Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ

ಕಾಮ್ ಜತೆಗಿನ ಪಯಣ

ಮಲೆನಾಡಿನ ಪರಿಸರಕ್ಕೆ ಸೂಕ್ತವಾದ ಗುಣಗಳುಳ್ಳ ವಿಶಿಷ್ಟ ಹಸುವಿನ ತಳಿ ‘ಮಲ್ನಾಡಗಿಡ್ಡ’ಕ್ಕೆ ಕೇಂದ್ರ ಸರಕಾರ ‘ನಿರ್ದಿಷ್ಟ ತಳಿ’ ಮಾನ್ಯತೆ ನೀಡಿದ್ದನ್ನು ಆಧರಿಸಿ ಬರೆದ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಬಂದ ಹತ್ತಾರು ಕರೆಗಳಲ್ಲಿ ಒಂದು ಕರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತಗುಡ್ಡದಲ್ಲಿರುವ ನಂದಿವೇರಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳದಾಗಿತ್ತು. ಕಳೆದೊಂದು ದಶಕದಿಂದ ಕಪ್ಪತಗುಡ್ಡಕ್ಕೆ ಮರುಜೀವ ನೀಡುವ ಕಾಯಕದಲ್ಲಿ ತೊದಗಿಸಿಕೊಂಡಿರುವ ಸ್ವಾಮೀಜಿ, ನಾಲ್ಕೈದು ವರ್ಷಗಳ ಹಿಂದೆ ಅಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನೂ ತಡೆಯಲು ಪ್ರಯತ್ನಿಸಿ ಸಫಲರಾಗಿದ್ದರು. ‘ಪ್ರಜಾವಾಣ್ಯಾಗ ನಿಮ್ಮ ಮಲ್ನಾಡಗಿಡ್ಡ ಓದಿದ್ವಿ; ಭೇಷ್ ಬರ್‌ದೀರಿ. ನಮಗೆ ನಾಲ್ಕು ಮಲ್ನಾಡಗಿಡ್ಡ ಬೇಕು, ಕಳ್ಸೋ ವ್ಯವಸ್ಥೆ ಮಾಡಿದ್ರ ಉಪಕಾರ ಆಗತೈತಿ ನೋಡ್ರಪಾ’ ಎಂದು ಸ್ವಾಮೀಜಿ ಹೇಳಿದಾಗ ಇಲ್ಲವೆನ್ನಲಾಗಲಿಲ್ಲ. ರಾಮಚಂದ್ರಾಪುರ ಮಠದ ಪಶುವೈದ್ಯ ಡಾ. ಕೃಷ್ಣಮೂರ್ತಿಯವರ ಪರಿಚಯವಿದ್ದುದರಿಂದ ಸಂಪರ್ಕ ಸುಲಭವಾಯಿತು. ಮಠಕ್ಕೆ ಹಸುಗಳನ್ನು ಕಳಿಸಲು ಅವರು ಒಪ್ಪಿದರು. ಮಲ್ನಾಡಗಿಡ್ಡ ಕಪ್ಪತಗುಡ್ಡ ಸೇರಿದ್ದು ಕೇಳಿ ಖುಷಿ ಆಯಿತು. ಹಾಗೆಯೇ ಬರಹಗಾರನ ಹೆಗಲೇರುವ ಇಂತಹ ಜವಾಬ್ದಾರಿಗಳ ಅರಿವೂ ಆಯಿತು.

ಪ್ರತಿಯೊಂದು ಲೇಖನ ಪ್ರಕಟವಾದ ನಂತರವೂ ನೂರಾರು ಕರೆಗಳು ಬರುತ್ತವೆ. ಪ್ರತಿಯೊಂದು ಕರೆಯ ಆಶಯವೂ ಭಿನ್ನ. ಪಶುವೈದ್ಯನೂ ಆಗಿರುವ ನನಗೆ ಬರಹಗಾರ ಹಾಗೂ ಪಶುವೈದ್ಯ ಈ ಎರಡೂ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಬೇಕಾದ, ಇನ್ನೊಬ್ಬರಿಗೆ ಅನುಕೂಲವಾಗಲು ಸಾಧ್ಯವಾಗುವಂತಹ ಅನೇಕ ಸನ್ನಿವೇಶಗಳು ಎದುರಾಗಿವೆ. ಇನ್ನು ಮಲ್ನಾಡಗಿಡ್ಡ ಲೇಖನದ ವಿಷಯಕ್ಕೆ ಬಂದರೆ, ಲೇಖನದಲ್ಲಿ ಪ್ರಕಟವಾದ ಕಪಿಲೆಯಂತಹ (ಕೌಲು ಬಣ್ಣದ ಮಲ್ನಾಡಗಿಡ್ಡ ದನ) ಹಸುವೇ ಬೇಕೆಂದು ಪಟ್ಟುಹಿಡಿದಿದ್ದರು ಬೆಂಗಳೂರಿನ ನೆಲಮಂಗಲದ ಕೃಷಿಕರಾದ ಮಂದಾಕಿನಿ. ತೀರ್ಥಹಳ್ಳಿಯ ಆರಗ ಗ್ರಾಮದ ಶಂಕರನಾರಾಯಣ ಭಟ್ಟರನ್ನು ಅವರಿಗೆ ಪರಿಚಯಿಸಿದೆ. ಇರುವ 20 ಕಪಿಲೆ ಹಸುಗಳಲ್ಲಿ ಒಂದನ್ನು ಭಟ್ಟರು ಮಂದಾಕಿನಿಯವರಿಗೆ ಮಾರಿದರು. ಕಾಡು-ಮೇಡು, ಗದ್ದೆ-ತೋಟ, ರಸ್ತೆಯ ಇಕ್ಕೆಲಗಳಲ್ಲಿ ಮೇವು ಅರಸುತ್ತಾ ಸಂಚರಿಸುತ್ತಿದ್ದ ಈ ದನಗಳನ್ನು ಕೊಳ್ಳಲು ಬಯಲುಸೀಮೆಯಿಂದ ಹಲವಾರು ಜನರು ಮಲೆನಾಡಿಗೆ ಬರುತ್ತಿದ್ದಾರೆ. ಹಾಗಾಗಿ 4-5 ಸಾವಿರಕ್ಕೆ ಸಿಗುತ್ತಿದ್ದ ದನಗಳ ಬೆಲೆ ಈಗ ದ್ವಿಗುಣಗೊಂಡಿದೆ. ಇದೇ ಲೇಖನ ನೋಡಿ ಅಮೇರಿಕದ ಟೆಕ್ಸಾಸ್‌ನಲ್ಲಿರುವ ಕರ್ನಾಟಕ ಮೂಲದ ಡಾ. ಮಧುಸೂದನ ಕರೆ ಮಾಡಿದ್ದರು. ಮಲ್ನಾಡಗಿಡ್ಡ ಸಂರಕ್ಷಣೆಗೆ ಆರ್ಥಿಕ ಸಹಾಯ ನೀಡಲು ಮುಂದಾದ ಇವರನ್ನು ಸಂಪರ್ಕಿಸಲು ಮಲ್ನಾಡಗಿಡ್ಡ ಸಂವರ್ಧನ ಪ್ರತಿಷ್ಠಾನಕ್ಕೆ ಪರಿಚಯಿಸಿದೆ. ಇದು ಸಹ ಅನನ್ಯ ಅನುಭವ. ಇದೇ ರೀತಿ ಲೇಖನ ಓದಿದ ಗುಲ್ಬರ್ಗ ರೇಡಿಯೋ ಕೇಂದ್ರದವರು ಫೋನ್ ಮುಖೇನ ಸಂದರ್ಶನ ಪಡೆದಿದ್ದು ಸಹ ಒಂದು ವಿಶಿಷ್ಟ ಅನುಭವ.

‘ಬೇಸಿಗೆಯ ಬೇಗೆ ನೀಗುವುದು ಹೇಗೆ?’ ಇದು ನನ್ನ ಇನ್ನೊಂದು ಪ್ರಕಟಿತ ಲೇಖನ. ಬೇಸಿಗೆ (ಮೇ ತಿಂಗಳ) ಕಾಲದಲ್ಲಿಯೇ ಪ್ರಕಟವಾದ ಇದಕ್ಕೆ ನೂರಾರು ಜನರಿಂದ ಮೆಚ್ಚುಗೆ ವ್ಯಕ್ತವಾಯಿತು. ಆ ಪೈಕಿ ಕೊಟ್ಟಿಗೆಯಲ್ಲಿ ಕೂಲಿಂಗ್ ವ್ಯವಸ್ಥೆಯ ಅನುಶೋಧನೆಯಲ್ಲಿದ್ದ ಮೈಸೂರಿನ ಪರಿಸರ ಇಂಜಿನಿಯರ್ ದಿನೇಶಕುಮಾರ ಅವರಿಗೆ ಲೇಖನ ಪ್ರೇರಣೆಯಾಯಿತು. ಒಂದು ತಿಂಗಳ ನಂತರ ಕರೆಮಾಡಿ ‘ಸಿಸ್ಟ್ಟಮ್ ರೆಡಿಯಾಗಿದೆ, ಮೈಸೂರಿಗೆ ಬಂದರೆ ತೋರಿಸುತ್ತೇನೆ’ ಎಂದಾಗ ಲೇಖನದ ಉದ್ದೇಶ ಈಡೇರಿದ ಭಾವ.

‘ಹಸುವಿಗೂ ಮೆತ್ತನೆಯ ಸುಪ್ಪತ್ತಿಗೆ’ ಇದು ಕೌಮ್ಯಾಟ ಬಗೆಗಿನ ನನ್ನ ಲೇಖನ. ಇದು ಪ್ರಕಟವಾದ ನಂತರದ ಅನುಭವ ಮನರಂಜನೀಯ. ಲೇಖನ ಪ್ರಕಟವಾದ ದಿನವಿಡೀ ದೂರವಾಣಿ ಕರೆಗಳ ಮಹಾಪೂರ. ಮರುದಿನ ಟಿ.ವಿ. ವಾಹಿನಿಯೊಂದರಿಂದ ‘ಕೌಮ್ಯಾಟ್ ಬಗ್ಗೆ ಕಾರ್ಯಕ್ರಮ ಶೂಟ್ ಮಾಡ್ತೀವಿ ದಯವಿಟ್ಟು ಸಹಕರಿಸಿ’ ಎಂಬ ವಿನಂತಿ. ಸರಿ ಎಂದು ಗೆಳೆಯ ಡಾ. ತಿಮ್ಮಪ್ಪ ಅವರನ್ನೂ ಜೊತೆಗೆ ಕರೆದುಕೊಂಡು ಟಿ.ವಿ.ಯವರೊಂದಿಗೆ ಸುತ್ತಿ ಮನೆ ಸೇರಿದಾಗ ರಾತ್ರಿ ಹನ್ನೊಂದು ಘಂಟೆ. ಮರುದಿನವೇ ಕೌಮ್ಯಾಟ್ ಕುರಿತ ಕಾರ್ಯಕ್ರಮ ಪ್ರಸಾರವಾಗಬೇಕಿತ್ತು. ನನ್ನಾಕೆ ಬಂಧುಗಳಿಗೆಲ್ಲ ನಮ್ಮವರ ಕಾರ್ಯಕ್ರಮ ಬರುತ್ತೆ ನೋಡಿ ಎಂದು ಫೋನ್ ಮಾಡಿದ್ದೇ ಮಾಡಿದ್ದು. ನಾನು ಸ್ನೇಹಿತರಿಗೆಲ್ಲ ಎಸೆಮ್ಮೆಸ್ ಕಳಿಸಿದ್ದೆ. ಆಫೀಸ್‌ಗೆ ರಜೆ ಹಾಕಿ ಇಡೀ ದಿನ ಕಾದೆ. ಆದರೆ ಕೌಮ್ಯಾಟ್ ಕಾರ್ಯಕ್ರಮದ ಬದಲಾಗಿ ಬಿಸಿಬಿಸಿ ಚರ್ಚೆಯೊಂದು ಪ್ರಸಾರವಾಯಿತು.

ಈ ರೀತಿ ಅನುಭವಗಳು ಅನೇಕ. ಆದರೆ ಕಾಮ್ ಜತೆಗಿನ ಪಯಣವೇ ಒಂದು ಅದ್ಭುತ ಅನುಭವ. ಮುಗಿದದ್ದೇ ಗೊತ್ತಾಗಲಿಲ್ಲ. ಪ್ರತಿ ತಿಂಗಳು ಲೇಖನ ಬರೆದು ಕೊರಿಯರ್‌ಗೆ ಹಾಕಿದಾಗ ಆದ ಅನುಭವ ಅಕ್ಷರಗಳಲ್ಲಿ ಹೇಳಲು ಸಾಧ್ಯವಿಲ್ಲ. ನಂತರ ಲೇಖನ ಪರಿಷ್ಕರಣೆಗೊಂಡು ಬರುವುದನ್ನು ಕಾಯುತ್ತ ದಿನ ಕಳೆಯುವುದು, ಪರಿಷ್ಕರಿಸಿದ ಲೇಖನ ಪ್ರಕಟಣೆಗೆ ಕಳಿಸುವುದು... ಹೀಗೆ ತಿಂಗಳುಪೂರ್ತಿ ಬರವಣಿಗೆಯ ಗುಂಗಿನಲ್ಲಿಯೇ ಇರುತ್ತಿದ್ದೆ.

ಪಶುವೈದ್ಯನಾಗಿರುವ ನನ್ನ ಯೋಚನೆ, ನೋಟ ಹಾಗೂ ಬೋಧನೆಯ ರೀತಿ ಕಾಮ್ ತರಬೇತಿಯಿಂದ ಬದಲಾಗಿದೆ. ಈಗ ಕ್ಯಾಮರಾ ಸದಾ ಬಳಿಯಲ್ಲಿಯೇ ಇರುತ್ತದೆ. ವಿಶೇಷವೆನಿಸಿದ್ದನ್ನೆಲ್ಲ ಕ್ಲಿಕ್ಕಿಸುತ್ತೇನೆ. ಮೊದಲು ಏನು ಬರೆಯುವುದೆಂದು ತಲೆ ಕೆಡಿಸಿಕೊಳ್ಳುತ್ತಿದ್ದೆ. ಈಗ ಬರೆಯುವುದಕ್ಕೆ ಎಷ್ಟೆಲ್ಲ ಇದೆಯಲ್ಲ ಅನಿಸುತ್ತಿದೆ. ಕಾಮ್ ಬಳಗಕ್ಕೆ ಸದಾ ಚಿರಋಣಿ.

- ಡಾ. ನಾಗರಾಜ ಕೆ.ಎಂ.

 

 
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media