Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಕೃಷಿ ಮಾಧ್ಯಮ ಕೇಂದ್ರದ ಪ್ರಕಟಣೆಗಳು
 
ತೆರೆದಬಾವಿ ಮರುಪೂರಣ - ಕಾಕೋಳದ ಯಶೋಗಾಥೆ - ಪೂರ್ಣಪ್ರಜ್ಞ ಬೇಳೂರು
ಹಾವೇರಿ ಜಿಲ್ಲೆ ಕಾಕೋಳದಲ್ಲಿ ಏಳೆಂಟು ವರ್ಷಗಳ ಹಿಂದೆ ತೆರೆದ ಬಾವಿಗಳಿಗೆ ಮಳೆನೀರು ಹರಿಸುವುದರೊಂದಿಗೆ ಆರಂಭವಾದ ಜಲಕಾಯಕ ಇಂದು ವಿಸ್ತಾರವಾಗಿ ಬೆಳೆದುನಿಂತಿದೆ. ಇದರಿಂದಾಗಿ ಹಳೆಯ ಕೆರೆ, ಕೊಳವೆಬಾವಿಗಳಲ್ಲಿ ಮತ್ತೆ ನೀರು ತುಂಬಿದೆ; ಹೊಸ ಕೆರೆಗಳು ಹುಟ್ಟಿಕೊಂಡಿವೆ; ಹೊಲಗದ್ದೆ-ಗುಡ್ಡಗಳಲ್ಲಿ ಹಸಿರು ಚಿಮ್ಮಿದೆ. ಈ ಯಶೋಗಾಥೆಯ ರೂವಾರಿ ಚನಬಸಪ್ಪ ಶಿವಪ್ಪ ಕೊಂಬಳಿ. ಪ್ರಶಸ್ತಿಗಳಿಂದ ಹಿಗ್ಗದೆ, ರಾಜಕೀಯದ ಸೆಳೆತಕ್ಕೆ ಸಿಲುಕದೆ ಸದಾ ನೀರನ್ನೇ ಧ್ಯಾನಿಸುತ್ತಾ ನೀರೆಚ್ಚರ ಮೂಡಿಸುವ ಕೆಲಸದಲ್ಲಿ ತೊಡಗಿರುವ ಈ ಜಲಯೋಧ ಈಗ ಸಾವಯವ ಕೃಷಿಯತ್ತ ಹೆಜ್ಜೆ ಇಟ್ಟಿದ್ದಾರೆ. ಈ ಪುಸ್ತಕದಲ್ಲಿ ಲೇಖಕ ಪೂರ್ಣಪ್ರಜ್ಞ ಬೇಳೂರು ಕಾಕೋಳದಲ್ಲಿನ ಜಲ ಸಾಧನೆಯನ್ನು ದಾಖಲಿಸಿದ್ದಾರೆ.
 
ನಂದಿಹಳ್ಳಿಯ ಉದ್ಯಮಶೀಲ ದಂಪತಿ
ತುಮಕೂರು ಜಿಲ್ಲೆ ನಂದಿಹಳ್ಳಿಯ ಕೆ.ಆರ್. ನೀಲಕಂಠಮೂರ್ತಿ - ಅನಿತಾ ದಂಪತಿ ತಮ್ಮ ಓದೇಕಾರ್ ಫಾರ್ಮ್‌ನಲ್ಲಿ ಹಮ್ಮಿಕೊಂಡಿರುವ ಹತ್ತಾರು ಚಟುವಟಿಕೆಗಳ ಮೇಲೆ ಬೆಳಕುಚೆಲ್ಲುವ ಕೃತಿ. ಬಸವರಾಜು ಕಾಮ್ ತರಬೇತಿಯ ವೇಳೆ ಸಿದ್ಧಪಡಿಸಿದ ಅಧ್ಯಯನ ಪ್ರಬಂಧದ ಪರಿಷ್ಕೃತ ರೂಪ.
 
ಸಾವಯವ ತಾರಸಿ ತೋಟ ಒಂದು ಇಣುಕು ನೋಟ
ಬೆಂಗಳೂರಿನಲ್ಲಿ ನೆಲೆಸಿರುವ ಹಿರಿಯ ಲೇಖಕಿ ಅನುಸೂಯ ಶರ್ಮ ಕಳೆದ ಅನೇಕ ವರ್ಷಗಳಿಂದ ಶ್ರದ್ಧೆ, ಉತ್ಸಾಹದಿಂದ ಸಾವಯವ ವಿಧಾನದಲ್ಲಿ ತಾರಸಿ ತೋಟದ ಕೃಷಿ ಮಾಡುತ್ತಿದ್ದಾರೆ. ಅವರು ತಮ್ಮ ಅನುಭವವನ್ನು ಆಧರಿಸಿ ಈ ಕೃತಿ ರಚಿಸಿದ್ದಾರೆ. ಇದು ಅವರು ಕಾಮ್ ತರಬೇತಿಯ ವೇಳೆ ಸಿದ್ಧಪಡಿಸಿದ ಅಧ್ಯಯನ ಪ್ರಬಂಧ. ಅವರ ಮೊದಲ ಪುಸ್ತಕ ಕೂಡ. ಅನುಸೂಯ ಶರ್ಮ ' ಕನ್ನಡ ಪ್ರಭ' ದೈನಿಕದಲ್ಲಿ 'ಹಿತ್ತಿಲು' ಅಂಕಣ ಬರೆಯುತ್ತಿದ್ದಾರೆ.
 
ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ - ಆನಂದತೀರ್ಥ ಪ್ಯಾಟಿ
ಈ ಪುಸ್ತಕದಲ್ಲಿ ಲೇಖಕ ಆನಂದತೀರ್ಥ ಪ್ಯಾಟಿ ಕೊಪ್ಪಳ ಜಿಲ್ಲೆ ಕಲ್ಲತಾವರಗೆರೆ ಗ್ರಾಮದ ಶೇಖಮ್ಮ ಮತ್ತು ಹುಚ್ಚಪ್ಪ ವಾಣಿ ದಂಪತಿಯ ಸಾಧನೆಯನ್ನು ದಾಖಲಿಸಿದ್ದಾರೆ. ಕಾಯಕವೇ ಕೈಲಾಸ ಎಂಬ ಮಾತು ಈ ದಂಪತಿಯ ಪಾಲಿಗೆ ನೂರಕ್ಕೆ ನೂರರಷ್ಟು ಸತ್ಯ. ಕಲ್ಲಿನಲ್ಲೂ ಹಸಿರು ಉಕ್ಕಿಸಿದ ಇವರ ದುಡಿಮೆ ಬೆರಗು ಮೂಡಿಸುತ್ತದೆ. ಇಂದು ಫಲವತ್ತಾದ ನೆಲ ಇದ್ದೂ ಬೇಸಾಯಕ್ಕೆ ವಿದಾಯ ಹೇಳುವ ಬೆಳವಣಿಗೆ ಒಂದೆಡೆಯಾದರೆ, ಎಂತಹುದೇ ಮಣ್ಣಿನಲ್ಲಾದರೂ ಸಮೃದ್ಧ ಬೆಳೆ ಬೆಳೆಯುವ ಛಲ ಇನ್ನೊಂದೆಡೆ. ಈ ಯಶೋಗಾಥೆ ಕೃಷಿರಂಗದಲ್ಲಿ ಭರವಸೆಯ
 
ಗುಡ್ಡದ ಮೇಲಿನ ಏಕವ್ಯಕ್ತಿ ಸೈನ್ಯ! - ಶ್ರೀ ಪಡ್ರೆ
ಈ ಪುಸ್ತಕ ದಕ್ಷಿಣ ಕನ್ನಡ ಜಿಲ್ಲೆ ಅಡ್ಯನಡ್ಕ ಬಳಿಯ ಮಹಾಲಿಂಗ ನಾಯ್ಕ ಅವರ ಸಾಧನೆಯ ಮೇಲೆ ಬೆಳಕು ಚೆಲ್ಲುತ್ತದೆ. 'ಶೋಕಿಗಾಗಿಯೋ, ಅಗತ್ಯವಿಲ್ಲದೆಯೋ ಒಂದಿಷ್ಟೂ ಖರ್ಚು ಮಾಡುತ್ತಿಲ್ಲ, ಸಾಲ ತೆಗೆದಿಲ್ಲ. ಕೈಯಲ್ಲಿರುವ ಹಣ ಅಥವಾ ಆದಾಯದಲ್ಲಿ ದಿನದ ಕೊನೆಗೆ ಐದು ರೂಪಾಯಿ ಆದರೂ ಉಳಿಯುವಂತೆ ನಾನು ಮೊದಲೇ ಪ್ಲಾನ್ ಹಾಕಿಕೊಳ್ಳುತ್ತೇನೆ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿ ಅನಂತರ ಇನ್ನೊಬ್ಬರ ಹಂಗಿಗೆ ಬೀಳುವುದನ್ನು ಇಷ್ಟಪಡುವುದಿಲ್ಲ' - ಇದು ಮಹಾಲಿಂಗ ನಾಯ್ಕ ಅವರ ತತ್ವ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಅವರ ಕಟ್ಟುನಿಟ್ಟಾದ ಧೋರಣೆ ಮಾತ್ರವಲ್ಲ, ನೆಮ್ಮದಿಯ ಬದುಕಿನ ಮುಖ್ಯ ಸೂತ್ರಗಳಲ್ಲೊಂದು. ಅವರ ಅನುಭವದ ಮಾತು ಈಗಿನ ಸಂದರ್ಭಕ್ಕೆ ದೊಡ್ಡ ಸಂದೇಶ.
 
ಊಟ ಭರ್ಜರಿ, ಆದರೆ ಹೊಟ್ಟೆ ಖಾಲಿ! - ಶಿವರಾಂ ಪೈಲೂರು
ಈ ಪುಸ್ತಕ ಅಭ್ಯುದಯ ಪತ್ರಿಕೋದ್ಯಮಕ್ಕೊಂದು ಬೆಳಕಿಂಡಿ. 'ಆನೆಯ ಚಿತ್ರ ಬಿಡಿಸಬೇಕೋ ಕುದುರೆಯ ಚಿತ್ರ ಬಿಡಿಸಬೇಕೋ ಎಂದು ನಿಖರವಾಗಿ ಯೋಚಿಸದೆ ರೇಖೆ ಎಳೆಯುತ್ತಾ ಹೋದರೆ ಹೇಗಿದ್ದೀತು, ಯೋಚಿಸಿ. ಕೊನೆಯಲ್ಲಿ ಆನೆಯೂ ಮೂಡಿರುವುದಿಲ್ಲ, ಕುದುರೆಯೂ ಕಾಣಿಸುವುದಿಲ್ಲ! ಇನ್ನು ಚಿತ್ರದ ಸುಧಾರಣೆಯ ಸಾಧ್ಯತೆಯಂತೂ ಇಲ್ಲವೇ ಇಲ್ಲ. ಬಿಡಿಸಿದ್ದು ಆನೆಯ ಚಿತ್ರ ಎಂದಾದರೆ ಅಂಬಾರಿ ಏರಿಸಿ ಅದನ್ನು ಇನ್ನಷ್ಟು ಸುಂದರಗೊಳಿಸಬಹುದು; ಕುದುರೆ ಎಂದಾದರೆ ಅದಕ್ಕೆ ರಥ ಜೋಡಿಸಬಹುದು. ಯಾವುದೇ ಸ್ಪಷ್ಟ ಕಲ್ಪನೆ ಇಲ್ಲದೆ ಬಿಡಿಸಿದ ಚಿತ್ರಕ್ಕೆ ಶೀರ್ಷಿಕೆ ಕೊಡುವುದೂ ಸಾಧ್ಯವಾಗುವುದಿಲ್ಲ. ಏಕೆಂದರೆ ನಮಗೇ ಗುಮಾನಿ - ಇದು ಆನೆಯೋ ಕುದುರೆಯೋ?! ಕೊನೆಗೆ ಅದನ್ನು ಓದುಗರ ತೀರ್ಮಾನಕ್ಕೇ ಬಿಟ್ಟು 'ಪ್ರಾಣಿಗಳು' ಎಂಬ ಶೀರ್ಷಿಕೆ ಕೊಟ್ಟು ಇನ್ನಷ್ಟು ಗೋಜಲುಮಾಡಿಬಿಡುತ್ತೇವೆ ಎನ್ನುವ ಪೈಲೂರು ಈ ರೀತಿಯ ಸರಳ ಉದಾಹರಣೆಗಳೊಂದಿಗೆ ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಒಳ-ಹೊರಗನ್ನು ವಿಶದಪಡಿಸಿದ್ದಾರೆ. ಪತ್ರಿಕೋದ್ಯಮಕ್ಕೆ ಪ್ರವೇಶಿಸುವವರಿಗೆ ಈ ಕೃತಿಯಲ್ಲಿರುವ ವಿಮರ್ಶೆ, ಸಲಹೆ ಹಾಗೂ ಕಿವಿಮಾತು ಸಹಕಾರಿ. ಒಂದರ್ಥದಲ್ಲಿ ಇದರಲ್ಲಿರುವ ಲೇಖನಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳ ಪಾಲಿಗೆ ಪ್ರಾಯೋಗಿಕ ಪಾಠ.
 
ಹನಿಗೂಡಿ ಹಳ್ಳ
ಈ ಪುಸ್ತಕ ಅಡಿಕೆ ಪತ್ರಿಕೆಯಲ್ಲಿ ಪ್ರಕಟಗೊಂಡ ಉಪಯುಕ್ತ ಮಾಹಿತಿ ತುಣುಕುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಹೆಚ್ಚಿನವು ರೈತ ಅನುಶೋಧನೆಗಳು. ಈ ಮಾಹಿತಿಗಳು ರೈತರಿಗೆ ನಿತ್ಯದ ಕೃಷಿ ಕಾಯಕದಲ್ಲಿ ನೇರ ಉಪಯೋಗಕ್ಕೆ ಬರುವಂಥವು.
 
ಸಾವಯವದ ಹಾದಿ - ಈರಯ್ಯ ಕಿಲ್ಲೇದಾರ
ಹೊಲದ ದುಡಿಮೆಯ ನಡುವೆಯೆ ಲೇಖನ ಬರೆಯುತ್ತಿರುವವರ ಪೈಕಿ ಬೆಳಗಾವಿ ಜಿಲ್ಲೆ ಗುಡಿಕಟ್ಟಿಯ ಈರಯ್ಯ ಕಿಲ್ಲೇದಾರ ಕೂಡ ಒಬ್ಬರು. ಕಾಲೇಜು ವ್ಯಾಸಂಗದ ಬಳಿಕ ಒಕ್ಕಲುತನದ ಮೇಲಿನ ಒಲುಮೆಯಿಂದ ಹಳ್ಳಿಗೆ ಮರಳಿದ ಅವರು ಸಾವಯವ ಚಿಂತನೆಗಳಿಂದ ಪ್ರಭಾವಿತರಾದವರು. ಸಾವಯವ ಕೃಷಿ ಕೇವಲ ಹೊಲಕ್ಕಷ್ಟೇ ಸೀಮಿತವಾಗಬಾರದು; ಅದು ನಾವು ಯೋಚಿಸುವ ಕ್ರಮ ಹಾಗೂ ನಾವು ಬದುಕುವ ರೀತಿಗೂ ಅನ್ವಯವಾಗಬೇಕು ಎಂಬುದು ಅವರ ನಿಲುವು. ಈ ದಿಸೆಯಲ್ಲಿ ಕಳೆದ ಅನೇಕ ವರ್ಷಗಳಿಂದ ತಾವು ನಡೆಸುತ್ತಿರುವ ಪ್ರಯೋಗಗಳು ಅವರಿಗೆ ಖುಷಿ ಕೊಟ್ಟಿವೆ. ಕಿಲ್ಲೇದಾರ ಅವರ ಅನುಭವ ಸಾರವನ್ನು ಕೃಷಿ ಮಾಧ್ಯಮ ಕೇಂದ್ರ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಕೇಂದ್ರ ಹೇಳುವಂತೆ, ಈ ಪುಸ್ತಕದಲ್ಲಿರುವುದು 'ಸಾಧನೆಯ ದಾಖಲೆ ಅಲ್ಲ. ಬದಲಾಗಿ, ಪ್ರಯೋಗದ ಚಿತ್ರಣ; ಸ್ವಾನುಭವದ ಕಥನ.'
 
ಮಿಶ್ರಕೃಷಿ-ಮೌಲ್ಯವರ್ಧನೆ-ನೇರ ಮಾರುಕಟ್ಟೆ: ಎಸ್.ಎಂ. ಪಾಟೀಲರ ಮಾದರಿ - ಲೀಲಾ ನಾ. ಕೌಜಗೇರಿ
ಬೆಳಗಾವಿ ಜಿಲ್ಲೆ ಅಥಣಿಯ ಎಸ್.ಎಂ. ಪಾಟೀಲರು ತಮ್ಮ ಬದುಕಿನ ನಾಲ್ಕು ದಶಕಗಳನ್ನು ಕಡತ-ಕಾಗದಪತ್ರ-ದಾಖಲೆಗಳ ನಡುವೆ ಕಳೆದವರು. 10 ವರ್ಷಗಳ ಹಿಂದೆ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದಾಗ ಅವರ ಮನದಲ್ಲಿ ಒಂದೇ ಯೋಚನೆ: `ಆದಷ್ಟು ಬೇಗನೆ ಒಕ್ಕಲುತನಕ್ಕಿಳಿಯಬೇಕು.' ಅವರು ತಡಮಾಡಲಿಲ್ಲ. ಹಾಗಂತ ದುಡುಕಲೂ ಇಲ್ಲ. ಹತ್ತಾರು ಕಡೆ ಓಡಾಡಿ ಸಾವಯವ ಕೃಷಿಕರ ಪ್ರಯೋಗಗಳನ್ನು ಕೂಲಂಕಷ ನೋಡಿದರು; ಅವರ ಅನುಭವಗಳಿಗೆ ಕಿವಿಗೊಟ್ಟರು. ಅಷ್ಟರಲ್ಲಿ ಮುಂದಿನ ಹಾದಿ ಸ್ಪಷ್ಟವಾಗಿತ್ತು. ನಾನಾ ಬೆಳೆಗಳು, ಪ್ರತಿಯೊಂದರಿಂದ ಬಗೆಬಗೆಯ ಮೌಲ್ಯವರ್ಧಿತ ಉತ್ಪನ್ನ, ಸದಾ ಹೊಸಹೊಸ ಪ್ರಯೋಗ, ನೇರ ಮಾರುಕಟ್ಟೆ, ಸಂಘಟನೆಯ ಮೂಲಕ ಸಾವಯವ ಚಳವಳಿಯ ಬಲವರ್ಧನೆ - ಇವೆಲ್ಲವುಗಳ ನಡುವೆ ಪಾಟೀಲರ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅವರ ಮನಸ್ಸು-ಕೃಷಿ-ಬದುಕು ಎಲ್ಲವೂ ಸಾವಯವ. ಆದ್ದರಿಂದಲೇ ಒಕ್ಕಲುತನದಲ್ಲಿ ಅವರಿಗೆ ಖುಷಿ, ನೆಮ್ಮದಿ. ಪಾಟೀಲರ ಪ್ರಯೋಗ, ಅನುಭವ, ಸಾಧನೆಗಳು 'ಮಿಶ್ರಕೃಷಿ-ಮೌಲ್ಯವರ್ಧನೆ-ನೇರ ಮಾರುಕಟ್ಟೆ: ಎಸ್.ಎಂ. ಪಾಟೀಲರ ಮಾದರಿ' ಪುಸ್ತಕದಲ್ಲಿ ದಾಖಲಾಗಿವೆ. ಈ ಪುಸ್ತಕವನ್ನು ಕಾಮ್ ಫೆಲೋ ಲೀಲಾ ಕೌಜಗೇರಿ ಬರೆದಿದ್ದಾರೆ.
 
ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕು: ಕರೇಗೌಡ ದಂಪತಿಯ ಸೂತ್ರ - ಪೂರ್ಣಿಮಾ ತೀರ್ಥಮಲ್ಲೇಶ್
'ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕು: ಕರೇಗೌಡ ದಂಪತಿಯ ಸೂತ್ರ' ಪುಸ್ತಕ ಸಕಲೇಶಪುರ ತಾಲೂಕಿನ ಕೊಂತನಮನೆಯ ಕರೇಗೌಡ-ಯಶೋದ ದಂಪತಿಯ ಪರಿಸರಸ್ನೇಹಿ ಒಕ್ಕಲುತನದ ಮೇಲೆ ಬೆಳಕುಚೆಲ್ಲುತ್ತದೆ. ಕಳೆದ ಒಂದೂವರೆ ದಶಕದಿಂದ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಪರಿಸರಸ್ನೇಹಿ ಒಕ್ಕಲುತನ ಮಾಡುತ್ತಿರುವ ಈ ದಂಪತಿ ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕನ್ನು ತಮ್ಮದೇ ರೀತಿಯಲ್ಲಿ ರೂಪಿಸಿಕೊಂಡವರು. ಆಹಾರ ಭದ್ರತೆಗೆ ಭತ್ತ-ತರಕಾರಿಗಳು, ಆರ್ಥಿಕ ಮುನ್ನಡೆಗೆ ಕಾಫಿ-ಏಲಕ್ಕಿ ವಾಣಿಜ್ಯ ಬೆಳೆಗಳು, ಇವುಗಳ ನಡುವೆ ಸ್ವಂತ ದುಡಿಮೆ ಇವರ ವ್ಯವಸಾಯ ಬದುಕನ್ನು ನೆಮ್ಮದಿಯ ಹಾದಿಯಲ್ಲಿ ಮುನ್ನಡೆಸುತ್ತಿವೆ. ಇದು ರಾಸಾಯನಿಕರಹಿತ ಕೃಷಿಕ್ಷೇತ್ರದಲ್ಲಿನ ಮೌನಸಾಧಕರ ಅನುಭವಗಳಿಗೆ ಕನ್ನಡಿ ಹಿಡಿಯುವ ಕೇಂದ್ರದ ಪ್ರಯತ್ನದಲ್ಲಿ ಐದನೇ ಪುಸ್ತಕ. ಈ ಪುಸ್ತಕವನ್ನು ಕಾಮ್ ಫೆಲೋ ಪೂರ್ಣಿಮಾ ತೀರ್ಥಮಲ್ಲೇಶ್ ಬರೆದಿದ್ದಾರೆ.
 
ಸಿರಿಧಾನ್ಯ : ಸುಸ್ಥಿರ ಕೃಷಿ, ಆಹಾರ ಭದ್ರತೆಗೆ ಆಧಾರ ಸಂ: ಅನಿತಾ ಪೈಲೂರು
ಕೃಷಿರಂಗದ ಬಿಕ್ಕಟ್ಟು ಹಾಗೂ ಮಾನವ ಮತ್ತು ಪರಿಸರದ ಹದೆಗೆಟ್ಟ ಆರೋಗ್ಯಕ್ಕೆ ರಾಗಿ, ಸಾವೆ, ನವಣೆ, ಸಜ್ಜೆ, ಹಾರಕ ಮುಂತಾದ ಸಿರಿಧಾನ್ಯಗಳು ಪರಿಹಾರ ನೀಡಬಲ್ಲವು ಎಂಬ ಯೋಚನೆ ಸುಸ್ಥಿರ ಅಭಿವೃದ್ಧಿಯ ಪ್ರತಿಪಾದಕರದ್ದು. ಬಹುಬೆಳೆ ಪದ್ಧತಿಯನ್ನು ಪೋಷಿಸುವ, ಆ ಮೂಲಕ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಈ ಧಾನ್ಯಗಳನ್ನು ಮತ್ತೆ ಹೊಲಗಳಿಗೆ ತರುವ ಉದ್ದೇಶದೊಂದಿಗೆ ಇಂದು ದೇಶಾದ್ಯಂತ ಅನೇಕ ಪ್ರಯತ್ನಗಳು ಆಗುತ್ತಿವೆ. ಆಹಾರ ಭದ್ರತೆಯ ಜೊತೆಜೊತೆಗೇ ಆರೋಗ್ಯವನ್ನೂ ತಮ್ಮೊಳಗೆ ಜೋಡಿಸಿಕೊಂಡಿರುವ ಈ ಧಾನ್ಯಗಳ ಬಳಕೆ ಅಪೌಷ್ಟಿಕತೆಯ ಸಮಸ್ಯೆಗೆ ಪರಿಹಾರವಾಗಬಹುದು. ಈ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ವ್ಯವಸಾಯ ಹಾಗೂ ಆಹಾರವಾಗಿ ಅದರ ಬಳಕೆಯ ಹಿಂದಿರುವ ಸಾಂಪ್ರದಾಯಿಕ ಜ್ಞಾನವನ್ನು ದಾಖಲಿಸುವ ಪ್ರಯತ್ನದ ಫಲವೇ ಈ ಪುಸ್ತಕ. ಪುಸ್ತಕವನ್ನು ಇನ್ನಷ್ಟು ಉಪಯುಕ್ತವಾಗಿಸಲು ಸಿರಿಧಾನ್ಯ ವ್ಯವಸಾಯದ ವಿವರಗಳ ಜೊತೆಗೆ, ಆಹಾರವಾಗಿ ಅದರ ಬಳಕೆಯ ಬಗ್ಗೆಯೂ ಮಾಹಿತಿ ನೀಡಲಾಗಿದೆ.
 
ಗಿಡಗೆಳೆತನದಿಂದ ಕೃಷಿಪ್ರೀತಿ ಬೆಳೆಸುವ ಎಡ್ವರ್ಡ್ ರೆಬೆಲ್ಲೋ - ನಾ. ಕಾರಂತ ಪೆರಾಜೆ
ಕಳೆದ ಒಂದೂವರೆ ದಶಕದಿಂದ ಹೊಸ, ಅಪರೂಪದ ತಳಿಗಳ ಬೆನ್ನತ್ತಿ ಹಲವು ಪ್ರದೇಶಗಳನ್ನು ಸುತ್ತಿದ ಅವರು ಜತೆಯಲ್ಲೆ ಅನೇಕ ರೈತರ ನಂಟು ಬೆಳೆಸಿಕೊಂಡಿದ್ದಾರೆ. ಕೃಷಿ ಆಸಕ್ತರ ನಡುವೆ ಸ್ನೇಹದ ಕೊಂಡಿಯನ್ನು ಬೆಸೆದಿದ್ದಾರೆ. ಅಮ್ಮ ಎಲಿಝೆಬೆತ್, ಪತ್ನಿ ಫ್ಲೋರಿನಾ ಹಾಗೂ ಮಕ್ಕಳ ಸಹಕಾರ ಇವರ ಕಾಯಕವನ್ನು ಸಲೀಸಾಗಿಸಿದೆ. ಕೃಷಿಯಲ್ಲಿನ ಪ್ರತಿ ವಿಚಾರವನ್ನೂ ಸೂಕ್ಷ್ಮವಾಗಿ ಗಮನಿಸುವ, ತಳಿ ಸಂಗ್ರಹಿಸಿದಷ್ಟೆ ಶ್ರದ್ಧೆಯಿಂದ ಬೆಳೆ ಬೆಳೆಯುವ, ಉಪಯುಕ್ತ ಮಾಹಿತಿಯನ್ನು ಆಸಕ್ತರಿಗೆ ಹಂಚುವ, ಕೃಷಿಯಿಂದ ಲಾಭವೆಂದು ಹೇಳಲಾಗದಿದ್ದರೂ ಮನಸ್ಸಿನ ಖುಷಿ, ಮನೆಯ ನೆಮ್ಮದಿ ಏರುಗತಿಯಲ್ಲಿದೆ ಎಂದು ಹೇಳುವ ಎಡ್ವರ್ಡ್, ಕೃಷಿಕರ ನಡುವಿನ ಬಿಸಿಲುಕೋಲು. ಸುಸ್ಥಿರ ಕೃಷಿಯಲ್ಲಿನ ವೈವಿಧ್ಯಮಯ ಪ್ರಯೋಗ-ಸಾಧನೆಗಳು ಭರವಸೆಯ ಚಿಲುಮೆಗಳಾಗಿ ಒಕ್ಕಲುತನದ ಅಂತಸ್ಸತ್ವವನ್ನು ಕಾಯ್ದುಕೊಂಡಿವೆ. ಇಂತಹ ಚಿಲುಮೆಗಳಿಗೆ ಬೆಳಕೊಡ್ಡುವ ನಮ್ಮ ಪ್ರಯತ್ನದಲ್ಲಿ ಇದು ಆರನೇ ಪುಸ್ತಿಕೆ. ಎಡ್ವರ್ಡ್ ಅವರ ಗಿಡಗೆಳೆತನದ ಹಾದಿಯನ್ನು ಪುತ್ತೂರಿನ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ಹಾಗೂ ಕೇಂದ್ರದ ಹಿತೈಷಿ ನಾ. ಕಾರಂತ ಪೆರಾಜೆ ದಾಖಲಿಸಿದ್ದಾರೆ.
 
ಬೀಜಸ್ವಾತಂತ್ರ್ಯದ ಹಾದಿ
- ಸೀಮಾ ಜಿ. ಪ್ರಸಾದ್
ಮಂಡ್ಯ ಜಿಲ್ಲೆಯ ಶಿವಳ್ಳಿ ಗ್ರಾಮದಲ್ಲಿ ಯುವ ರೈತ ಬೋರೇಗೌಡರು ತಮ್ಮ ಸಹೋದರ ಶಂಕರ್ ಜತೆಗೂಡಿ ಅಪರೂಪದ 70 ತಳಿಯ ಭತ್ತ ಬೆಳೆಯುವುದಲ್ಲದೆ ಸ್ವತಃ ಎರಡು ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಭತ್ತ ಮ್ಯೂಸಿಯಂ ಸ್ಥಾಪನೆಗೆ ಚಾಲನೆ ನೀಡಿದ್ದಾರೆ. ದೇಸಿ ಭತ್ತ ತಳಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಕೇಂದ್ರವಾಗಿ, ಆಸಕ್ತ ರೈತರಿಗೆ ಸ್ಫೂರ್ತಿಯ ಸೆಲೆಯಾಗಿ ಅವರ ಹೊಲ, ಮನೆ ರೂಪುಗೊಳ್ಳುತ್ತಿದೆ. ಈ ಸಹೋದರರ ಸಾಧನೆಯನ್ನು ಕಾಮ್ ಹಿತೈಷಿ ಬೆಂಗಳೂರಿನ ಸೀಮಾ ಜಿ. ಪ್ರಸಾದ್ ದಾಖಲಿಸಿದ್ದಾರೆ.
 
ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು
- ಕಿಶನ್ ರಾವ್ ಕುಲಕರ್ಣಿ
ಕೊಪ್ಪಳ ಜಿಲ್ಲೆಯ ತಳುವಗೇರಿ ಗ್ರಾಮದ ಯಲ್ಲಪ್ಪ-ಯಲ್ಲವ್ವ ದಂಪತಿ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ್ದಾರೆ. ಸ್ವತಃ ಪಶು ಆಹಾರ ತಯಾರಿ, ಹೈನುಗಳ ಆರೋಗ್ಯದ ಕಾಳಜಿ, ಸ್ವಚ್ಛತೆ, ಉತ್ತಮ ನಿರ್ವಹಣೆ ಮುಂತಾದ ಕಾರಣಗಳಿಂದ ಇವರ ಹೈನುಗಾರಿಕೆ ಇಂದು ಊರಿಗೇ ಮಾದರಿ ಎನಿಸಿದೆ. ಈ ದಂಪತಿಯ ಕೃಷಿಗಾಥೆಯನ್ನು ಶಿಕ್ಷಕ, ಬರಹಗಾರ ಕಿಶನ್ ರಾವ್ ಕುಲಕರ್ಣಿ ದಾಖಲಿಸಿದ್ದಾರೆ.
 
ಬರವನ್ನೇ ಮಣಿಸಿದ ಮಲ್ಲಣ್ಣ
- ಶ್ರೀ ಪಡ್ರೆ

ದಶಕದ ಹಿಂದೆ ಮೂರು ವರ್ಷ ಎಡೆಬಿಡದೆ ಬರಗಾಲ ಆವರಿಸಿದಾಗ ಬಯಲುಸೀಮೆಯ ಸಾವಿರಾರು ರೈತರಿಗೆ ಬೇರೆ ಊರುಗಳಿಗೆ ಗುಳೆ ಹೋಗುವುದು ಅನಿವಾರ್ಯವಾಯಿತು. ಆದರೆ ರಾಜ್ಯದಲ್ಲೇ ಅತಿ ಕಡಿಮೆ ಮಳೆಯಾಗುವ ಬಾಗಲಕೋಟೆ ಜಿಲ್ಲೆ ಹುನಗುಂದದ ಸುತ್ತಲ ರೈತರಿಗೆ ಆಹಾರಕ್ಕಾಗಿ ಊರೂರು ಅರಸುವ ಪರಿಸ್ಥಿತಿ ಬರಲಿಲ್ಲ. ಆಗಾಗಲೇ 'ತಿದ್ದಿಸಿಕೊಂಡಿದ್ದ' ಅವರ ಹೊಲಗಳು ಮನೆಗಾಗುವಷ್ಟು ಆಹಾರ ಧಾನ್ಯಗಳನ್ನು ಬೆಳೆಯಲು ಶಕ್ತವಾಗಿದ್ದವು. ಹೊಲ ತಿದ್ದಿಸುವುದರ ಹಿಂದಿರುವ ಉದ್ದೇಶ ಮಣ್ಣು ಹಾಗೂ ನೀರಿನ ಸಂರಕ್ಷಣೆ. ಹೊಲ ತಿದ್ದಿಸಿದರೆ ಪ್ರಯೋಜನವಿದೆ ಎನ್ನುವುದನ್ನು ಹುನಗುಂದದ ಸುತ್ತಮುತ್ತಲ ರೈತರು ಪ್ರತ್ಯಕ್ಷ ಅನುಭವಿಸಿದವರು. ಹಿಡುವಳಿ ಸಣ್ಣದೇ ಇರಲಿ ಅಥವಾ ನೂರಾರು ಎಕರೆ ಇರಲಿ, ಹುನಗುಂದದ ನಾಗರಾಳ ಕುಟುಂಬ ಶತಮಾನದ ಹಿಂದೆ ತಮ್ಮ ಹೊಲದಲ್ಲೇ ಪ್ರಾರಂಭಿಸಿದ ಈ ನೆಲ-ಜಲ ಸಂರಕ್ಷಣೆಯ ಮಾದರಿ ಉಪಯುಕ್ತ ಎನಿಸಿದೆ.

ನೆಲ-ಜಲ ಸಂರಕ್ಷಣೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಹಿರಿಯ ಪತ್ರಕರ್ತ ಶ್ರೀ ಪಡ್ರೆ ಅವರು ನಾಗರಾಳ ಕುಟುಂಬದ 'ಹೊಲ ತಿದ್ದಿಸುವ' ಪಯಣ, ಅದರ ಅಗತ್ಯ, ಕ್ರಮ, ಪರಿಣಾಮ, ಸಾಧ್ಯತೆಗಳನ್ನು ಅತ್ಯಂತ ವಿವರವಾಗಿ, ಸರಳವಾಗಿ ಈ ಪುಸ್ತಕದಲ್ಲಿ ಹೇಳಿದ್ದಾರೆ.

 
ಬರಸಹಿಷ್ಣು ಹಾರಕಕ್ಕೆ ಮರುಜೀವ: ಗೋಪಾಲನಹಳ್ಳಿಯ ಯಶೋಗಾಥೆ
- ಮಲ್ಲಿಕಾರ್ಜುನ ಹೊಸಪಾಳ್ಯ
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲನಹಳ್ಳಿ 25 ವರ್ಷಗಳ ಹಿಂದೆ ಸಿರಿಧಾನ್ಯ ಹಾರಕಕ್ಕೆ ಹೆಸರುವಾಸಿಯಾಗಿದ್ದ ಗ್ರಾಮ. ಆದರೆ ಕಾಲಾಂತರದಲ್ಲಿ ಅದು ನೇಪಥ್ಯಕ್ಕೆ ಸರಿಯಿತು. ಇದೀಗ ಅಲ್ಲಿ ಹಾರಕಕ್ಕೆ ಮರುಜೀವ ಪ್ರಾಪ್ತವಾಗಿದೆ. ಈ ವರ್ಷ ಗ್ರಾಮದಲ್ಲಿ ಸುಮಾರು 26 ಕ್ವಿಂಟಾಲ್ ಹಾರಕ ಬೆಳೆಯಲಾಗಿದ್ದು ‘ಹಾರಕ ಬೆಳೆಗಾರರ ಸಂಘ’ ಸ್ಥಾಪನೆಯಾಗಿದೆ. ಮುಂದಿನ ವರ್ಷ 100 ಕ್ವಿಂಟಾಲ್ ಹಾರಕ ಬೆಳೆಯುವ ಹಂಬಲ ಗ್ರಾಮಸ್ಥರಲ್ಲಿದೆ. ಗ್ರಾಮೀಣ ಬದುಕು ಆತಂಕದಲ್ಲಿದೆ ಎಂಬ ಕಳವಳದ ಈ ದಿನಗಳಲ್ಲಿ ಗೋಪಾಲನಹಳ್ಳಿಯ ಮಾದರಿ ಹೊಸ ಭರವಸೆಯನ್ನು ಮೂಡಿಸುತ್ತದೆ. ಈ ಯಶೋಗಾಥೆಯನ್ನು ಅಭಿವೃದ್ಧಿ ಬರಹಗಾರ ಮಲ್ಲಿಕಾರ್ಜುನ ಹೊಸಪಾಳ್ಯ ಈ ಕೃತಿಯಲ್ಲಿ ವಿವರವಾಗಿ ಚಿತ್ರಿಸಿದ್ದಾರೆ. ಹಾರಕ ಬೆಳೆಯುವ ವಿಧಾನ, ಸಂಸ್ಕರಣೆ ಕ್ರಮ ಹಾಗೂ ಬಳಕೆಯ ಬಗ್ಗೆ ವಿವರಗಳಿವೆ.
 
ಸುಸ್ಥಿರ ಕೃಷಿಗೆ ಹತ್ತಾರು ಹಾದಿ
- ಡಾ. ಗಣೇಶ ಎಂ. ನೀಲೇಸರ
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬೆಂಗಳಿ ವೆಂಕಟೇಶ ತಮಗಿರುವ ಒಂದೂ ಮುಕ್ಕಾಲು ಎಕರೆ ಹಿಡುವಳಿಯಲ್ಲಿ ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಕೃಷಿಯ ಜೊತೆಗೆ ಮಿಶ್ರಕೃಷಿಯನ್ನೂ ಶ್ರದ್ಧೆಯಿಂದ ಮಾಡಿ ಯಶಸ್ವಿಯಾದವರು. ಸೀಮಿತ ಸ್ಥಳಾವಕಾಶ ಹಾಗೂ ಲಭ್ಯ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡಿರುವ ಅವರು ವೈವಿಧ್ಯಮಯ ಬೆಳೆಗಳನ್ನು ಬೆಳೆದು ಏಕಬೆಳೆಯ ಅನಿಶ್ಚಿತತೆಯಿಂದ ಹೊರಬಂದವರು. ಮುಖ್ಯಬೆಳೆ ಅಡಿಕೆಗೆ ನೀಡಿದ ಮಹತ್ವವನ್ನೇ ಉಳಿದ ಬೆಳೆಗಳಿಗೂ ನೀಡಿದ್ದಾರೆ. ತೋಟದ ತುಂಬಾ ಹಬ್ಬಿರುವ ಶುಂಠಿ, ಅರಿಶಿನ, ಕಾಳುಮೆಣಸುಗಳಿಂದ ಹಿಡಿದು ತೋಟಗಾರಿಕಾ ಬೆಳೆಗಳಾದ ಚಿಕ್ಕು, ಹಲಸು, ಪುನರ್ಪುಳಿಗಳ ಮೌಲ್ಯವರ್ಧನೆ, ಮಾರಾಟ ಅವರ ಕ್ರಿಯಾಶೀಲತೆಯನ್ನು ಎತ್ತಿ ತೋರಿಸುತ್ತದೆ. ಅವರಲ್ಲಿರುವ ತೆಂಗು ಉತ್ತಮ ಗುಣಮಟ್ಟದ್ದೆಂದು ಬೇಡಿಕೆ ಹೆಚ್ಚಿದಾಗ ಪ್ರಾರಂಭಿಸಿದ ತೆಂಗಿನ ಗಿಡಗಳ ನರ್ಸರಿ ಮಾರುಕಟ್ಟೆ ಗುರುತಿಸುವ ಅವರ ಕೌಶಲದ ಜೊತೆಗೆ ಒಳಿತನ್ನು ಇತರರಿಗೆ ದಾಟಿಸುವ ಆಶಯವನ್ನೂ ತಿಳಿಸುತ್ತದೆ. ಯಾರೂ ಬೆಳೆಸಲು ಬಯಸದ, ಆದರೆ ಉತ್ತಮ ಬೇಡಿಕೆಯಿರುವ ಮಾಡಹಾಗಲವನ್ನು ಬೆಳೆಸಿದ್ದಾರೆ. ಆ ಮೂಲಕ ನಶಿಸಿಹೋಗುತ್ತಿದ್ದ ಒಂದು ತಳಿಗೆ ಹೊಸಹುಟ್ಟು ನೀಡಿದ್ದಷ್ಟೇ ಅಲ್ಲದೆ, ಕೃಷಿಪೂರಕ ಚಟುವಟಿಕೆಗಳ ಕುರಿತು ಹೊಸ ಚಿಂತನೆಗೆ ನಾಂದಿಹಾಡಿದ್ದಾರೆ. ತಮ್ಮಲ್ಲಿರುವ ಪ್ರತಿಯೊಂದು ಬೆಳೆಯ ಬಳಕೆ, ಉಪಯೋಗಗಳನ್ನು ಮನಗಂಡು ಆ ಪ್ರಕಾರ ಅದರ ಮೌಲ್ಯವನ್ನು ಕಂಡುಕೊಂಡಿದ್ದಾರೆ.
ಉತ್ತಮ ಯೋಜನೆ ಹಾಗೂ ಪರಿಶ್ರಮದ ನಿರ್ವಹಣೆಯಿಂದ ಸಣ್ಣ ಹಿಡುವಳಿಯಲ್ಲೂ ಸ್ವಾವಲಂಬಿ ಕೃಷಿ ಬದುಕು ಸಾಧ್ಯ ಎಂಬುದನ್ನು ಬೆಂಗಳಿ ಕುಟುಂಬದ ಸದಸ್ಯರು ತೋರಿಸಿಕೊಟ್ಟಿದ್ದಾರೆ.
 
ಪುಸ್ತಕಗಳ ಬೆಲೆ
ಜಲನೆಮ್ಮದಿಯತ್ತ ಕಾಕೋಳ ರೂ.40
ಹನಿಗೂಡಿ ಹಳ್ಳ ರೂ.30
ಗುಡ್ಡದ ಮೇಲಿನ ಏಕವ್ಯಕ್ತಿ ಸೈನ್ಯ! ರೂ.15
ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ ರೂ.15
ಊಟ ಭರ್ಜರಿ, ಆದರೆ ಹೊಟ್ಟೆ ಖಾಲಿ! ರೂ.50
ಸಾವಯವದ ಹಾದಿ ರೂ.20
ಸಾವಯವ ತಾರಸಿ ತೋಟ (ಪ್ರತಿಗಳು ಮುಗಿದಿವೆ) ರೂ.30
ನಂದಿಹಳ್ಳಿಯ ಉದ್ಯಮಶೀಲ ದಂಪತಿ (ಪ್ರತಿಗಳು ಮುಗಿದಿವೆ) ರೂ.15
ಮಿಶ್ರಕೃಷಿ-ಮೌಲ್ಯವರ್ಧನೆ-ನೇರ ಮಾರುಕಟ್ಟೆ : ಎಸ್.ಎಂ. ಪಾಟೀಲರ ಮಾದರಿ ರೂ.20
ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕು: ಕರೇಗೌಡ ದಂಪತಿಯ ಸೂತ್ರ ರೂ.20
ಸಿರಿಧಾನ್ಯ : ಸುಸ್ಥಿರ ಕೃಷಿ, ಆಹಾರ ಭದ್ರತೆಗೆ ಆಧಾರ ರೂ.75
ಗಿಡಗೆಳೆತನದಿಂದ ಕೃಷಿಪ್ರೀತಿ ಬೆಳೆಸುವ ಎಡ್ವರ್ಡ್ ರೆಬೆಲ್ಲೋ ರೂ.20
ಬೀಜಸ್ವಾತಂತ್ರ್ಯದ ಹಾದಿ ರೂ.20
ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು
ರೂ.20
ಬರವನ್ನೇ ಮಣಿಸಿದ ಮಲ್ಲಣ್ಣ
ರೂ.25
ಬರಸಹಿಷ್ಣು ಹಾರಕಕ್ಕೆ ಮರುಜೀವ: ಗೋಪಾಲನಹಳ್ಳಿಯ ಯಶೋಗಾಥೆ ರೂ.25
ಸುಸ್ಥಿರ ಕೃಷಿಗೆ ಹತ್ತಾರು ಹಾದಿ
ರೂ.30
ಅಂಚೆವೆಚ್ಚ ಪ್ರತ್ಯೇಕ : ತೆರೆದ ಅಂಚೆ ಮೂಲಕ ಕಳುಹಿಸಲು ಒಂದು ಪುಸ್ತಕಕ್ಕೆ ರೂ. 4
 
 
 
ಪ್ರತಿಗಳಿಗೆ ಕೇಂದ್ರವನ್ನು ಸಂಪರ್ಕಿಸಿ.
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media