+
Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಭತ್ತ ಸಂರಕ್ಷಣೆಯ ಹಾದಿಯಲ್ಲಿ ಆಹಾರ ಸ್ವಾವಲಂಬನೆ

ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಕಿರುಗಾವಲಿನಲ್ಲಿರುವ ‘ಬಡಾಬಾಗ್’ ಒಳಹೊಕ್ಕರೆ ವಿಶಿಷ್ಟ ಬೆಳೆ ಸಂಯೋಜನೆಯ ಅನಾವರಣ. ವಿಶಾಲವಾದ ಭತ್ತದ ಗದ್ದೆಗಳು. ಅಲ್ಲಲ್ಲಿ ತರಕಾರಿ ತಾಕುಗಳು. ಶತಮಾನ ಕಂಡ ದೈತ್ಯ ಮಾವಿನ ಮರಗಳು. ಅವಕ್ಕೆ ಹಬ್ಬಿರುವ ಸೋರೆ, ಹೀರೆ, ಹಾಗಲ, ತೊಂಡೆ, ಕಾಳುಮೆಣಸಿನ ಬಳ್ಳಿಗಳು. ಫಲಭರಿತ ಪಪ್ಪಾಯಿ, ಚಿಕ್ಕು, ಸೀಬೆ, ಸೀತಾಫಲ. ರಸತುಂಬಿ ನಿಂತ ಕಬ್ಬು. ಬದುಗಳನ್ನು ಹಸಿರಾಗಿಸಿರುವ ಭೃಂಗರಾಜ, ಬ್ರಾಹ್ಮಿ, ನೆಲನೆಲ್ಲಿ, ಹುಳಿಸೊಪ್ಪು, ಹೊನಗೊನೆ, ನೀರಹೊನಗೊನೆ ಮುಂತಾದ ಔಷಧೀಯ ಸಸ್ಯಗಳು. ಹೊಲದ ತುದಿ ಭಾಗವನ್ನು ಆವರಿಸಿರುವ ಗಾಳಿ, ತೇಗ, ಸಿಲ್ವರ್ ಓಕ್. ಕಾಡುಮರಗಳ ಜೀವಂತ ಬೇಲಿ. ಹೀಗೆ ದೃಷ್ಟಿ ಹಾಯುವಷ್ಟು ದೂರವೂ ವೈವಿಧ್ಯಮಯ ಬೆಳೆಗಳ ತೇರು.

ಇಪ್ಪತ್ತು ಎಕರೆಯಲ್ಲಿ ನೂರಕ್ಕೂ ಮಿಕ್ಕಿ ಬೆಳೆವೈವಿಧ್ಯ. ಪ್ರತಿ ಬೆಳೆಯಲ್ಲೂ ವಿವಿಧ ತಳಿಗಳು. ಭತ್ತವೊಂದರಲ್ಲೇ 700 ತಳಿ. ದಾಖಲೆಗಳ ಪ್ರಕಾರ ಇದು ದೇಶದಲ್ಲೇ ಎರಡನೆಯ ದೊಡ್ಡ ‘ರೈತ ಸಂಗ್ರಹ.’ 120 ವಿಧದ ಮಾವು. ಆಹಾರಕೇಂದ್ರಿತ ಕೃಷಿ. ಆರ್ಥಿಕ ಭದ್ರತೆಯೆಡೆಗೂ ಗಮನ. 13 ಮಂದಿಯಿರುವ ಕುಟುಂಬದ ಅಗತ್ಯದ ಶೇಕಡಾ 70ರಷ್ಟು ಆಹಾರ ಹೊಲದಿಂದಲೇ ಪೂರೈಕೆ. ‘ಮರದ ಕೆಳಗೆ ನಿಂತರೆ ಹಣ್ಣು, ನೆಲ ಅಗೆದರೆ ಗಡ್ಡೆ-ಗೆಣಸು, ಕೈ ಚಾಚಿದರೆ ದವಸ-ಧಾನ್ಯ, ಅತ್ತಿತ್ತ ನೋಡಿದರೆ ಪಕ್ಷಿವೈವಿಧ್ಯ ಕಾಣುವಂತಿರಬೇಕು. ಎಲ್ಲಾ ಋತುಗಳಲ್ಲೂ ನಾವು ಹೊಲದಲ್ಲಿರುವಂತಿರಬೇಕು’ ಎಂಬ ಕನಸನ್ನು ಯಶಸ್ವಿಯಾಗಿ ಬೆನ್ನತ್ತಿರುವ ಕೃಷಿಕನ ವಯಸ್ಸು 37. ಹೆಸರು ಸೈಯದ್ ಘನಿ ಖಾನ್.

ಐತಿಹಾಸಿಕ ಮಾವಿನ ತಳಿಗಳ ಸಂರಕ್ಷಕ ಸೈಯದ್ ಘನಿ ಖಾನ್ ದೇಸಿ ಭತ್ತ ಸಂಗ್ರಾಹಕರಾಗಿ ದೊಡ್ಡ ಎತ್ತರವನ್ನು ತಲುಪಿದ್ದಾರೆ. ಇತರ ರೈತರಿಗೂ ಈ ಹಾದಿಯಲ್ಲಿ ಮುನ್ನಡೆಯಲು ಪ್ರೇರೇಪಿಸಿದ್ದಾರೆ. ಕುಟುಂಬದ ಆಹಾರ ಭದ್ರತೆಯನ್ನೂ ಸಾಕಾರಗೊಳಿಸಿದ ಘನಿ ಅವರ ಸಾಧನೆ ಅಪರೂಪದ್ದು. ಹಳ್ಳಿಯ ಯುವಪೀಳಿಗೆ ಪಟ್ಟಣದತ್ತ ಮುಖ ಮಾಡಿರುವ ಈ ಸಂದರ್ಭದಲ್ಲಿ ಪದವೀಧರ ಯುವಕರೊಬ್ಬರು ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ. ಮನೆಯ ಸದಸ್ಯರೆಲ್ಲ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

ಕೃಷಿಕರಿಗೆ ಮಾದರಿಯಾಗಬಲ್ಲ, ಸಮಸ್ಯೆಗಳ ಸುಳಿಯಲ್ಲಿರುವ ಕೃಷಿರಂಗಕ್ಕೆ ಹೊಸ ದಿಕ್ಕು ತೋರಬಲ್ಲ ಕೃಷಿಕರ ಪ್ರಯತ್ನಗಳನ್ನು ಕೃಷಿ ಮಾಧ್ಯಮ ಕೇಂದ್ರ ಕಳೆದ ಹತ್ತು ವರ್ಷಗಳಿಂದ ಪುಸ್ತಕರೂಪದಲ್ಲಿ ಪ್ರಕಟಿಸುತ್ತಿದೆ. ಸೈಯದ್ ಘನಿ ಖಾನ್ ಅವರ ಸಾಧನೆಯ ವಿವರಗಳನ್ನು ಪತ್ರಕರ್ತ ಹಾಗೂ ಕಾಮ್ ಸಂಪನ್ಮೂಲ ವ್ಯಕ್ತಿ ಆನಂದತೀರ್ಥ ಪ್ಯಾಟಿ ವಿಸ್ತೃತವಾಗಿ ದಾಖಲಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಈ ಕೃತಿ ಇನ್ನೊಂದಷ್ಟು ಜನರಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು, ಹೊಸ ಹುರುಪಿನೊಡನೆ ಮುಂದುವರಿಯಲು ಮಾನಸಿಕ ಸ್ಥೈರ್ಯ ನೀಡಬಹುದು ಎಂದು ಭಾವಿಸಿದ್ದೇವೆ.


ಇದು ಕೃಷಿ ಮಾಧ್ಯಮ ಕೇಂದ್ರದ 19ನೇ ಕೃತಿ. ಬೆಲೆ: ರೂ.30. ಪ್ರತಿಗಳಿಗೆ: ಕೃಷಿ ಮಾಧ್ಯಮ ಕೇಂದ್ರ, ನಂ.327, ಮೊದಲನೇ ಮಹಡಿ, ರಾಯಚೂರು ಪ್ಲಾಟ್ಸ್, ನಾರಾಯಣಪುರ, ಧಾರವಾಡ - 580 008


 
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media