿಗಿಂತ ರೈತರೊಂದಿಗಿನ ಒಡನಾಟ, ಸ್ಪಂದನೆ, ಅನುಭವ, ಗೆದ್ದವರ ನಿದರ್ಶನ ಹಾಗೂ ಸೋತವರ ಪಾಠ ಹಲವು ಕಥನಗಳಿಗೆ ಹೂರಣವಾದೀತು. ಸ್ನೇಹಿತರೆ, ಮನವಿಟ್ಟು ಸಂವೇದನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಿ. ಎಂಥ ಅಡೆತಡೆ ಎದುರಾದರೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ನೆರವು ಪಡೆಯಿರಿ. ದ್ರೋಣಾಚಾರ್ಯರ ಮೂರ್ತಿ ಮುಂದಿಟ್ಟುಕೊಂಡು ಬಿಲ್ಲು ವಿದ್ಯೆಯಲಿ ಪರಿಣತಿ ಪಡೆದ ಏಕಲವ್ಯ ನೀವಾಗಬೇಕು. ಕಾಮ್ ಕಲಿಕೆ ಪಥ ಸುಲಭವಲ್ಲ ಆದರೂ ಬರವಣಿಗೆ ಗಟ್ಟಿತನ, ಕಾಮ್ ಬಳಗ ಮಾರ್ಗದರ್ಶಿಯಾಗುವ ಪರಿ, ಶಿಸ್ತಿನ ಮೌಲ್ಯಮಾಪನ ನಿಮ್ಮನ್ನು ಉತ್ತಮ ಬರಹಗಾರರನಾಗಿ ಮಾಡಲಿದೆ. ತಪ್ಪು ಮಾಡುವೆ, ಅಸಾಧ್ಯ ಎಂಬ ಅಳುಕು ಬೇಡ. ಅಭ್ಯುದಯ ಕೃಷಿ ಬರಹಗಾರರ ಪಡೆ ಕಟ್ಟುವಲ್ಲಿ ಕಾಮ್ ಬಳಗದೊಂದಿಗೆ ಕೈಜೋಡಿಸೋಣ. ಯಶ ನಿಮ್ಮದಾಗಲಿ. ಶುಭ ಹಾರೈಕೆ.

- ಶೈಲಜಾ ಬೆಳ್ಳಂಕಿಮಠ

ಕೃಷಿ ಮಾಧ್ಯಮ ಕೇಂದ್ರದ ಶ್ರೇಷ್ಠ ತರಬೇತಿ ಪಡೆಯಲು ಬಯಸಿದ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು. ತರಬೇತಿಯ ಮೊದಲ ಹೆಜ್ಜೆಯಾಗಿ ಬರವಣಿಗೆಯ ಒಳ-ಹೊರಗು ಪುಸ್ತಕವನ್ನು ಪೂರ್ತಿ ಓದಿದರೆ ನೀವು ತರಬೇತಿಗೆ ಅಣಿಯಾದಂತೆ. ಕಾಮ್ ಗುರುಗಳ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಾ ನಿಮ್ಮ ಬರವಣಿಗೆಯನ್ನು ಉತ್ತಮಪಡಿಸಿಕೊಳ್ಳಿ. ಕೃಷಿ ಪ್ರವಾಸ, ನಿರಂತರ ಅಧ್ಯಯನ ನಿಮ್ಮ ಆದ್ಯತೆಯಾಗಿರಲಿ. ಒಂದು ಪುಟ್ಟ ಕೃಷಿ ಗ್ರಂಥಾಲಯವಿದ್ದರೆ ನಿಮ್ಮ ಬರವಣಿಗೆಗೆ ಜೀವನದುದ್ದಕ್ಕೂ ನೆರವಾಗುತ್ತದೆ. ಈ ಸಲದಿಂದ ಬರವಣಿಗೆಗೆ ಸಂಬಂಧಿಸಿದ ತಂತ್ರಜ್ಞಾನದಲ್ಲಿ ಸಹ ತರಬೇತಿ ಸಿಗುತ್ತಿರುವುದು ನಿಮ್ಮ ಅದೃಷ್ಟ. ಪ್ರತಿಯೊಬ್ಬರೂ ಅತ್ಯುತ್ತಮ ಅಭ್ಯರ್ಥಿ ಎನಿಸಿಕೊಳ್ಳುವಷ್ಟರ ಮಟ್ಟಿಗೆ ಆರೋಗ್ಯಕರ ಪೈಪೋಟಿ ನೀಡುತ್ತಾ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ. ಎಲ್ಲರಿಗೂ ಶುಭ ಹಾರೈಕೆಗಳು.

- ರೇಖಾ ಸಂಪತ್

ಕೃಷಿ ಮಾಧ್ಯಮ ಕೇಂದ್ರ ಬರೀ ಕೃಷಿ-ಗ್ರಾಮೀಣ ಬದುಕಿನ ಕುರಿತು ಮಾತ್ರ ಬರೆಯುವುದನ್ನು ಕಲಿಸುವುದಿಲ್ಲ. ಒಟ್ಟಾರೆ ಯಾವುದೇ ರೀತಿಯ ಬರವಣಿಗೆಯಲ್ಲಿ ತೊಡಗುವ ಮುನ್ನ ಒಂದು ವಿಷಯವನ್ನು ಎಲ್ಲ ಕೋನಗಳಿಂದ ಪರಿಶೀಲಿಸುವ ಹಾಗೂ ಇದು ಯಾರಿಗಾಗಿ ಬರೆಯುತ್ತಿದ್ದೇನೆ, ಇದರಿಂದ ಉಪಯೋಗ ಏನು ಎನ್ನುವುದನ್ನು ಮೊದಲು ನಮಗೆ ಅರ್ಥಮಾಡಿಸುತ್ತದೆ. ಇದು ಸ್ವಾನುಭವ. ಪ್ರಜಾವಾಣಿ ಪತ್ರಿಕೆಯಲ್ಲಿ ತಾಲೂಕು ವರದಿಗಾರನಾಗಿರುವ ನಾನು ಪ್ರತಿ ನಿತ್ಯದ ಸಹಜ ಸುದ್ದಿಗಳನ್ನು ಹೊರತುಪಡಿಸಿ ವಿಶೇಷ ವರದಿಗಳನ್ನು ಮಾಡುವಾಗ ಸದಾ ಕೃಷಿ ಮಾಧ್ಯಮ ಕೇಂದ್ರದಲ್ಲಿ ಮೂರು ದಿನಗಳ ಕಾಲ ಕೇಳಿಸಿಕೊಂಡ ಮಾತುಗಳು ಹಾಗೂ ಕೈಪಿಡಿಯಲ್ಲಿನ ಪಠ್ಯದ ಸಾಲುಗಳು ನೆನಪಿಗೆ ಬರುತ್ತವೆ. ಹೀಗಾಗಿ ಇಲ್ಲಿನ ಒಂದೊಂದು ಮಾತುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು.

- ಎನ್.ಎಂ. ನಟರಾಜ್ ನಾಗಸಂದ್ರ

ನಿರಂತರ ಅಧ್ಯಯನದಿಂದ ಮಾತ್ರ ಯಶಸ್ಸು. ಅದು ನಿಮ್ಮದಾಗಲಿ.

- ಪರಮೇಶ್ವರಯ್ಯ ಸೊಪ್ಪಿಮಠ್

ಕಾಮ್ ಬಂಧುಗಳಿಗೆ ವಂದನೆಗಳು ಮತ್ತು ಅಭಿನಂದನೆಗಳು. ವಿನೂತನ ಉದ್ಘಾಟನೆಯ ರೂವಾರಿಗಳಿಗೆ ನಮನಗಳು. ಹಿರಿಯರ ಮಾರ್ಗದರ್ಶನದಡಿ ಜವಾಬ್ದಾರಿಯುತ ಕೃಷಿ ಪತ್ರಿಕೋದ್ಯಮದೆಡೆಗೆ ನಾವೆಲ್ಲರೂ ಸಾಗೋಣ ಎಂಬ ಆಶಯ.

- ಅಕ್ಷಯರಾಮ ಕಾವಿನಮೂಲೆ

ಕೃಷಿ ಬರವಣಿಗೆ ಇದೊಂದು ಸಾಮಾಜಿಕ ಕರ್ತವ್ಯ. ಈ ಹಾದಿಯಲ್ಲಿ ಸೂಕ್ತ ಸಲಹೆ-ಸೂಚನೆಗಳನ್ನು ಪಾಲಿಸಿದ್ದೇ ಆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ನಮ್ಮ ನಡುವಿನ ದಣಿವರಿಯದ ಜೀವಗಳಿಗೆ ಹಾಗೂ ಪರಿಸರಕ್ಕೆ ಈ ಮೂಲಕ ಸೇವೆ ಸಲ್ಲಿಸೋಣ. ಕಲಿಕೆಯಲ್ಲಿ ಶ್ರದ್ಧೆ ಮತ್ತು ತಾಳ್ಮೆ ಮುಖ್ಯ. ನಮ್ಮ ಆಸಕ್ತಿ ಎಂಬ ಗಿಡಕ್ಕೆ ಕಾಮ್ ನೀರುಣಿಸಿ ಪೋಷಿಸುತ್ತದೆ. ಅನುಗಾಲವೂ ಸೂಕ್ತ ಮಾಹಿತಿ-ಮಾರ್ಗದರ್ಶನ, ಪ್ರೋತ್ಸಾಹ ನೀಡಿ ಸಲಹುತ್ತಿರುವ ಕಾಮ್‌ಗೆ ನನ್ನ ಸಲಾಂ.

- ವಿನೋದ ಪಾಟೀಲ

ಕಾಮ್ ಕೋರ್ಸ್‌ಗೆ ಸೇರಿದ ಮೇಲೆ ನನಗೆ ಬರವಣಿಗೆ ಸುಧಾರಿಸಲು ಸಾಧ್ಯವಾಯಿತು. ಈ ಮೂಲಕ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯೂ ದೊರೆಯಿತು.

- ಸಿ. ಶಿವಾನಂದ

ಕಾಮ್ ಅಭ್ಯರ್ಥಿಗಳ ಅನಿಸಿಕೆಗಳು:

ಬಹಳ ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಬಂದೇಬಿಟ್ಟಿತು. ತರಬೇತಿಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಎಲ್ಲರ ಶುಭಹಾರೈಕೆ ಮತ್ತು ಮಾರ್ಗದರ್ಶನದಿಂದ ಉತ್ತಮ ಬರಹ ನೀಡಲು ಪ್ರಯತ್ನಿಸುತ್ತೇನೆ.

- ನಾಗರತ್ನಮ್ಮ ಬಿ.ಎಸ್.

ಕಾಮ್ ಕೋರ್ಸಿಗೆ ಪ್ರವೇಶ ದೊರೆತದ್ದಕ್ಕೆ ನನ್ನನ್ನು ನಾನೇ ಅಭಿನಂದಿಸಿಕೊಳ್ಳವೆನು. ಸುಸ್ಥಿರ ಕೃಷಿ ಕುರಿತಂತೆ ಜನ ಜಾಗೃತಿಗೆ ಈ ಕೃಷಿ ಪತ್ರಿಕೋದ್ಯಮದ ಮೂಲಕ ಅಳಿಲ ಸೇವೆ ಸಲ್ಲಿಸಬಯಸುತ್ತೇನೆ.

- ಮಹೇಶ್ವರಿ ಆರ್. ಪಾಟೀಲ

ತರಬೇತಿ ಪಠ್ಯದಿಂದ ಅನೇಕ ವಿಷಯಗಳು ಮನದಟ್ಟಾಗಿದ್ದರೂ, ನಾವು ಲೇಖನ ಬರೆದು ತಲುಪಿಸಿದಾಗ ಬರುವ ಸಲಹೆಗಳು ನಮ್ಮ ಬರವಣಿಗೆಯನ್ನು ಹೆಚ್ಚು ಮೊನಚುಗೊಳಿಸಬಹುದೆಂಬ ಭಾವನೆ ನನ್ನದು.

- ಡಾ. ರಮೇಶ್ ಬಿ.ಕೆ.

ದೂರ ಶಿಕ್ಷಣ ವ್ಯವಸ್ಥೆಯಲ್ಲಿ ಕಾಮ್ ತರಬೇತಿಯು ಒಂದು ಹೊಸ ಮೈಲಿಗಲ್ಲು. ಇಂದಿನ ಮಾಧ್ಯಮ ರಂಗದಲ್ಲಿ ನಮಗೆ ಅನ್ನ ನೀಡುವ ಕೃಷಿಯನ್ನು ಕಡೆಗಣಿಸಿರುವುದು ವಿಪರ್ಯಾಸ. ಇಂತಹ ಸಂದರ್ಭದಲ್ಲಿ ಪತ್ರಿಕಾ ಮಾಧ್ಯಮದಲ್ಲಿ ಕೃಷಿ ಬಗ್ಗೆ ಹೆಚ್ಚಿನ ಗುಣಮಟ್ಟದ ಮಾಹಿತಿಯನ್ನು ಪಸರಿಸುವ ನಿಟ್ಟಿನಲ್ಲಿ ಆಸಕ್ತರನ್ನು ಗುರುತಿಸಿ, ಅವರಿಗೆ ವೃತ್ತಿಪರರಿಂದ ಮಾರ್ಗದರ್ಶನ ದೊರೆಯುವಂತಹ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಇದರಿಂದ ಪ್ರೇರಿತರಾಗಿ ಹೆಚ್ಚು ಯುವಕರು ಕೃಷಿಯನ್ನು ತಮ್ಮ ಜೀವನೋಪಾಯವನ್ನಾಗಿ ಮಾಡಿಕೊಂಡು ದೇಶದ ಅಹಾರ ಭದ್ರತೆಗೆ ಬುನಾದಿಯಾಗಲೆಂದು ಆಶಿಸುತ್ತೇನೆ.

- ಸುಜಯ್ ಆರ್.ಕೆ.

ಈ ತರಬೇತಿ ಹೊಸ ಶಕ್ತಿಯನ್ನು ನೀಡಿದೆ. ಪಡ್ರೆ ಸರ್ ಹೇಳಿದಂತೆ ಕೃಷಿ ಪತ್ರಿಕೋದ್ಯಮದ ಮೂಲಕ ಸಮಾಜಮುಖಿಯಾಗಿ ದೇಶಕಟ್ಟುವ ಕೆಲಸ ಮಾಡುತ್ತೇನೆ.

- ಮುರಳೀಧರ ಸಜ್ಜನಶೆಟ್ಟರ

ಕಾಮ್ ಕೋರ್ಸಿಗೆ ನನ್ನನ್ನು ಸೇರಿಸಿದ ಮಲ್ಲಿಕಾರ್ಜುನ ಹೊಸಪಾಳ್ಯ ಸರ್ ಹಾಗೂ ಗಾಣಧಾಳು ಶ್ರೀಕಂಠ ಸರ್‌ಗೆ ಧನ್ಯವಾದಗಳನ್ನು ಹೇಳುತ್ತೇನೆ. ಹಾಗೆಯೇ ಈ ಕಾರ್ಯಕ್ರಮದಿಂದ ತುಂಬ ಕಲಿಯುತ್ತೇನೆ ಎಂಬ ವಿಶ್ವಾಸವಿದೆ.

- ಲೋಕೇಶ್ ಡಿ.

ವಿನೂತನ ರೀತಿಯಲ್ಲಿ ತರಬೇತಿ ಆರಂಭವಾದುದು ಖುಷಿ ಕೊಟ್ಟಿದೆ. ಮುಂದಿನ ತರಗತಿಗಳಲ್ಲಿ ಕಲಿಯಲು ಉತ್ಸುಕಳಾಗಿದ್ದೇನೆ. ಕೃಷಿಯ ಬುಡದಲ್ಲಿಯೇ ಕೆಲಸ ನಿರ್ವಹಣೆಯೊಂದಿಗೆ ಇನ್ನೂ ಹೆಚ್ಚು ಕಲಿಯಲು ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನ ಬೇಕು ಎಂದು ಕೇಳಿಕೊಳ್ಳುತ್ತೇನೆ.

- ಛಾಯಾ ಪಾಟೀಲ್

ಕೃಷಿಯ ಬಗ್ಗೆ ಬರೆಯಬೇಕೆಂಬ ಆಸೆ ಬಹಳ ವರ್ಷಗಳಿಂದ ಇದ್ದರೂ ನನ್ನಲ್ಲಿ ಬರವಣಿಗೆಯ ಅಆಇಈ ಮತ್ತು ಸೂಕ್ತ ತಯಾರಿ ಇಲ್ಲವೆಂದು ಭಾವಿಸಿ ನನ್ನ ಆಸೆಯು ಮನದ ಮೂಲೆಯಲ್ಲೆ ಕೊಳೆಯುತ್ತಿತ್ತು. ಆದರೆ ಈ ಕಾಮ್ ಕೋರ್ಸಿನಿಂದಾಗಿ ಕೃಷಿ ಮತ್ತು ಗ್ರಾಮೀಣಾಬಿವೃದ್ಧಿ ಬಗ್ಗೆ ನಾನು ಲೇಖನಗಳನ್ನು ಬರೆಯುವುದು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ. ಈ ಹೊಸ ಪ್ರಯತ್ನಕ್ಕೆ ಅಭಿನಂದನೆಗಳು.

- ನಾಗರಾಜು ಎಂ.ಎಲ್.

ವಿನೂತನ ಪ್ರಯತ್ನದಲ್ಲಿ ಎಲ್ಲರೊಂದಿಗೆ ನಾನು ಕಲಿಯುವ ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ. ಸಂಪನ್ಮೂಲ ವ್ಯಕ್ತಿಗಳ ಮಾತು ನನ್ನಲ್ಲಿ ಉತ್ಸಾಹ ತುಂಬಿದೆ. ಕಂಪ್ಯೂಟರಿನಲ್ಲಿ ಟೈಪ್ ಮಾಡುವಷ್ಟು ಸುಲಭವಾಗಿ ಮೊಬೈಲಿನಲ್ಲಿ ಸಾಧ್ಯವಾಗುತ್ತಿಲ್ಲ. ಅದನ್ನೂ ಕಲಿಯುವೆ.

- ಕವಿತಾ ಕೆ.ಆರ್.

ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media