Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಕಾಮ್ ತರಬೇತಿಯ ಕುರಿತು ಫೆಲೋಗಳ ಅನಿಸಿಕೆ

 

ನಾನು ಓದಿದ್ದೆಲ್ಲ ಹೆಚ್ಚಾಗಿ ಅಂಚೆ ಶಿಕ್ಷಣದ ಮೂಲಕ. ಆದರೆ ಈ ತರಬೇತಿ ತೀರ ಭಿನ್ನ. ಅಭ್ಯರ್ಥಿಗಳಿಗೆ ವೈಯಕ್ತಿಕ ಗಮನ ಕೊಡುತ್ತಾರೆ ಎಂದು 'ಅಡಿಕೆ ಪತ್ರಿಕೆ'ಯಲ್ಲಿ ಓದಿದ್ದೆ. ಅದರ ನಿಜ ಅನುಭವವಾದದ್ದು ಕೋರ್ಸಿಗೆ ಸೇರಿದ ನಂತರ. ಇಲ್ಲಿ ನಿರೀಕ್ಷೆಗೆ ಮೀರಿ ಕಲಿತೆ. ತುಂಬಾ ಉಪಯುಕ್ತ ಪಠ್ಯ. ಮಾಹಿತಿ ಸುಲಭವಾಗಿ ಅರ್ಥವಾಗುತ್ತದೆ. ಭಾಷೆ ಸರಳ, ಸುಂದರ. ತರಬೇತಿಯ ಅವಧಿಯಲ್ಲಿ ಕೇಂದ್ರಕ್ಕೆ ಬಹಳ ಸಲ ಫೋನ್ ಮಾಡಿದ್ದೇನೆ. ಪ್ರತಿ ಸಲವೂ ಬೇಕಾದ ಮಾಹಿತಿ ಒದಗಿಸಿದ್ದಾರೆ; ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ಎಲ್ಲ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿದ್ದೇನೆ. ಎಲ್ಲರೂ ಸಂತೋಷದಿಂದ ಮಾಹಿತಿ ಒದಗಿಸಿದ್ದಾರೆ. ಮೊದಲು ಕೃಷಿ ಲೇಖನಗಳನ್ನು ಬರೆಯಲು ಆಗುತ್ತಿರಲಿಲ್ಲ. ಈಗ 'ಬರೆಯಬಲ್ಲೆ' ಎಂಬ ವಿಶ್ವಾಸ ಮೂಡಿದೆ. ತೋಟಗಳನ್ನು ಸುತ್ತಿದ್ದರಿಂದ ಸಾಕಷ್ಟು ಕಲಿತೆ. ಕಳೆದ ಹತ್ತು ವರ್ಷಗಳಿಂದ ಪುಸ್ತಕ ಖರೀದಿ, ಓದು ನಿಲ್ಲಿಸಿದ್ದೆ. ಮತ್ತೆ ಪುಸ್ತಕದಲ್ಲಿ ಅಭಿರುಚಿ ಮೂಡಿದ್ದೇ ಕಾಮ್‌ನಿಂದ. ಎಲ್ಲ ಗುರುಗಳು ಓದಿಗೆ ಹೆಚ್ಚು ಮಹತ್ವ ಕೊಡಿ ಎಂದದ್ದು ಪರಿಣಾಮ ಬೀರಿದೆ. ತರಬೇತಿಯ ಅವಧಿಯಲ್ಲಿ ಸಾಕಷ್ಟು ಕೃಷಿ ಪುಸ್ತಕಗಳನ್ನು ಸಂಗಹಿಸಿದ್ದೇನೆ; ಓದಿದ್ದೇನೆ.
ಕೆ. ರೇಖಾ ಸಂಪತ್, ಬೆಂಗಳೂರು

ಅಸೈನ್‌ಮೆಂಟ್ ಬರೆಯುವುದು ಹೊರೆಯೆನಿಸಲಿಲ್ಲ. ಕೃಷಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನನಗೆ ಅಸೈನ್‌ಮೆಂಟ್ ಬರವಣಿಗೆ ಖುಷಿ ಕೊಡುವ ಸಂಗತಿಯಾಗಿತ್ತು. ನನ್ನ ಲೇಖನ - 'ಹಂದಿ ಹಾವಳಿಗೆ ಬಾಟಲಿ ಬಾಣ' ವಿಜಯ ಕರ್ನಾಟಕದ 'ಕೃಷಿ ವಿಜಯ'ದಲ್ಲಿ ಪ್ರಕಟವಾದಾಗ ಇನ್ನೂರಕ್ಕೂ ಹೆಚ್ಚು ರೈತರು ಸಂಬಂಧಿಸಿದ ರೈತರಿಗೆ ಫೋನ್ ಮಾಡಿ ಅವರು ಅಳವಡಿಸಿರುವ ತಾಂತ್ರಿಕತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ತುಂಬ ಸಂತಸ ತಂದಿತು. ಆ ರೈತರಿಗೆ ಧಾರವಾಡ ಕೃಷಿಮೇಳದಲ್ಲಿ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಚಾರ. ಮುಂಬರುವ ದಿನಗಳಲ್ಲಿ ಅಸೈನ್‌ಮೆಂಟ್‌ಗಳ ಒತ್ತಡವಿಲ್ಲ. ಆದ್ದರಿಂದ ಇನ್ನೂ ಉತ್ತಮವಾದ ಲೇಖನಗಳನ್ನು ಬರೆಯಬೇಕೆಂಬ ಆಸೆ ಮೂಡಿದೆ.
ಸುಶೀಲಾ ಬಿ. ಪಾಟೀಲ, ಬಾಗಲಕೋಟೆ

ಪ್ರಾಥಮಿಕ ಶಿಬಿರದಲ್ಲಿ ಎಲ್ಲ ಪಾಠಗಳು ಚೆನ್ನಾಗಿದ್ದವು. ಅಸೈನ್‌ಮೆಂಟ್‌ಗಳ ಪರಿಶೀಲನೆ ಹಾಗೂ ಲೇಖನ ಸುಧಾರಣೆಯ ಸಲಹೆಗಳು ತುಂಬಾ ಉಪಯುಕ್ತವೆನಿಸಿದವು. ಎಲ್ಲ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ಮಾಹಿತಿ ದೊರಕಿದೆ. ಅಧ್ಯಯನ ಪ್ರಬಂಧ ತಯಾರಿ ನಮ್ಮ ಜ್ಞಾನವರ್ಧನೆಗೆ ಸಹಕಾರಿ. ವಿಶ್ವವಿದ್ಯಾಲಯಗಳ ಕೋರ್ಸ್‌ಗಳಿಗಿಂತ ಈ ತರಬೇತಿ ಅನೇಕ ರೀತಿಯಲ್ಲಿ ಭಿನ್ನ. ತರಬೇತಿಯ ಅವಧಿ ಕಡಿಮೆಯೆನಿಸಿತು.
ವಂದನಾ ಎ. ಪೂಜಾರಿ, ಬೆಳಗಾವಿ

ಕಾಮ್ ಕೋರ್ಸಿನಿಂದ ನಿರೀಕ್ಷೆಗೂ ಮೀರಿದ ಅನುಭವ ಪಡೆದಿದ್ದೇನೆ. ಇಷ್ಟು ಕ್ರಮಬದ್ಧವಾದ ತರಬೇತಿ ಬೇರೆ ನೋಡಿಲ್ಲ. ಪ್ರಾಥಮಿಕ ಶಿಬಿರ ನನ್ನನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿತ್ತು. ಅಧ್ಯಯನ ಪ್ರಬಂಧ ಎಂ.ಎಸ್ಸಿ ಥೀಸಿಸ್ ಬರೆದದ್ದಕ್ಕಿಂತಲೂ ಹೆಚ್ಚು ತ್ರಾಸದಾಯಕ ಎನಿಸಿತು. ಆದರೆ ಅದರಿಂದ ಹೆಚ್ಚಿನ ಪ್ರಯೋಜನವಾಯಿತು. ಪತ್ರಿಕೆಗಳಲ್ಲಿ ಲೇಖನ ಪ್ರಕಟಗೊಂಡು ತಿಂಗಳುಗಳು ಕಳೆದರೂ ರೈತರು ಫೋನ್ ಮಾಡಿ ಇನ್ನಷ್ಟು ಮಾಹಿತಿ ಪಡೆಯುತ್ತಿದ್ದುದು ಹೆಚ್ಚು ಖುಷಿ ಕೊಟ್ಟಿದೆ.

ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪದವಿ ಪಡೆಯುವುದಕ್ಕಿಂತ 'ನೋಡಿ ತಿಳಿ ಮಾಡಿ ಕಲಿ' ಎಂಬ ಕಾಮ್ ಕಲಿಕೆ ಹೆಚ್ಚು ಸೂಕ್ತವಾಗಿದೆ. ಬರವಣಿಗೆಯಲ್ಲಿ ಸುಧಾರಿಸಿದ್ದೇನೆ. ವಿಷಯಗಳನ್ನು ಗುರುತಿಸುವುದನ್ನು ಮತ್ತು ಲೇಖನಕ್ಕಾಗಿ ಆರಿಕೊಂಡ ವಿಷಯವನ್ನು ಬೇರೆಬೇರೆ ಕೋನಗಳಿಂದ ನೋಡುವುದನ್ನು ಕಲಿತಿದ್ದೇನೆ. ಹುಮ್ಮಸ್ಸು ಹೆಮ್ಮರವಾಗಿದೆ. ಕಾಮ್‌ಗೆ ಹ್ಯಾಟ್ಸ್ ಆಫ್!
ಗಿರೀಶ್ ಹೆಚ್.ಸಿ., ತುಮಕೂರು

ತರಬೇತಿಯಿಂದ ನಿರೀಕ್ಷೆ ಬಹಳಷ್ಟಿತ್ತು. ಆದರೆ ಇಡೀ ತರಬೇತಿ ಅವೆಲ್ಲವನ್ನೂ ಮೀರಿ ನಿಂತಿತ್ತು. ಪ್ರಾಥಮಿಕ ಶಿಬಿರ ಒಂದು ಅವಿಸ್ಮರಣೀಯ ಅನುಭವ. ಬಹಳ ಅಚ್ಚುಕಟ್ಟಾಗಿ ಶಿಸ್ತಿನಿಂದ ಕೂಡಿತ್ತು. ಇದು ಕೇವಲ 'ಪ್ರಮಾಣ ಪತ್ರ'ದ ಕೋರ್ಸ್ ಅಲ್ಲ. ನಮ್ಮ ಚಿಂತನೆ, ತಿಳಿವಳಿಕೆ ಮತ್ತು ಜವಾಬ್ದಾರಿ ಹೆಚ್ಚಿಸುವ ತರಬೇತಿ. ಅನುಭವಿ ವ್ಯಕ್ತಿಗಳ ಜತೆಗೆ ಒಡನಾಟ ಬೆಳೆಸುವ, ಇನ್ನಷ್ಟು ಕಲಿಯಬೇಕು ಎಂಬ ಪ್ರೇರಣೆ ಮೂಡಿಸುವ ವ್ಯವಸ್ಥೆ ಇಲ್ಲಿದೆ. ಕ್ಯಾಮ್ ಮತ್ತು ಸಂಪನ್ಮೂಲ ವ್ಯಕ್ತಿಗಳು ನೀಡಿದ ಸೂಚನೆಗಳು ಅಮೂಲ್ಯವಾದವುಗಳು. ಅಸೈನ್‌ಮೆಂಟ್‌ಗಳನ್ನು ಬರೆಯಲು ಕಷ್ಟಪಟ್ಟಿದ್ದು ನಿಜ. ಆದರೆ ಅದರಲ್ಲಿ ಒಂದು ಸಾರ್ಥಕತೆ ಇದೆ.
ಜೆ. ಭೋಜರಾಜ್, ಚಿತ್ರದುರ್ಗ

ತರಬೇತಿ ಕೃಷಿ ವಿಚಾರಗಳನ್ನು ಕುರಿತು ಬರೆಯುವ ವಿಶ್ವಾಸವನ್ನು ಗಟ್ಟಿಮಾಡುತ್ತಿತ್ತು. ಸಣ್ಣ, ಸಣ್ಣ ಸಂಗತಿಗಳನ್ನೂ ತಿಳಿಸಿಕೊಟ್ಟ ಸರಳ, ಸವಿವರ ಪಠ್ಯ ಪರಿಣಾಮಕಾರಿಯಾಗಿತ್ತು. ತಿಂಗಳ ಅಸೈನ್‌ಮೆಂಟ್‌ಗಳು ಮತ್ತು ಅವುಗಳ ಕೂಲಂಕಷ ಪರಿಶೀಲನೆಯಿಂದಾಗಿ ಬರವಣಿಗೆ ಸಾಕಷ್ಟು ಸುಧಾರಿಸಿತು. ಮಾಹಿತಿಮೂಲವನ್ನು ಸಂಪರ್ಕಿಸುವ ಬಗೆಯಿಂದ ಹಿಡಿದು ಸಂದರ್ಶನ ಮಾಡುವ ರೀತಿ, ವಿಷಯ ಸಂಗ್ರಹಣೆ ಹಾಗೂ ಪತ್ರಿಕೆಗಳಿಗೆ ಲೇಖನವನ್ನು ಕಳುಹಿಸುವ ವರೆಗೆ ವಿವಿಧ ಹಂತಗಳು ಮನದಟ್ಟಾದವು. ಪ್ರಾಥಮಿಕ ಶಿಬಿರ ಒಂದು ಅನನ್ಯ ಅನುಭವ. ಶಿಬಿರದ ಅವಧಿಯನ್ನು ಒಂದು ವಾರಕ್ಕೆ ಹೆಚ್ಚಿಸಿದರೆ ಅನುಕೂಲ.
ದೇವರಾಜ ಕೆ.ಕೆ., ಸುಳ್ಯ

ತರಬೇತಿಯ ಅವಧಿಯಲ್ಲಿ ನಾನು ಅಡಿಕೆ ಪತ್ರಿಕೆಯಲ್ಲಿ ಕರಿ ಗಜಿವಿಲಿ ಭತ್ತದ ಕುರಿತು ಬರೆದ ಲೇಖನವನ್ನು ಓದಿ ರಾಜ್ಯದ ವಿವಿಧೆಡೆಗಳಿಂದ 15 ಮಂದಿ ಬೀಜ ತರಿಸಿಕೊಂಡು, ಭತ್ತ ಬೆಳೆದಿದ್ದಾರೆ. ಇದು ತುಂಬ ಖುಷಿಯ ವಿಚಾರ. ವಿವಿಧ ಪತ್ರಿಕೆಗಳಲ್ಲಿ ನನ್ನ ಎಂಟು ಲೇಖನಗಳು ಪ್ರಕಟವಾಗಿವೆ.
ಆರ್.ಬಿ. ಹಿರೇಮಠ, ಧಾರವಾಡ

ವಿಶ್ವವಿದ್ಯಾಲಯದ ಅಂಚೆತೆರಪಿನ ಕೋರ್ಸ್‌ಗಳು ಯಾಂತ್ರಿಕವಾಗಿ ನಡೆಯುತ್ತವೆ. ಅಲ್ಲಿ ನಮ್ಮ ಆತಂಕಗಳಿಗೆ ಸ್ಪಂದನೆ ಇಲ್ಲ. ಇದು ನನ್ನ ಹಿಂದಿನ ಎರಡು ಕೋರ್ಸ್‌ಗಳ ಅನುಭವ. ಆದರೆ ಕಾಮ್‌ನಲ್ಲಿ ನಾವೆಲ್ಲರೂ ಒಂದೇ ಕುಟುಂಬದವರಂತೆ ಎಲ್ಲರೂ ಸ್ಪಂದಿಸುವುದು ತುಂಬಾ ಸಂತಸ ಹಾಗೂ ಸೋಜಿಗದ ವಿಷಯ. ಇಲ್ಲಿ ತರಬೇತಿ ಪಡೆದವರು ಎಂದಿಗೂ ಕಾಮ್ ಮರೆಯಲಾರರು. ತರಬೇತಿಯ ಅವಧಿಯಲ್ಲಿ ನನ್ನ 15 ಲೇಖನಗಳು ಪ್ರಕಟಗೊಂಡಿವೆ. ಪುನರ್ಮನನ ಶಿಬಿರ ತುಂಬಾ ಸಹಕಾರಿಯಾಯಿತು. ಕಾಮ್ ಕೇವಲ ಕಲಿಕೆಯ ಕೇಂದ್ರವಾಗಿರದೆ ಪರಸ್ಪರ ಸಹಕಾರ, ಪ್ರೀತಿ-ವಿಶ್ವಾಸ ಬೆಳೆಸುವ, ಶಿಸ್ತು-ಸಂಯಮ ರೂಢಿಸಿಕೊಳ್ಳಲು ನೆರವಾಗುವ ಕೇಂದ್ರವಾಗಿದೆ. ಇದರ ಭಾಗವಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ಅನುಸೂಯ ಶರ್ಮ, ಬೆಂಗಳೂರು

ಹಿಂದೆಂದೂ ಪಡೆಯದ ಅನುಭವವನ್ನು ಪ್ರಾಥಮಿಕ ಶಿಬಿರದಲ್ಲಿ ಪಡೆದಿದ್ದೇನೆ. ನಾನು ತಿಳಿದಿರುವ ವಿಚಾರಗಳನ್ನು ಹಂಚಿಕೊಳ್ಳಲು, ಇನ್ನಷ್ಟು ಕಲಿಯಲು ತರಬೇತಿ ನೆರವಾಗಿದೆ. ಇನ್ನಷ್ಟು ಬರೆಯಬೇಕೆಂಬ ಹುಮ್ಮಸ್ಸು ಮೂಡಿದೆ.
ಶ್ರೀಪ್ರಕಾಶ, ರಾಮದುರ್ಗ

ಈಗ `ಫೋಕಸ್' ನನ್ನ ಮಂತ್ರ. ಯೋಚನೆಯ ಧಾಟಿಯೇ ಬದಲಾಗಿದೆ. ಸಮಯ ಪಾಲನೆಗೆ ಒತ್ತು ನೀಡುತ್ತೇನೆ. ಎಲ್ಲದರ ಬಗ್ಗೆ ಆಸಕ್ತಿಯೂ ಹೆಚ್ಚಾಗಿದೆ. ನನ್ನ ಜೀವನದಲ್ಲಿ ಮತ್ತೆ ನಗು ಬಂದಿದೆ. ತರಬೇತಿಯ ಶುಲ್ಕ ಹೆಚ್ಚಿಸಬಹುದು. ಯಾರೂ ಇಷ್ಟೊಂದು ಮನಸ್ಸಿಗೆ ಹಚ್ಚಿಕೊಂಡು ಸ್ವಂತ ಮಕ್ಕಳಿಗೆ ಪಾಠಮಾಡಿದಂತೆ ಹೇಳಿಕೊಡುವುದಿಲ್ಲ.
ಲಲಿತಾ ರಾವ್ ಎಂ.ಜಿ., ಪಾವಗಡ

ತರಬೇತಿಯ ಅವಧಿಯಲ್ಲಿ14 ಲೇಖನಗಳು ಪ್ರಕಟವಾಗಿವೆ. ನನಗಂತೂ ಅಸೈನ್ ಮೆಂಟ್ ಗಳನ್ನು ಕಳುಹಿಸುವುದಕ್ಕಿಂತ ಅದು ವಾಪಸ್ ಬಂದ ಮೇಲೆ ನೋಡುವುದು ಖುಷಿ ಕೊಡುತ್ತಿತ್ತು. ಏಕೆಂದರೆ ಅವುಗಳಲ್ಲಿ ಅಮೂಲ್ಯ ಸಲಹೆಗಳು ಇರುತ್ತಿದ್ದವು. ಅವನ್ನು ಅನುಸರಿಸಿ ನಾನು ಬರವಣಿಗೆಯಲ್ಲಿ ಸುಧಾರಣೆ ಕಂಡುಕೊಳ್ಳಲು ಸಾಧ್ಯವಾಯಿತು.
ನಿತಿನ್ ಹೆಗಡೆ ಮುತ್ತಿಗೆ, ಬೆಂಗಳೂರು

ತರಬೇತಿಯಲ್ಲಿ ಹಲವಷ್ಟು ವಿಷಯಗಳನ್ನು ತಿಳಿಯುವಂತಾಯಿತು. ಅನುಭವಿ ಸಂಪನ್ಮೂಲ ವ್ಯಕ್ತಿಗಳು ನೀಡಿದ ಉಪನ್ಯಾಸ ನನ್ನ ಜ್ಞಾನದ ಮಟ್ಟವನ್ನು ಹೆಚ್ಚಿಸಿತು. ಪಠ್ಯ ಅಮೂಲ್ಯ ಮಾಹಿತಿಯ ಕಣಜವಾಗಿತ್ತು. ತರಬೇತಿಯಲ್ಲಿ ನನಗಾದ ಪ್ರಯೋಜನದ ಮುಂದೆ ಶುಲ್ಕ ಏನೇನೂ ಹೊರೆ ಅನ್ನಿಸಲಿಲ್ಲ. ಅಧ್ಯಯನ ಪ್ರಬಂಧದಿಂದಾಗಿ ಒಂದು ವಿಷಯದ ಬಗ್ಗೆ ಏನೆಲ್ಲಾ ಮಾಹಿತಿ ಸಂಗ್ರಹಿಸಬಹುದು ಎಂಬುದು ತಿಳಿಯಿತು.
ಬಿ.ಎಂ. ಲವಕುಮಾರ್, ಮೈಸೂರು

ನೀವು ಅಸೈನ್‌ಮೆಂಟ್‌ಗಳಲ್ಲಿ ಸೂಚಿಸುತ್ತಿದ್ದ ತಿದ್ದುಪಡಿ - ಮುಖ್ಯವಾಗಿ ಶೀರ್ಷಿಕೆ, ಉಪ ಶೀರ್ಷಿಕೆಗಳು - ತುಂಬಾ ಚೆನ್ನಾಗಿರುತ್ತಿದ್ದವು. ತರಬೇತಿಯಲ್ಲಿ ಅಧ್ಯಯನ ಪ್ರಬಂಧ ನಿಜಕ್ಕೂ ಪ್ರಯೋಜನಕರ. ಲೇಖನ ಹೇಗಿರಬೇಕು ಎಂಬ ಪ್ರಶ್ನೆಗೆ ಕೋರ್ಸಿನಿಂದಾಗಿ ಸಮರ್ಪಕ ಉತ್ತರ ಸಿಕ್ಕಿದೆ. ಬರವಣಿಗೆ ಸುಧಾರಿಸುವುದು ಸಾಧ್ಯವಾಗಿದೆ.
ಅಕ್ಷಯರಾಮ ಕೆ., ಸುಳ್ಯ

ಹೊಸಹಳ್ಳಿಯಲ್ಲಿ ನಡೆದ ಪ್ರಾಥಮಿಕ ಶಿಬಿರ ಕಾಲೇಜು ದಿನಗಳನ್ನು ನೆನಪಿಸುವಂತಿತ್ತು. ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯ ಮಹಾಪೂರವೇ ಹರಿದು ಬಂತು. ತಿಂಗಳ ಕೊನೆ ಬಂದಂತೆಲ್ಲಾ ಅಸೈನ್‌ಮೆಂಟ್ ಸಮಯಕ್ಕೆ ಸರಿಯಾಗಿ ಒಪ್ಪಿಸಲು ಸಾಧ್ಯವಾದೀತೇ ಎಂದು ಯೊಚಿಸಿ ತಲೆಬಿಸಿ ಆದದ್ದೂ ಇದೆ. ಕೆಲಸದ ಒತ್ತಡಗಳಿದ್ದರೂ ಕೇಂದ್ರದ ನಿರಂತರ ಸಂಪರ್ಕ ಬರವಣಿಗೆ ಮುಂದುವರಿಸಲು ಸಹಕಾರಿಯಾಗಿತ್ತು. ತರಬೇತಿಯ ಅವಧಿಯಲ್ಲಿ ಕೆಲವು ಲೇಖನಗಳು ಪ್ರಕಟವಾಗಿವೆ; ಲೇಖನ ಬರವಣಿಗೆ ಅಸಾಧ್ಯವಾದುದಲ್ಲ ಎಂಬುದು ಅನುಭವಕ್ಕೆ ಬಂದಿದೆ.
ಡಾ. ಅಶ್ವಿನಿ ಕೃಷ್ಣಮೂರ್ತಿ, ದಕ್ಷಿಣ ಕನ್ನಡ

ನನ್ನ ಪ್ರಥಮ ಕೃಷಿ ಲೇಖನ 'ರೈತರ ಕೈ ಹಿಡಿದ ಅನಾನಸ್' ಪ್ರಕಟವಾದಾಗ ತುಂಬಾ ಸಂತೋಷವಾಯಿತು. ಕೇವಲ ಸಂಪಾದಕರ ಪತ್ರ ವಿಭಾಗಕ್ಕೆ ಸೀಮಿತವಾಗಿದ್ದ ನನ್ನ ಬರಹಗಳು ಲೇಖನಗಳಾಗಿ ಪ್ರಕಟವಾದವು. ಲೇಖನಗಳ ಪರಿಷ್ಕರಣೆ ತುಸು ಖಾರವೆನಿಸಿದರೂ, ತುಂಬಾ ಉಪಯುಕ್ತವಾಗಿದ್ದು, ಅಧ್ಯಯನ ಮನೋಭಾವ ಬೆಳೆಸಲು ಪೂರಕವಾಗಿದೆ.

ಲೇಖನಗಳು ಪ್ರಕಟಗೊಂಡ ನಂತರ ನಾನು ಕೆಲಸ ನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆಯಲ್ಲಿ ನನ್ನ ಸಹೋದ್ಯೋಗಿಗಳು, ಅಧಿಕಾರಿಗಳು, ಮಿತ್ರರು ನನ್ನನ್ನು ನೋಡುವ ರೀತಿಯೇ ಬದಲಾಗಿದೆ. ಸಮಾಜದಲ್ಲಿ ನನ್ನ ಗೌರವವೂ ಹೆಚ್ಚಾಗಿದೆ.

ನಾನು ಈ ಕೋರ್ಸ್‌ಗಾಗಿ ತುಂಬಿದ ಹಣ ಈಗ ಸಾರ್ಥಕವೆನಿಸಿದೆ. ಹಲವಾರು ರೈತರು ಸ್ನೇಹಿತರಾಗಿದ್ದಾರೆ. ನಾನು ಕೆಲಸ ಮಾಡುವ ಶಿಕ್ಷಣ ಇಲಾಖೆಯಲ್ಲಿ ಹೊಸ ಪ್ರಯೋಗಕ್ಕೆ ಅವಕಾಶ ಸಿಕ್ಕಿದೆ. ನನ್ನ ಮುಂದಿನ ಲೇಖನಗಳಿಗೂ ಕೇಂದ್ರದ ಮಾರ್ಗದರ್ಶನ ಅಗತ್ಯವಾಗಿ ಬೇಕಿದೆ. ಕೋರ್ಸ್ ಅವಧಿಯಲ್ಲಿ ಪ್ರಕಟವಾದ ನನ್ನ ಲೇಖನಗಳಿಗಾಗಿ ದೊರೆತಿರುವ ಸಂಭಾವನೆಯನ್ನು ಅಭಿಮಾನಪೂರ್ವಕವಾಕವಾಗಿ ಕಾಮ್‌ಗೆ ನೀಡುತ್ತಿದ್ದೇನೆ.
ಲಿಂಗರಾಜು ವಿ. ರಾಮಾಪುರ, ಹುಬ್ಬಳ್ಳಿ

ಕೃಷಿಕರಿಗೆ ಸರಿಯಾದ ಮಾಹಿತಿ ಸಿಗಬೇಕೆಂಬ ಕಾಳಜಿಯೊಂದಿಗೆ ಕೈಗೊಂಡಿರುವ ಈ ತರಬೇತಿ ಕಾರ್ಯಕ್ರಮ ಕೂಡಾ ಅಗತ್ಯಾಧಾರಿತ. ಕಾರ್ಯಕ್ರಮಕ್ಕೆ ನೀವು ನಿಗದಿಪಡಿಸಿದ ಶುಲ್ಕ ನೀವು ಕೊಡುವ ಪುಸ್ತಕಕ್ಕೇ ಸಾಲದು. ಬೆಲೆ ಕಟ್ಟಲಾಗದಷ್ಟು ವಿಷಯ ಅದರಲ್ಲಿದೆ. ಇನ್ನುಳಿದಂತೆ ಪ್ರಾಥಮಿಕ ಶಿಬಿರ, ತರಬೇತಿಯ ಅವಧಿಯ ಮಾರ್ಗದರ್ಶನ ಇವೆಲ್ಲಾ ನಮಗೆ ಉಚಿತವಾಗಿ ನೀಡಿದಂತಾಗಿದೆ. ಲೇಖನಗಳಿಗೆ ಕೊಡುತ್ತಿರುವ ಸಲಹೆಗಳು ತೃಪ್ತಿ ನೀಡಿವೆ. ನಾನೂ ಲೇಖನ ಬರೆಯಬಲ್ಲೆ ಎಂಬ ಆತ್ಮವಿಶ್ವಾಸವನ್ನು ಈ ತರಬೇತಿ ನನ್ನಲ್ಲಿ ಮೂಡಿಸಿದೆ.

ಕಾಮ್ ಅಭ್ಯರ್ಥಿಗಳು ಹಾಗೂ ಕಾಮ್ ಫೆಲೋಗಳ ನಡುವೆ ಸಂವಹನದ ಕೊರತೆ ಇದೆ. ನಮ್ಮ ನಡುವೆ ಸೂಕ್ತ ಸಂಪರ್ಕವೇರ್ಪಟ್ಟರೆ ಕಾಮ್ ಚಟುವಟಿಕೆಗಳಿಗೆ ಪೂರಕವಾಗಿ ಇನ್ನಷ್ಟು ಕೆಲಸ ಮಾಡಬಹುದು. ತರಬೇತಿಯ ಅರ್ಧ ಅವಧಿಯಲ್ಲಿ ಪರಾಮರ್ಶಿಸುವ ವ್ಯವಸ್ಥೆಯಿದ್ದರೆ ಒಳ್ಳೆಯದು. ಇದನ್ನು ಕೇಂದ್ರವೇ ಮಾಡಬೇಕೆಂದಿಲ್ಲ. ಆಯಾ ಭಾಗದ ಕಾಮ್ ಫೆಲೋಗಳೇ ಈ ನಿಟ್ಟಿನಲ್ಲಿ ಅಭ್ಯರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿ, ಆ ಪ್ರಕ್ರಿಯೆಯ ವಿವರವಾದ ವರದಿಯನ್ನು ಕೇಂದ್ರಕ್ಕೆ ತಲುಪಿಸಬಹುದು.
ಜಿ. ಗಣಪತಿ ಭಟ್, ರಾಮನಗರ

`ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿ' ನಿಜಕ್ಕೂ ವಿಶಿಷ್ಟ ಅನುಭವ ನೀಡಿದೆ. ಸಹೃದಯ ಸಂಪನ್ಮೂಲ ವ್ಯಕ್ತಿಗಳ ಆತ್ಮೀಯ ಒಡನಾಟ, ಪ್ರೋತ್ಸಾಹದ ನುಡಿಗಳು ಬರವಣಿಗೆಯ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದವು. ವಿಷಯವೊಂದನ್ನು ಸರಳವಾಗಿ ಸಮರ್ಥವಾಗಿ ಸಾಮಾನ್ಯ ಓದುಗರಿಗೂ ಅರ್ಥವಾಗುವಂತೆ ಪರಿಣಾಮಕಾರಿಯಾಗಿ ಹೇಗೆ ಸಾದರಪಡಿಸಬಹುದು ಎಂಬುದನ್ನು ಈ ತರಬೇತಿ ನನಗೆ ಕಲಿಸಿದೆ. ಯಾವುದನ್ನು ಬರೆಯಬೇಕು, ಯಾವುದನ್ನು ಬರೆಯಬಾರದು ಎನ್ನುವ ಅರಿವನ್ನೂ ಅದು ಮೂಡಿಸಿದೆ. ಅಷ್ಟೇ ಅಲ್ಲ, ಪ್ರತಿಯೊಂದು ವಿಷಯವನ್ನೂ ಸೂಕ್ಷ್ಮವಾಗಿ ಗ್ರಹಿಸಿ ಅದರ ವಿವಿಧ ಆಯಾಮಗಳನ್ನು ಗುರುತಿಸುವುದು, ಕ್ಷೇತ್ರ ಭೇಟಿ, ಪ್ರಶ್ನಾವಳಿ ತಯಾರಿ, ಮಾಹಿತಿ ಸಂಗ್ರಹಣೆಯ ವಿಧಿ ವಿಧಾನಗಳನ್ನೆಲ್ಲಾ ಕಲಿಯಲು ಅನುವು ಮಾಡಿಕೊಟ್ಟಿದೆ.

`ಧೀರ್ಘವಾಕ್ಯ ಬೇಡ; ಕ್ಲಿಷ್ಟ ಪದಗಳ ಬಳಕೆ ಕಡಿಮೆ ಮಾಡಿ; ನಿಮ್ಮಲ್ಲಿರುವ ಎಲ್ಲಾ ಮಾಹಿತಿಯನ್ನೂ ಲೇಖನಕ್ಕಿಳಿಸಬೇಕೆಂದೇನಿಲ್ಲ, ಅಗತ್ಯವಿದ್ದಷ್ಟೇ ವಿವರಿಸಿ' ಎಂಬ ಕೇಂದ್ರದ ಸಲಹೆ ನನ್ನನ್ನು ಎಚ್ಚರಿಸಿದೆ. `ಇದು ಒಳ್ಳೆಯ ವಿಷಯ. ವಿಷಯ ಪ್ರಸ್ತುತಿ ಚೆನ್ನಾಗಿದೆ. ಅಸೈನ್‌ಮೆಂಟ್ ನಾವು ಹೇಳಿದ ರೀತಿಯಲ್ಲೇ ಚೆನ್ನಾಗಿ ತಯಾರಿಸಿ ಕಳುಹಿಸಿದ್ದೀರಿ' ಎಂಬ ಮಾತುಗಳು ಬರಹದ ಪರಿಷ್ಕರಣೆಗೆ ನೆರವಾಗಿವೆ. `ತಿಂಗಳ ಅಸೈನ್‌ಮೆಂಟ್' ನಮ್ಮನ್ನು ಸುಳಿವುಗಳ ಹುಡುಕಾಟಕ್ಕೆ ಹಚ್ಚಿ ಹೊಸ ವಿಚಾರಗಳನ್ನು ಹೆಕ್ಕಿ ತೆಗೆದು ರೈತಪರ ಬರವಣಿಗೆಯ ಕೃಷಿ ನಡೆಸಲು ತುಂಬಾ ಪ್ರಯೋಜನಕಾರಿಯಾಗಿದೆ. ಹೋದಲ್ಲಿ ಬಂದಲ್ಲೆಲ್ಲಾ ಕಣ್ಣುಗಳು ವಿಷಯದ ಬೇಟೆಗೆ ಸಜ್ಜಾಗಿರುತ್ತವೆ. ಒಟ್ಟಾರೆ ಈ ತರಬೇತಿ ನನಗೆ ಸಾಕಷ್ಟು ಕಲಿಸಿದೆ. ಕಾಮ್ ಬಳಗಕ್ಕೆ ನಾನು ಚಿರಋಣಿಯಗಿದ್ದೇನೆ.
ಅಂಕ್ನಳ್ಳಿ ಜಯರಾಂ, ಮುಂಬೈ

ಪತ್ರಿಕೆಗಳಲ್ಲಿ ಬರುವ ರೈತಪರ ಕಾಳಜಿ ಇರುವ, ಉಪಯುಕ್ತ ಮಾಹಿತಿಯುಳ್ಳ ಲೇಖನಗಳನ್ನು ನೋಡಿದಾಗ ನನಗೂ ಬರೆಯಬೇಕೆನಿಸುತ್ತಿತ್ತು. ಬರೆದರೆ ಪ್ರಕಟವಾದೀತೇ ಎಂಬ ಅಳುಕೂ ಇತ್ತು. ನಾನೊಬ್ಬಳು ಗೃಹಿಣಿ. ಹುಟ್ಟಿದ್ದು ಕಾಫಿ ಕುಟುಂಬದಲ್ಲಿ; ಸೇರಿದ್ದೂ ಕಾಫಿ ಕುಟುಂಬವನ್ನೇ. ದಿನದ ಹೆಚ್ಚು ಕಾಲ ಮನೆಕೆಲಸ, ಹೂಗಿಡ-ಕೈತೋಟದ ಆರೈಕೆ, ಹಸು, ನಾಯಿಗಳನ್ನು ನೋಡಿಕೊಳ್ಳುವುದು ಇವೇ ಮುಂತಾದ ಚಟುವಟಿಕೆಗಳಲ್ಲೇ ಕಳೆದುಹೋಗುತ್ತಿತ್ತು. ಕೊಡಗಿನ ವಸತಿಶಾಲೆಯಲ್ಲಿ ಓದುವ ಮಗ, ಕಾಫಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪತಿ, ಈ ಮಧ್ಯೆ ನನಗೂ ಹೊಸತೇನನ್ನಾದರೂ ಮಾಡುವ ಹಂಬಲ. ಒಮ್ಮೆ ನಮ್ಮ ಮನೆಗೆ ಬಂದ 'ಕೃಷಿಕ' ಪತ್ರಿಕೆಯ ಸಂಪಾದಕ ಜಯರಾಂ ನನ್ನನ್ನು ಕಾಮ್ ಸೇರಲು ಪ್ರೇರೇಪಿಸಿದರು. ಒಳ್ಳೆಯ ತರಬೇತಿ, ಮಾರ್ಗದರ್ಶನ ಸಿಗುತ್ತದೆ ಎಂಬ ಅವರ ನುಡಿ ನನ್ನ ಅನುಭವಕ್ಕೂ ಬಂದಿದೆ.

ಕಾಮ್‌ನಲ್ಲಿ ಬರವಣಿಗೆಗೆ ಮಾರ್ಗದರ್ಶನ ಮಾತ್ರವಲ್ಲದೆ ಬರವಣಿಗೆಗೆ ಒಂದು ಹಿತವಾದ ಒತ್ತಡವೂ ಇದೆ. ಪತ್ರಿಕೆಗಳಲ್ಲಿ ಇತರ ಅಭ್ಯರ್ಥಿಗಳ ಲೇಖನ ಪ್ರಕಟವಾದಾಗ ಉಂಟಾಗುತ್ತಿದ್ದ ತಳಮಳ ನನ್ನಲ್ಲಿ ಲೇಖನ ಬರೆಯಲೇಬೇಕೆಂಬ ಸಂಕಲ್ಪ ಹುಟ್ಟುಹಾಕುತ್ತಿತ್ತು. ಕಾರ್ಯನಿಮಿತ್ತ ಆಚೀಚೆ ಹೋದಾಗಲೆಲ್ಲಾ ಸುಳಿವುಗಳನ್ನು ಅರಸುತ್ತಿದ್ದೆ. ಹಾಗೆಯೇ ಅವುಗಳ ಬೆನ್ನತ್ತುತ್ತಿದ್ದೆ.

ಕೊಡಗಿನ ಗೋಣಿಕೊಪ್ಪಕ್ಕೆ ಮಗನನ್ನು ಶಾಲೆಗೆ ಬಿಡಲು ಹೋಗಿಬರುವಾಗ ಮಾರ್ಗಮಧ್ಯೆ ಸಿಗುವ ಪಿರಿಯಾಪಟ್ಟಣದಲ್ಲಿ ಹೊಗೆ ತಂಬಾಕು ಬೆಳೆಗಾರರನ್ನು ಮಾತನಾಡಿಸಿದೆ. ಅವರ ಕುಂದುಕೊರತೆಗಳನ್ನು ಕುರಿತ ಲೇಖನ ಸಿದ್ಧವಾಯಿತು. ಪ್ರಜಾವಾಣಿಯಲ್ಲಿ ಪ್ರಕಟವಾದ 'ಬಳ್ಳಿ ತರಕಾರಿ ತುಪ್ಪದ ಹೀರೆ' ಲೇಖನ ನೋಡಿ150ಕ್ಕೂ ಅಧಿಕ ಆಸಕ್ತರು ಬೀಜ ಪಡೆದಿದ್ದಾರೆ. ಹಲವರು ನನ್ನಲ್ಲಿಲ್ಲದ ಬೀಜಗಳನ್ನು ಕಳಿಸಿಕೊಟ್ಟರು. ಆ ಬೀಜಗಳು ನನ್ನ ಕೈತೋಟದಲ್ಲಿ ಮೊಳಕೆಯೊಡೆಯುತ್ತಿವೆ. ಭತ್ತದ ಬೀಜಬ್ಯಾಂಕ್ ಬಗ್ಗೆ ಬರೆದಾಗ ಸಂಬಂಧಿಸಿದವರಿಗೆ 300ಕ್ಕೂ ಅಧಿಕ ಆಸಕ್ತ ರೈತರು ಕರೆಮಾಡಿ ಮಾಹಿತಿ ಪಡೆದರು. ಜನಪ್ರಿಯವಾಗುತ್ತಿರುವ ತರಕಾರಿ ನರ್ಸರಿಗಳನ್ನು ಕುರಿತ ನನ್ನ ಲೇಖನ ಪ್ರಕಟವಾದಾಗ ವಿವಿಧೆಡೆಗಳಿಂದ ರೈತರು, ಸ್ವಸಹಾಯ ಸಂಘದವರು ಆ ನರ್ಸರಿಗೆ ಭೇಟಿ ಕೊಟ್ಟರು. ಇದರಿಂದಾಗಿ ಗಿಡಗಳಿಗೆ ಬೇಡಿಕೆ ಹೆಚ್ಚಿತು ಎಂದು ನರ್ಸರಿ ಮಾಲೀಕರು ಕರೆ ಮಾಡಿ ತಿಳಿಸಿದರು. ಉದಯವಾಣಿ ಪತ್ರಿಕೆಯಿಂದ 'ಕಾಫಿ ಕಾಯಿಕೊರಕದ ಬಗ್ಗೆ ಬರೆಯಿರಿ' ಎಂದು ನೇರ ಕರೆಮಾಡಿ ತಿಳಿಸಿದ್ದು ಮರೆಯಲಾಗದ ಕ್ಷಣ. ಹೀಗೆ ಒಂದು ವರ್ಷ ಸರಿದುಹೋದ ಪರಿಯೇ ವಿಸ್ಮಯವೆನಿಸುತ್ತದೆ. ಕಾಮ್‌ನ ಮಾಹಿತಿ ಸಂಪುಟವಂತೂ ಅಮೂಲ್ಯ ಮಾರ್ಗದರ್ಶಿ. ಅಭಿವೃದ್ದಿ ಸಂವಹನ ಕುರಿತ ಮಾಹಿತಿಗಳು ಮತ್ತು ಲೇಖನ ಬರೆಯುವ ಮೊದಲು ಪ್ರಶ್ನಿಸಿಕೊಳ್ಳುವ ವಿಧಾನದ ಕುರಿತ ವಿವರ ತುಂಬ ಉಪಯುಕ್ತ.
ಪೂರ್ಣಿಮಾ ಕಾನಹಳ್ಳಿ, ಹಾಸನ

ಬರವಣಿಗೆಯ ಹವ್ಯಾಸ ನನಗೆ ಮೊದಲಿನಿಂದಲೂ ಇತ್ತು. ವಿವಿಧ ಪತ್ರಿಕೆಗಳಲ್ಲಿ ನನ್ನ ಕಥೆ, ಕವನ, ಲೇಖನಗಳು ಪ್ರಕಟಗೊಂಡಿವೆ. ಹನಿಗವನ ನೆಚ್ಚಿನ ಸಾಹಿತ್ಯ ಪ್ರಕಾರ. ಆದರೆ ಕೃಷಿ ಬರಹ ಬರೆದುದು ಕಡಿಮೆ. 2008ರಲ್ಲಿ ಆಕಸ್ಮಿಕವಾಗಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿಗೆ ಸೇರಿದೆ. ಆ ಬಳಿಕ ವಿಜಯ ಕರ್ನಾಟಕದಲ್ಲಿ ನನ್ನ ಒಂದು ಹಾಗೂ ಪ್ರಜಾವಾಣಿಯಲ್ಲಿ ಏಳು ಕೃಷಿ ಲೇಖನಗಳು ಪ್ರಕಟವಾಗಿವೆ. ಈಗ ನನ್ನಲ್ಲಿ ಕೃಷಿ ಲೇಖನ ಬರೆಯಬಹುದೆಂಬ ಆತ್ಮವಿಶ್ವಾಸ ಮೂಡಿದೆ. ಇನ್ನೂ ಉತ್ತಮ ಕೃಷಿ ಲೇಖನಗಳನ್ನು ಬರೆಯುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡುತ್ತಿದ್ದೇನೆ.
ಸಹನಾ ಕಾಂತಬೈಲು, ಮಡಿಕೇರಿ

ತರಬೇತಿಯಲ್ಲಿ ನೀಡಿರುವ ಪಠ್ಯದ ಬಗ್ಗೆ ಹೇಳಲು ನನಗೆ ಹೆಮ್ಮೆಯೆನಿಸುತ್ತದೆ. ವಿಶ್ವವಿದ್ಯಾಲಯದಲ್ಲಿ ಒಂದೊಂದು ವಿಷಯಕ್ಕೂ ಕನಿಷ್ಠ 10ರಿಂದ 20 ಪಠ್ಯಪುಸ್ತಕಗಳನ್ನು ಓದಬೇಕು. ಆದರೂ ನಮಗೆ ಬೇಕಾಗುವ ಮಾಹಿತಿ ಸಿಗುವುದು ಕಷ್ಟ. ಆದರೆ ಕಾಮ್ ಪಠ್ಯದಲ್ಲಿ ಕೃಷಿ ಮತ್ತು ಗ್ರಾಮೀಣ ಪತ್ರಕರ್ತನಿಗೆ ಬೇಕಾದ ಸಮಗ್ರ ಮಾಹಿತಿ ಲಭ್ಯ. ತರಬೇತಿಯಲ್ಲಿ ನಾನು ಮುಖ್ಯವಾಗಿ ಕಲಿತ ಪಾಠ ಶಿಸ್ತು ಹಾಗೂ ಸಮಯ ಪಾಲನೆ. ತರಬೇತಿಯ ಅವಧಿಯಲ್ಲಿ ನನ್ನ ಹತ್ತಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ರಮಾ ಅರಕಲಗೂಡು, ಬೆಂಗಳೂರು

ಅಸೈನ್‌ಮೆಂಟ್ ಪರಿಶೀಲನೆ ಬರವಣಿಗೆಯ ಸುಧಾರಣೆಗೆ ಬಹಳಷ್ಟು ಸಹಕಾರಿ. ಲೇಖನಗಳು ಪ್ರಕಟವಾದಾಗ ಸಿಕ್ಕ ಪ್ರತಿಕ್ರಿಯೆ ಮರೆಯಲಸಾಧ್ಯ. ನಿರಂತರವಾಗಿ ಬರೆಯಲು ಹೊಸ ಹುಮ್ಮಸ್ಸು ಮೂಡಿದೆ.
ಶಶಿಧರ ಹೆಮ್ಮಣ್ಣ, ಉಡುಪಿ

ತರಬೇತಿಯಿಂದ ಬರವಣಿಗೆ ಮಾತ್ರ ಅಲ್ಲ, ವೈಯಕ್ತಿಕ ನೆಲೆಯಲ್ಲಿಯೂ ಅನುಕೂಲವಾಗಿದೆ. ಯಾವುದೇ ವಿಶ್ವವಿದ್ಯಾಲಯದಲ್ಲಿ ಸಿಗದಂತಹ ಮಾರ್ಗದರ್ಶನ, ಸಂಪರ್ಕ ತರಬೇತಿಯ ಅವಧಿಯಲ್ಲಿ ಸಿಕ್ಕಿತು. ಅಸೈನ್‌ಮೆಂಟ್ ಪರಿಶೀಲನೆ ತುಂಬಾ ಚೆನ್ನಾಗಿತ್ತು. ಕೃಷಿ ಪುರವಣಿಗಳ ಸಂಪಾದಕರು ಫೋನ್ ಮಾಡಿ ಲೇಖನದ ಬಗ್ಗೆ ವಿಚಾರಿಸಿದಾಗ ಸಂತಸವೆನಿಸಿತು.
ಸುರೇಶ್ ಧಾರವಾಡಕರ್, ರಾಯಚೂರು

ಕಾಮ್ ಫೆಲೋ ಆಗಲೇಬೇಕೆಂಬ ದೃಢಮನಸ್ಸಿದ್ದುದರಿಂದ ತಿಂಗಳ ಅಸೈನ್‌ಮೆಂಟ್ ಹೊರೆ ಎನಿಸಲಿಲ್ಲ. ಆಗ ಪೂರ್ಣ ಅದರಲ್ಲೇ ತಲ್ಲೀನಳಾಗಿರುತ್ತಿದ್ದೆ. ಲೇಖನಗಳನ್ನು ಪರಿಶೀಲಿಸಿ ನೀಡಿದ ಮಾಹಿತಿ ಹಾಗೂ ಸಲಹೆಗಳು ಮುಂದಿನ ಬರವಣಿಗೆಗೆ ಸಹಾಯಕವಾಗುತ್ತಿದ್ದವು. ನಮ್ಮ ಗೊಂದಲಗಳನ್ನು ಪರಿಶೀಲನೆಯಲ್ಲಿ ನಿವಾರಿಸಲಾಗಿದೆ. ಅನೇಕ ಕೃಷಿ ಪತ್ರಿಕೆ ಹಾಗೂ ಪುಸ್ತಕಗಳು ಮನೆಯ ಗ್ರಂಥಾಲಯಕ್ಕೆ ಸೇರ್ಪಡೆಯಾಗಿವೆ.
ಕೆ.ವಿ. ಸರಸ್ವತಿ, ಬೆಂಗಳೂರು

ಲೇಖನ ಕಳುಹಿಸಿದ್ದೇ ತಡ ಪರಿಶೀಲನೆಗೊಂಡ ಲೇಖನ ಅಗತ್ಯ ಸಲಹೆಗಳೊಡನೆ ಹಿಂತಿರುಗುತ್ತಿತ್ತು. ಕೇಂದ್ರದ ಸಲಹೆಗಳನ್ನು ಆಧರಿಸಿ ಬರೆದ ಲೇಖನ ಸಂಪೂರ್ಣವೆನಿಸುತ್ತಿತ್ತು. ನಾನು ಆಯ್ದ ವಿಷಯ, ಬರೆದ ಲೇಖನ ನೋಡಿ ಕೃಷಿ ಇಲಾಖೆಯ ನನ್ನ ಸಹೋದ್ಯೋಗಿಗಳು ಅಚ್ಹರಿಪಡುತ್ತಿದ್ದರು. ಬೇರೆ ಕೋರ್ಸ್‌ಗಳಲ್ಲಿ ಪರೀಕ್ಷೆ ಬರೆದು ಅಂಕ ಗಳಿಸಿದರೆ ಸಾಕು, ಪ್ರಮಾಣ ಪತ್ರ ಸಿಗುತ್ತಿತ್ತು. ಆದರೆ ಇಲ್ಲಿ ಪ್ರಾಥಮಿಕ ಶಿಬಿರದಿಂದ ಹಿಡಿದು ಪ್ರತಿ ತಿಂಗಳೂ ನಡೆವ ಮೌಲ್ಯಮಾಪನ, ಲೇಖನಗಳ ಪರಿಷ್ಕರಣೆ.. ಇವೆಲ್ಲ ತರಬೇತಿಯ ವೈಶಿಷ್ಟ್ಯವನ್ನು ಸಾರಿ ಹೇಳುತ್ತವೆ.
ನಿಂಗದಳ್ಳಿ ಮಲ್ಲಿಕಾರ್ಜುನ, ಬೀದರ್

ತರಬೇತಿ ನಿರೀಕ್ಷೆ ಮೀರಿ ಇತ್ತು. ಈ ತರಬೇತಿಗೆ ಶುಲ್ಕ ಕಡಿಮೆಯೆನಿಸಿತು. ಸಂಪನ್ಮೂಲ ವ್ಯಕ್ತಿಗಳು ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ನನ್ನಂತಹ ಹಳ್ಳಿಗರಿಗೆ, ಬರೆಯಬೇಕೆನ್ನುವವರಿಗೆ ಇಂತಹ ತರಬೇತಿ ತುಂಬಾ ಅವಶ್ಯಕ. ಕುಟುಂಬದ ಸದಸ್ಯರೂ ನನ್ನ ಹೊಸ ಹವ್ಯಾಸದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಕೇಂದ್ರದೊಡನೆ ನಿರಂತರ ಸಂಪರ್ಕದಲ್ಲಿರುತ್ತೇನೆ.
ಸುಬ್ರಾಯ ಮ. ಹೆಗಡೆ, ಅಂಕೋಲ


ಇದುವರೆಗಿನ ಕಾಮ್ ಫೆಲೋಗಳ ವಿವರ

ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media