+
Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಸುಸ್ಥಿರ ಕೃಷಿಗೆ ಹತ್ತಾರು ಹಾದಿ

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬೆಂಗಳಿ ವೆಂಕಟೇಶ ತಮಗಿರುವ ಒಂದೂ ಮುಕ್ಕಾಲು ಎಕರೆ ಹಿಡುವಳಿಯಲ್ಲಿ ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಕೃಷಿಯ ಜೊತೆಗೆ ಮಿಶ್ರಕೃಷಿಯನ್ನೂ ಶ್ರದ್ಧೆಯಿಂದ ಮಾಡಿ ಯಶಸ್ವಿಯಾದವರು. ಸೀಮಿತ ಸ್ಥಳಾವಕಾಶ ಹಾಗೂ ಲಭ್ಯ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡಿರುವ ಅವರು ವೈವಿಧ್ಯಮಯ ಬೆಳೆಗಳನ್ನು ಬೆಳೆದು ಏಕಬೆಳೆಯ ಅನಿಶ್ಚಿತತೆಯಿಂದ ಹೊರಬಂದವರು. ಮುಖ್ಯಬೆಳೆ ಅಡಿಕೆಗೆ ನೀಡಿದ ಮಹತ್ವವನ್ನೇ ಉಳಿದ ಬೆಳೆಗಳಿಗೂ ನೀಡಿದ್ದಾರೆ. ತೋಟದ ತುಂಬಾ ಹಬ್ಬಿರುವ ಶುಂಠಿ, ಅರಿಶಿನ, ಕಾಳುಮೆಣಸುಗಳಿಂದ ಹಿಡಿದು ತೋಟಗಾರಿಕಾ ಬೆಳೆಗಳಾದ ಚಿಕ್ಕು, ಹಲಸು, ಪುನರ್ಪುಳಿಗಳ ಮೌಲ್ಯವರ್ಧನೆ, ಮಾರಾಟ ಅವರ ಕ್ರಿಯಾಶೀಲತೆಯನ್ನು ಎತ್ತಿ ತೋರಿಸುತ್ತದೆ. ಅವರಲ್ಲಿರುವ ತೆಂಗು ಉತ್ತಮ ಗುಣಮಟ್ಟದ್ದೆಂದು ಬೇಡಿಕೆ ಹೆಚ್ಚಿದಾಗ ಪ್ರಾರಂಭಿಸಿದ ತೆಂಗಿನ ಗಿಡಗಳ ನರ್ಸರಿ ಮಾರುಕಟ್ಟೆ ಗುರುತಿಸುವ ಅವರ ಕೌಶಲದ ಜೊತೆಗೆ ಒಳಿತನ್ನು ಇತರರಿಗೆ ದಾಟಿಸುವ ಆಶಯವನ್ನೂ ತಿಳಿಸುತ್ತದೆ. ಯಾರೂ ಬೆಳೆಸಲು ಬಯಸದ, ಆದರೆ ಉತ್ತಮ ಬೇಡಿಕೆಯಿರುವ ಮಾಡಹಾಗಲವನ್ನು ಬೆಳೆಸಿದ್ದಾರೆ. ಆ ಮೂಲಕ ನಶಿಸಿಹೋಗುತ್ತಿದ್ದ ಒಂದು ತಳಿಗೆ ಹೊಸಹುಟ್ಟು ನೀಡಿದ್ದಷ್ಟೇ ಅಲ್ಲದೆ, ಕೃಷಿಪೂರಕ ಚಟುವಟಿಕೆಗಳ ಕುರಿತು ಹೊಸ ಚಿಂತನೆಗೆ ನಾಂದಿಹಾಡಿದ್ದಾರೆ. ತಮ್ಮಲ್ಲಿರುವ ಪ್ರತಿಯೊಂದು ಬೆಳೆಯ ಬಳಕೆ, ಉಪಯೋಗಗಳನ್ನು ಮನಗಂಡು ಆ ಪ್ರಕಾರ ಅದರ ಮೌಲ್ಯವನ್ನು ಕಂಡುಕೊಂಡಿದ್ದಾರೆ.
ಉತ್ತಮ ಯೋಜನೆ ಹಾಗೂ ಪರಿಶ್ರಮದ ನಿರ್ವಹಣೆಯಿಂದ ಸಣ್ಣ ಹಿಡುವಳಿಯಲ್ಲೂ ಸ್ವಾವಲಂಬಿ ಕೃಷಿ ಬದುಕು ಸಾಧ್ಯ ಎಂಬುದನ್ನು ಬೆಂಗಳಿ ಕುಟುಂಬದ ಸದಸ್ಯರು ತೋರಿಸಿಕೊಟ್ಟಿದ್ದಾರೆ. ತೆಂಗಿನ ಮರ ಏರುವುದೂ ಸೇರಿದಂತೆ ಎಲ್ಲಾ ಕೃಷಿ ಕೆಲಸಗಳನ್ನೂ ಅಗತ್ಯಬಿದ್ದರೆ ತಾವೇ ಮಾಡಲು ಸಿದ್ಧರಿರುವುದರಿಂದ ಕೃಷಿಗೆ ಸಹಾಯಕರ ಅವಲಂಬನೆಯೂ ಕಡಿಮೆ. ಬೆಂಗಳಿ ಕುಟುಂಬದ ಮೌಲ್ಯವರ್ಧನೆಯ ಪ್ರಯತ್ನಗಳೂ ಸುಸ್ಥಿರತೆಯೆಡೆಗಿನ ಹೊಸ ಹಾದಿಗಳ ಹುಡುಕಾಟದ ಫಲ. ಕೃಷಿ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಂಡುದರಿಂದ ಮಾರುಕಟ್ಟೆಯೂ ಕಷ್ಟವೆನಿಸಿಲ್ಲ.
ಕೃಷಿಗೀಗ ಇಳಿಗಾಲ, ಕೃಷಿಕರಿಗೆ ಭವಿಷ್ಯವಿಲ್ಲ ಎಂಬ ಭಾವನೆ ದಟ್ಟವಾಗುತ್ತಿರುವ ಸದ್ಯದ ಸಂದರ್ಭದಲ್ಲಿ ಬೆಂಗಳಿ ಕುಟುಂಬ ಸಾಗುತ್ತಿರುವಂತಹ ಸ್ವಾವಲಂಬನೆಯ ಕಾಲುದಾರಿಗಳ ಮೂಲಕ ಸುಸ್ಥಿರತೆಯ ಹೆದ್ದಾರಿ ಕಟ್ಟಬೇಕಾಗಿದೆ. ಬೆಂಗಳಿ ಕುಟುಂಬದ ಕೃಷಿ ಪ್ರಯತ್ನಗಳನ್ನು ಕಾಮ್ ಫೆಲೋ ಡಾ. ಗಣೇಶ ಎಂ. ನೀಲೇಸರ ಅವರು ವಿಸ್ತೃತವಾಗಿ ದಾಖಲಿಸಿದ್ದಾರೆ.
ಇದು ಕೃಷಿ ಮಾಧ್ಯಮ ಕೇಂದ್ರದ 18ನೇ ಕೃತಿ. ಬೆಲೆ: ರೂ.30. ಪ್ರತಿಗಳಿಗೆ: ಕೃಷಿ ಮಾಧ್ಯಮ ಕೇಂದ್ರ, ನಂ.327, ಮೊದಲನೇ ಮಹಡಿ, ರಾಯಚೂರು ಪ್ಲಾಟ್ಸ್, ನಾರಾಯಣಪುರ, ಧಾರವಾಡ - 580 008


 
ಪುಸ್ತಕ ಡೌನ್‌ಲೋಡ್ ಮಾಡಿ
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media