Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
  ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಸ್ವರೂಪ

ಪತ್ರಿಕೋದ್ಯಮ ಕಬ್ಬಿಣದ ಕಡಲೆಯಲ್ಲ. ಕೃಷಿ-ಗ್ರಾಮೀಣ ವಿಚಾರಗಳ ಬಗ್ಗೆ ಪುಟಗಟ್ಟಲೆ ಲೇಖನ ಬರೆಯಬೇಕೆಂದೇನೂ ಇಲ್ಲ. ರೈತರಿಗೆ ಉಪಯುಕ್ತವೆನಿಸುವ ವಿಚಾರದ ಬಗ್ಗೆ ನಾಲ್ಕಾರು ಸಾಲು ಬರೆದರೂ ಸರಿ. ಎಷ್ಟು ಬರೆದಿದ್ದೀರಿ ಎಂಬುದಕ್ಕಿಂತ ಏನು ಬರೆದಿದ್ದೀರಿ ಎಂಬುದು ಮುಖ್ಯ.

ಅಭ್ಯುದಯ ಸಂವಹನದ ಚೌಕಟ್ಟಿನಲ್ಲೆ ಕೃಷಿ-ಗ್ರಾಮೀಣ ಪತ್ರಿಕೋದ್ಯಮವನ್ನು ಗುರುತಿಸಬಹುದು. ಕೃಷಿ ಹಾಗೂ ಗ್ರಾಮೀಣ ವಿಚಾರಗಳ ಕುರಿತು ಬರೆಯುವುದನ್ನು ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಎಂದು ಸರಳವಾಗಿ ಹೇಳಬಹುದಾದರೂ ಅದು ಪೂರ್ತಿ ಸರಿಯಲ್ಲ. ಇದನ್ನು ಬದ್ಧತೆ ಅಥವಾ ಕಾಳಜಿ ಇರುವ 'ರೈತಸ್ನೇಹಿ' ಬರವಣಿಗೆ ಎನ್ನುವುದೇ ಸರಿ.

ಕ್ರೀಡೆ, ಸಾಹಿತ್ಯ, ವಿಜ್ಞಾನ, ಕಲೆ, ಪರಿಸರ, ವಾಣಿಜ್ಯ, ವನ್ಯಜೀವಿ ಮುಂತಾದ ವಿಷಯಗಳ ಕುರಿತು ಬರೆಯುವುದಕ್ಕೆ ಹೆಚ್ಚಿನ ಸಿದ್ಧತೆ ಬೇಕು. ನಿರ್ದಿಷ್ಟ ವಿಷಯದ ಕುರಿತು ಸತತ ಅಧ್ಯಯನ ಅಥವಾ ಅನುಭವದಿಂದ ಆ ಬಗ್ಗೆ ಅಧಿಕೃತವಾಗಿ ಬರೆಯುವುದು ಸಾಧ್ಯವಾಗುತ್ತದೆ. ವಿಶೇಷಾಸಕ್ತಿಯ ಅಥವಾ ನಿರ್ದಿಷ್ಟ ವಿಷಯದ ಮೇಲಿನ ಬರವಣಿಗೆ ಇಂದು ಪತ್ರಿಕೋದ್ಯಮದಲ್ಲಿ ಎಷ್ಟು ಬೆಳೆದಿದೆಯೆಂದರೆ ಹುಲಿ, ಆನೆಯಿಂದ ಹಿಡಿದು ಇರುವೆ ತನಕ ಒಂದೊಂದು ಪ್ರಾಣಿಯ ಕುರಿತಾಗಿಯೇ ಬರೆಯುವವರಿದ್ದಾರೆ; ದೊಡ್ಡ ನಗರಗಳಲ್ಲಿ ಪಕ್ಷವಾರು ಪರಿಣತರೂ ಇದ್ದಾರೆ.

ಕೃಷಿ - ಗ್ರಾಮೀಣ ಸಂಗತಿಗಳ ಕುರಿತು ಬರೆಯುವುದು ಕೂಡ ಒಂದು ವಿಶೇಷಾಸಕ್ತಿಯ ಬರವಣಿಗೆಯೇ. ಇದಕ್ಕೂ ಸೂಕ್ತ ತಯಾರಿ ಬೇಕು. ಆದರೆ ಅದಕ್ಕಿಂತ ಹೆಚ್ಚಾಗಿ, ರೈತರ ಬಗ್ಗೆ ನೈಜ ಕಾಳಜಿ ಹಾಗೂ ಬರವಣಿಗೆಯಲ್ಲಿ ಬಧ್ಧತೆ ಹೊಂದಿರುವುದು ಮುಖ್ಯ. ವಿಷಯವನ್ನು ರೈತಪರ ದೃಷ್ಟಿಕೋನದಿಂದ ಒರೆಗೆ ಹಚ್ಚುವುದು ಅಗತ್ಯ.

ಒಕ್ಕಲುತನಕ್ಕೆ ಸಂಬಂಧಿಸಿ ತೀರ ಇತ್ತೀಚಿನ ವರೆಗೂ ಒಂದೇ ಧಾಟಿಯಲ್ಲಿ ಲೇಖನಗಳು ಪ್ರಕಟವಾಗುತ್ತಿದ್ದವು. ಹೆಚ್ಚಿನವು ಗ್ರಂಥಾಲಯಗಳಲ್ಲಿ ಹುಟ್ಟಿಕೊಂಡ ಬರಹಗಳು. 'ಲಾಭದಾಯಕ ಬಾಳೆ ಬೇಸಾಯ', 'ಶುಂಠಿ - ಸುಧಾರಿತ ಕೃಷಿಯಿಂದ ಅಧಿಕ ಇಳುವರಿ', 'ಏಲಕ್ಕಿ - ರೈತರಿಗೆ ವರದಾನ' ಮುಂತಾದ ಶೀರ್ಷಿಕೆಗಳಿಂದ ಆರಂಭವಾಗುವ ಲೇಖನ, ಕೊನೆಯಲ್ಲಿ 'ಮೇಲೆ ತಿಳಿಸಿದ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸುವುದರಿಂದ ರೈತರು ಅಧಿಕ ಫಸಲು ಪಡೆದು ತಮ್ಮ ಆದಾಯ ಹೆಚ್ಚಿಸಿಕೊಳ್ಳಬಹುದು' ಎಂಬ ವಾಕ್ಯದೊಂದಿಗೆ ಮುಕ್ತಾಯಗೊಳ್ಳುತ್ತದೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟು 'ಹೆಚ್ಚಿನ ವಿವರಗಳಿಗೆ ನಿಮ್ಮ ಸಮೀಪದ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು' ಎಂಬ ಸಲಹೆಯನ್ನೂ ಸೇರಿಸಿರುತ್ತಾರೆ! ಇಡೀ ಲೇಖನ ರೈತರಿಗೆ ಒಂದು ಉಪದೇಶದ ರೀತಿಯಲ್ಲಿರುತ್ತದೆ.

ಮಣ್ಣು, ಹವಾಮಾನ, ತಳಿವೈವಿಧ್ಯ, ಸಸ್ಯಾಭಿವೃದ್ಧಿ, ಬೀಜೋಪಚಾರ, ಬಿತ್ತನೆ ಬೀಜ ಮತ್ತು ಕಾಲ, ನಾಟಿ ಮಾಡುವುದು, ಗೊಬ್ಬರ ಬಳಕೆ, ನೀರಾವರಿ, ಕಳೆ ತೆಗೆಯುವಿಕೆ ಮತ್ತು ಅಂತರ ಬೇಸಾಯ, ಸಸ್ಯ ಸಂರಕ್ಷಣೆ, ಕೀಟ ನಿಯಂತ್ರಣ, ರೋಗ ಹತೋಟಿ, ಕೊಯ್ಲು ಮತ್ತು ಇಳುವರಿ, ಉಪಯೋಗ - ಇವಿಷ್ಟು ಉಪ ಶೀರ್ಷಿಕೆಗಳು ಕೃಷಿಲೇಖನದಲ್ಲಿ ಕಡ್ಡಾಯವಾಗಿ ಇರಲೇಬೇಕೆನ್ನುವ ಹಾಗೆ ಅವನ್ನು ಬಳಸಲಾಗುತ್ತಿತ್ತು. ಜತೆಗೆ ಶೇಕಡಾವಾರು ಪೋಷಕಾಂಶ ಪ್ರಮಾಣ ಅಂತ ಇನ್ನೊಂದು ಪಟ್ಟಿ, ಉತ್ಪಾದನೆಯ ಅಂಕಿ-ಅಂಶಗಳ ಕೋಷ್ಟಕ, ಒಂದೆರಡು ರೇಖಾ ನಕ್ಷೆ ಇತ್ಯಾದಿಗಳೊಂದಿಗೆ ಲೇಖನ 'ಪರಿಪೂರ್ಣ'ವಾಗಿರುತ್ತದೆ.

ಇವೆಲ್ಲ 'ಪ್ಯಾಕೇಜ್ ಆಫ್ ಪ್ರಾಕ್ಟೀಸ್' (ಪಿಒಪಿ) ಬರಹಗಳು. ಕೆಲವು ಸಣ್ಣಪುಟ್ಟ ಅಂಕಿಅಂಶಗಳನ್ನು (ಬೆಳೆಯುತ್ತಿರುವ ವಿಸ್ತೀರ್ಣ, ಒಟ್ಟು ಉತ್ಪಾದನೆ, ರಫ್ತಿನ ಪ್ರಮಾಣ ಇತ್ಯಾದಿ) ಹೊರತುಪಡಿಸಿದರೆ ದಶಕಗಳ ಕಾಲ ಇವುಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. 'ರೈತರಿಗೆ ಸರಿಯಾದ ಮಾಹಿತಿಯ ಅಗತ್ಯವಿದೆ' ಎಂಬ ಧೋರಣೆಯೊಂದಿಗೆ ಆಗಾಗ ಬೇರೆಬೇರೆ ಪತ್ರಿಕೆಗಳಲ್ಲಿ ಇಂತಹ ಲೇಖನಗಳು ಪ್ರಕಟಗೊಳ್ಳುತ್ತಲೇ ಬಂದವು. ಕೃಷಿಲೇಖನ ಹೀಗೆಯೇ ಇರಬೇಕೆಂಬ ನಿಲುವು ಕೆಲವು ವಲಯಗಳಲ್ಲಿ ಉಳಿದುಕೊಂಡಿರುವುದರಿಂದ ಈಗಲೂ ಅಲ್ಲಲ್ಲಿ ಇಂತಹ ಲೇಖನಗಳನ್ನು ಕಾಣಬಹುದು.

'ಪಿಒಪಿ' ಲೇಖನಗಳ ಬಗ್ಗೆ ಏಕೆ ಈ ಅಸಮಾಧಾನ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಮೂಲಭೂತವಾಗಿ ಅಂತಹ ಲೇಖನಗಳು ಕೇವಲ ಪುಸ್ತಕದೊಳಗಿನ ಮಾಹಿತಿಯನ್ನಷ್ಟೆ ಒಳಗೊಂಡಿರುತ್ತದೆ. ರೈತರ ಹೊಲದ ಮಟ್ಟದಲ್ಲಿನ ಸಮಸ್ಯೆಗಳನ್ನಾಗಲೀ ಮಾರುಕಟ್ಟೆ ವಿವರಗಳನ್ನಾಗಲೀ ಆ ಲೇಖನಗಳು ಪ್ರಸ್ತಾಪಿಸುವುದು ವಿರಳ. ಅನೇಕ ಲೇಖನಗಳಲ್ಲಿ ರೈತರ ಮಾಹಿತಿಯ ಅಗತ್ಯಗಳಿಗೂ ಲೇಖನದಲ್ಲಿ ತಿಳಿಸುವ ಅಂಶಗಳಿಗೂ ತಾಳೆಯೇ ಇರುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನೀರಸ ನಿರೂಪಣಾ ಶೈಲಿ ಹಾಗೂ ಕ್ಲಿಷ್ಟ ಶಬ್ದಗಳ ಬಳೆಕೆಯಿಂದಾಗಿ ಇಂತಹ ಲೇಖನಗಳು ರೈತ ಓದುಗರ ಮನಮುಟ್ಟುವುದೇ ಇಲ್ಲ.

ಹೊಸ ಹಣ್ಣಿನ ಬೆಳೆಯೊಂದರ ಬಗ್ಗೆ ಲೇಖನ ಪ್ರಕಟವಾದಾಗ ರೈತ ಓದುಗರಲ್ಲಿ ಮೊದಲು ಮೂಡುವ ಪ್ರಶ್ನೆಯೆಂದರೆ ಅದು ನಮ್ಮ ಹವಾಮಾನಕ್ಕೆ ಒಗ್ಗುತ್ತದೆಯೇ, ಹೌದಾದರೆ ಅದರ ಬೀಜ ಅಥವಾ ಗಿಡ ಎಲ್ಲಿ ಸಿಗುತ್ತವೆ? ಈ ಪ್ರಶ್ನೆಗೆ ಲೇಖನದಲ್ಲಿ ಉತ್ತರ ಇಲ್ಲವೆಂದಾದರೆ ರೈತನಲ್ಲಿ ಆ ಬೆಳೆಯ ಕುರಿತು ಆಸಕ್ತಿ ಕುದುರುವುದಿಲ್ಲ.

ಹೊಸ ತಳಿ -ಅದು ಸಫೇದ್ ಮುಸ್ಲಿಯಂಥ ಬೆಳೆಯಾಗಿರಲಿ ಅಥವಾ ಎಮುವಿನಂಥ ಪಕ್ಷಿಯಾಗಿರಲಿ - ಅದರ ಮಾರುಕಟ್ಟೆ ಬಗ್ಗೆ ಸರಿಯಾದ ಮಾಹಿತಿಯನ್ನು ಕೊಡದೆ 'ಒಂದು ಕೆ.ಜಿ ಸಫೇದ್ ಮುಸ್ಲಿಗೆ ಇಷ್ಟು ಬೆಲೆ ಇದೆ; ಕೆಲವು ಕಂಪೆನಿಗಳು ರೈತರಿಂದ ಒಪ್ಪಂದದ ಮೇಲೆ ಖರೀದಿಸುತ್ತವೆ' ಎಂದಷ್ಟೆ ತಿಳಿಸುವ ಲೇಖನಗಳನ್ನು ನೀವು ಗಮನಿಸಿರಬಹುದು. ಅವು ನಿರ್ದಿಷ್ಟ ಕಂಪೆನಿಯ ಪ್ರಚಾರ ಲೇಖನದಂತಿರುತ್ತವೆಯೇ ಹೊರತು ಅದರಲ್ಲಿ ರೈತಪರ ಕಾಳಜಿ ಕಂಡುಬರುವುದಿಲ್ಲ. ಕಂಪೆನಿಯ ಅಗತ್ಯವನ್ನಷ್ಟೆ ಆಧರಿಸಿ ರೈತ ಬೆಳೆ ಬೆಳೆದರೆ ಆತನಿಗೆ ಸೋಲು ಖಚಿತ ಎಂಬುದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಕಸ್ತೂರಿ ಬೆಂಡೆ, ಲೋಳೆಸರ, ಅನಾಟ ಮುಂತಾದವುಗಳನ್ನು ಯಥೇಚ್ಛವಾಗಿ ಬೆಳೆದು ಮಾರುಕಟ್ಟೆ ಸಿಗದೆ ಕೈಸುಟ್ಟುಕೊಂಡವರು ಅನೇಕರಿದ್ದಾರೆ.

'ಲಾಭದಾಯಕ ಎಮು ಸಾಕಣೆ' ಅಥವಾ 'ಸಫೇದ್ ಮುಸ್ಲಿ ಬೆಳೆಯಿರಿ ಲಕ್ಷ ಲಕ್ಷ ಗಳಿಸಿರಿ' ಇತ್ಯಾದಿ ಶೀರ್ಷಿಕೆಗಳ ಲೇಖನಗಳಲ್ಲಿ ಕೇವಲ ಒಂದು ಬದಿಯ ವಿಚಾರಗಳು ಮಾತ್ರ ಒಳಗೊಂಡಿರುತ್ತವೆ. ಅದೇ 'ಎಮು ಸಾಕಣೆ: ಏನು, ಎಂತು?' ಅಥವಾ 'ಸಫೇದ್ ಮುಸ್ಲಿ - ಸೋಲು, ಗೆಲುವು' ಮುಂತಾದ ಶೀರ್ಷಿಕೆಯ ಲೇಖನಗಳಲ್ಲಿ ರೈತಪರ ವಿಚಾರಗಳು, ಮುಖ್ಯವಾಗಿ ಎಮು ಸಾಕಿದ ಅಥವಾ ಸಫೇದ್ ಮುಸ್ಲಿ ಬೆಳೆದ ರೈತರ ಅನುಭವದ ಮಾತುಗಳು ದಾಖಲಾಗಿರುತ್ತವೆ; ಪ್ರಾಯೋಗಿಕ ಕಷ್ಟಗಳು, ಸಮಸ್ಯೆಗಳ ಚಿತ್ರಣವಿರುತ್ತದೆ. ರೈತರಿಗೆ ಬೇಕಾಗಿರುವುದು ಇಂತಹ ಲೇಖನಗಳು. ಅನುಭವಿ ರೈತರ ಗೆಲುವು ಇತರ ರೈತರಿಗೆ ಸ್ಫೂರ್ತಿಯಾದರೆ, ಸೋಲಿನ ಅನುಭವ ಪಾಠವಾಗುತ್ತದೆ.

ಕೃಷಿ ಪತ್ರಿಕೋದ್ಯಮದಲ್ಲಿ ಹೊಸ ಅಧ್ಯಾಯ


ಕನ್ನಡದಲ್ಲಿ ಕೃಷಿಕಪರ ಲೇಖನಗಳ ಅಗತ್ಯವನ್ನು ಮೊದಲಿಗೆ ಮನಗಂಡವರು ಹಿರಿಯ ಪತ್ರಕರ್ತ ಶ್ರೀ ಪಡ್ರೆ. ಅವರ ಸಂಪಾದಕತ್ವದಲ್ಲಿ 1988ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಆರಂಭವಾದ ಅಡಿಕೆ ಪತ್ರಿಕೆ ಕೃಷಿ ಪತ್ರಿಕೋದ್ಯಮದಲ್ಲಿ ಒಂದು ಹೊಸ ಅಧ್ಯಾಯ ತೆರೆಯಿತು. 'ಬರೆಯುವವರು ಬೆಳೆಯುವುದಿಲ್ಲ; ಬೆಳೆಯುವವರು ಬರೆಯುವುದಿಲ್ಲ' ಎಂಬ ಸ್ಥಿತಿಯಿದ್ದಾಗ ಅಡಿಕೆ ಪತ್ರಿಕೆ ವಿನೂತನ ಪ್ರಯತ್ನಗಳಿಗೆ ಮುಂದಾಯಿತು.

ಕೃಷಿಪತ್ರಿಕೋದ್ಯಮದ ಒಂದು ತಪ್ಪು ನೂರಾರು ರೈತರ ಅನ್ನದ ಬಟ್ಟಲನ್ನು ಕಸಿಯಬಹುದು. ಬೆಳಕು ಒಡ್ಡಿದ ಒಂದು ಒಳ್ಳೆಯ ಕೃಷಿಕ್ರಮ, ಸುಸ್ಥಿರ ತಂತ್ರ ಹತ್ತಾರು ರೈತರ ಮುಖದಲ್ಲಾದರೂ ಮಂದಹಾಸ ತಂದೀತು ಎಂಬ ನಿಲುವಿನ ಪಡ್ರೆ, ಅಡಿಕೆ ಪತ್ರಿಕೆಯ ಮೂಲಕ ಪ್ರಮುಖವಾಗಿ ಸಾಧಿಸಿದ್ದೆಂದರೆ ರೈತರಿಗಾಗಿ ಹೇಗೆ ಬರೆಯಬೇಕು ಎಂಬುದನ್ನು ತೋರಿಸಿಕೊಟ್ಟದ್ದು. ರೈತರಿಗಾಗಿ ಬರೆಯಲು ಪಾಂಡಿತ್ಯ ಮುಖ್ಯ ಅಲ್ಲ; ಕಾಳಜಿ ಮುಖ್ಯ. ಆದ್ದರಿಂದ ಲೇಖನ ಯಾರು ಬರೆಯುತ್ತಾರೆ ಎಂಬುದಕ್ಕಿಂತ ಹೇಗೆ ಬರೆಯುತ್ತಾರೆ ಎಂಬುದು ಮುಖ್ಯ.

ಈ ಹಿನ್ನೆಲೆಯಲ್ಲಿ ರೈತರೂ ಸಮರ್ಥವಾಗಿ ಬರೆಯಬಲ್ಲರು. ಅದೇ ಹೆಚ್ಚು ಪರಿಣಾಮಕಾರಿ ಎಂದು ಪ್ರತಿಪಾದಿಸಿದ ಅವರು, ಈ ಪರಿಕಲ್ಪನೆಯನ್ನು 'ಸ್ವಸಹಾಯ ಪತ್ರಿಕೋದ್ಯಮ' (ರೈತರಿಂದ ರೈತರಿಗಾಗಿ) ಎಂದು ಕರೆದರು. ಇದಕ್ಕೆ ಜೀವ ತುಂಬಲು ಅವರು 'ಕೃಷಿಕರ ಕೈಗೆ ಲೇಖನಿ' ಎಂಬ ಆಂದೋಲನಕ್ಕೆ ಚಾಲನೆ ನೀಡಿದರು.

ಅಡಿಕೆ ಪತ್ರಿಕೆಯ ಪುಟಗಳನ್ನು ರೈತರಿಗೆ ತೆರೆದಿಟ್ಟ ಬಳಿಕ ಹಲವಾರು ರೈತರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಉಮೇದು ತೋರಿದರೂ ಕೆಲವರಲ್ಲಿ ತಾವು ಬರೆದರೆ ಹೇಗಿರುತ್ತದೆಯೋ ಎಂಬ ಆತಂಕ, ಇನ್ನು ಕೆಲವರಲ್ಲಿ ಹೇಗೆ ಬರೆಯುವುದೆಂಬ ಜಿಜ್ಞಾಸೆ. ಈ ನಿಟ್ಟಿನಲ್ಲಿ ಅಡಿಕೆ ಪತ್ರಿಕೆ ಮಾಡಿದ ಮೊದಲ ಕೆಲಸವೆಂದರೆ ರೈತರು ಬರೆದ ಲೇಖನಗಳನ್ನು ಪರಿಷ್ಕರಿಸಿ ಪ್ರಕಟಿಸಲಾರಂಭಿಸಿದ್ದು. ಎರಡನೇ ಹಂತದಲ್ಲಿ ರೈತರಿಗೆ ಬರವಣಿಗೆಯ ತರಬೇತಿ ಶುರುಮಾಡಿತು. ಅದೇ 'ಕೃಷಿಕರ ಕೈಗೆ ಲೇಖನಿ' ಆಂದೋಲನ.

ಮೊದಲ 'ಕೃಷಿ ಮತ್ತು ಗ್ರಾಮೀಣ ಪತ್ರಿಕೋದ್ಯಮ ಶಿಬಿರ' ಕಾಸರಗೋಡು ಸಮೀಪದ ನೀರ್ಚಾಲಿನಲ್ಲಿ ಏರ್ಪಾಡು. 1989ರ ಡಿಸೆಂಬರ್ 23ರಿಂದ 26ರ ತನಕ. ಕೃಷಿ ಅನುಭವದ ಹಿನ್ನೆಲೆಯುಳ್ಳ ಹಾಗೂ ಕೃಷಿರಂಗದ ಕುರಿತು ಪ್ರಾಮಾಣಿಕ ಕಾಳಜಿಯುಳ್ಳ ಅಭ್ಯರ್ಥಿಗಳಿಗೇ ಅವಕಾಶ. ಅವರಿಗೆಲ್ಲ ಸ್ಥಳೀಯ ಕೃಷಿಕರ ಮನೆಗಳಲ್ಲೇ ವಾಸ್ತವ್ಯ. ಪ್ರಾಯೋಗಿಕ ತರಬೇತಿಗೆ ಆದ್ಯತೆ.

ಶಿಬಿರದಿಂದ ಅಚ್ಚರಿಯ ಪರಿಣಾಮ. ಅಭ್ಯರ್ಥಿಗಳ ಪೈಕಿ ಹಲವರಿಂದ ಅಡಿಕೆ ಪತ್ರಿಕೆ ಮಾತ್ರವಲ್ಲ ಇತರ ಪತ್ರಿಕೆಗಳಲ್ಲಿಯೂ ಲೇಖನ ಪ್ರಕಟ. ಇದರಿಂದ ಪತ್ರಿಕೆಗೆ ಇನ್ನಷ್ಟು ಸ್ಫೂರ್ತಿ. ಸರಣಿ ಶಿಬಿರಗಳ ಸಂಘಟನೆ. ಕೊಪ್ಪ, ಭೈರುಂಬೆ, ಮಾವಿನಸರ ಮುಂತಾದೆಡೆ ನೂರಾರು ಮಂದಿಗೆ ತರಬೇತಿ. ಕೃಷಿಕಪರ ಕೃಷಿಪತ್ರಿಕೋದ್ಯಮದ ಬಗ್ಗೆ ಸ್ಪಷ್ಟ ಚಿತ್ರಣ ಹೊಂದಿರುವ ಬರಹಗಾರರ ಪಡೆಯೇ ತಯಾರು.

ಅಡಿಕೆ ಪತ್ರಿಕೆ ಹೊಸಹೊಸ ಪ್ರಯೋಗಗಳ ಮೂಲಕ ಅರ್ಥಪೂರ್ಣ ಕೃಷಿಪತ್ರಿಕೋದ್ಯಮ ಹೇಗಿರಬೇಕು ಎಂಬುದನ್ನು ಸಾದರಪಡಿಸುತ್ತಾ ಮುಂದುವರಿಯಿತು. 'ಹನಿಗೂಡಿ ಹಳ್ಳ' ಅಂಕಣದಲ್ಲಿ ಕೃಷಿಕರ ಪ್ರಶ್ನೆಗಳನ್ನು ಪ್ರಕಟಿಸಿ ಅವುಗಳಿಗೆ ಉತ್ತರ ಕೋರಿ ಮುಂದಿನ ಸಂಚಿಕೆಯಲ್ಲಿ ಎಲ್ಲ ಉತ್ತರಗಳನ್ನು ಕ್ರೋಢೀಕರಿಸಿ ಪ್ರಕಟಿಸಲಾಗುತ್ತಿತ್ತು. ರೈತರ ಸಮಸ್ಯೆಗೆ ರೈತರಿಂದಲೇ ಪರಿಹಾರ! 'ಗಿಡ ಗೆಳೆತನ' ಅಂಕಣ ಕೃಷಿಕರಿಗೆ ಅಗತ್ಯವಿರುವ ಬೀಜ ಹಾಗೂ ಗಿಡಗಳನ್ನು ಪರಸ್ಪರ ಹಂಚಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿತು. 'ಸುದ್ದಿ ಸಾರ' ದೇಶ ವಿದೇಶಗಳಲ್ಲಿ ಕೃಷಿ-ಗ್ರಾಮೀಣ ವಲಯದಲ್ಲಿನ ಹೊಸ ವಿದ್ಯಮಾನಗಳನ್ನು ಓದುಗರಿಗೆ ಪರಿಚಯಿಸಿತು. 'ಕೃಷಿ ಅನುಭವ ವಿನಿಮಯ ಪ್ರವಾಸ' ಅಂಕಣ ಕೃಷಿಕರಲ್ಲಿ ಕೃಷಿ ಪ್ರವಾಸದ ಆಸಕ್ತಿ ಕುದುರಿಸಿತು.

ಓದುಗರು ತಮಗೆ ಎಂತಹ ಲೇಖನ ಬೇಕು ಎಂಬುದನ್ನು ತಿಳಿಸುವ 'ಐಡಿಯಾ ಬಾಕ್ಸ್', ಹೊಸ ಸಂಶೋಧನೆಗಳ ಕುರಿತು ಬೆಳಕು ಚೆಲ್ಲುವ 'ಸಂಶೋಧನಾ ರಂಗದಿಂದ', ನಮ್ಮ ಪರಿಸರದಲ್ಲಿರುವ ಗಿಡಮರಗಳ ಔಷಧೀಯ ಗುಣವನ್ನು ವಿವರಿಸುವ 'ಮನೆ ಮದ್ದು', ದೇಸೀ ಅಡುಗೆಗೆ ಒತ್ತುನೀಡುವ 'ರಸ ರುಚಿ', ಹೊಸ ತರಕಾರಿ, ನಾಟಿ ಬೀಜಗಳ ಪರಿಚಯ, ವಿನಿಮಯಕ್ಕಾಗಿ 'ತೆನೆಗೂಡಿ ಬಳ', ಕೃಷಿ ಪ್ರಕಟಣೆಗಳ ಕುರಿತು ಮಾಹಿತಿ ನೀಡುವ 'ಪುಸ್ತಕ ಪರಿಚಯ' ಇತ್ಯಾದಿ ಅಂಕಣಗಳಿಂದಾಗಿ ಅಡಿಕೆ ಪತ್ರಿಕೆ ಕೃಷಿಕರನ್ನು ಮಾತ್ರವಲ್ಲ ಕೃಷಿಕರಲ್ಲದವರನ್ನೂ ಮುಟ್ಟುವಲ್ಲಿ ಯಶಸ್ವಿಯಾಯಿತು.

ಅಗತ್ಯಾಧಾರಿತ ಮಾಹಿತಿ ನೀಡುವ ಲೇಖನಗಳು, ಎಚ್ಚರ ಮೂಡಿಸುವ, ಚಿಂತನೆಗೆ ಒಡ್ಡುವ ವಿಮರ್ಶಾತ್ಮಕ ಬರಹಗಳು, ಫಾಲೋ ಅಪ್ ವರದಿಗಳ ಜತೆಗೆ 'ಎರೆಹುಳಗಳನ್ನು ಅರಿತುಕೊಳ್ಳಿ', 'ನೆಲಜಲ ಉಳಿಸುವ ನೂರು ವಿಧಿ' ಮುಂತಾದ ಸರಣಿ ಲೇಖನಮಾಲೆಗಳು ಕೃಷಿಪತ್ರಿಕೋದ್ಯಮದ ಹೊಸ ಸಾಧ್ಯತೆಗಳನ್ನು ದಾಖಲಿಸಿದವು. ಕೃಷಿಕರೇ ನಡೆಸಿದ ಹಲವು ಯಶಸ್ವೀ ಸಂಶೋಧನೆಗಳ ಮೇಲೆ ಬೆಳಕು ಚೆಲ್ಲಿದ ಅಡಿಕೆ ಪತ್ರಿಕೆ, ಕೃಷಿಕರೇ ತಯಾರಿಸಬಹುದಾದ ಹಲವು ಸಾಧನ-ಸಲಕರಣೆಗಳ ಕುರಿತೂ ಮಾಹಿತಿ ನೀಡುತ್ತ ಬಂತು. 'ಕೃಷಿಪತ್ರಿಕೋದ್ಯಮ ಕೃಷಿಕರ ಸ್ವಾಭಿಮಾನವನ್ನು ಎತ್ತಿಹಿಡಿಯಬೇಕು' - ಪಡ್ರೆ ಅವರ ಮಾತಿಗೆ ಅಡಿಕೆ ಪತ್ರಿಕೆಯ ಅನೇಕ ಲೇಖನಗಳು ಪುಷ್ಟಿ ನೀಡಿದವು. ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿಯನ್ನು ಕಾರ್ಯರೂಪಕ್ಕಿಳಿಸಿದ ಕೃಷಿಕರ ಅನುಭವಗಳೂ ಪತ್ರಿಕೆಯಲ್ಲಿ ಬೆಳಕುಕಂಡವು. ಕೃಷಿಕರಿಗಾಗಿ ಬರೆಯುವುದೆಂದರೆ ಕೇವಲ ನಮ್ಮ ವಿಚಾರಗಳನ್ನು ಕಾಗದಕ್ಕಿಳಿಸುವುದಷ್ಟೇ ಅಲ್ಲ, ನಾವು ಬರೆಯುವ ವಿಚಾರ ಕೃಷಿಕರ ಗಮನ ಸೆಳೆದು ಅದನ್ನವರು ಆಸಕ್ತಿಯಿಂದ ಓದಿ, ಪೂರ್ಣ ಅರ್ಥಮಾಡಿಕೊಂಡು, ನೆನಪಲ್ಲುಳಿಸಿಕೊಂಡು ಅಂತಿಮವಾಗಿ ಕಾರ್ಯಗತಗೊಳಿಸುವಂತಾಗಬೇಕು ಎಂಬ ವ್ಯಾಖ್ಯೆಗೆ ಅಡಿಕೆ ಪತ್ರಿಕೆಯ ಲೇಖನಗಳು ಮಾದರಿಯಾದವು.

ಅಡಿಕೆ ಪತ್ರಿಕೆ ಕೇವಲ ಕೃಷಿಕರ ಮಟ್ಟದಲ್ಲೇ ಉಳಿಯಲಿಲ್ಲ. ಪತ್ರಕರ್ತರು, ಸಾಹಿತಿಗಳು, ಶಿಕ್ಷಕರು, ಅಧಿಕಾರಿಗಳು ಹೀಗೆ ವಿವಿಧ ವಲಯಗಳಲ್ಲಿ ಪತ್ರಿಕೆ ಜನಪ್ರಿಯವಾಯಿತು. ಅದುವರೆಗೆ ಕೃಷಿಪಂಡಿತರಿಗಷ್ಟೆ ಸೀಮಿತವಾಗಿದ್ದ ಕೃಷಿಪತ್ರಿಕೋದ್ಯಮ 'ಕೃಷಿಕರ ಪತ್ರಿಕೋದ್ಯಮ'ವಾಗಿ ರೂಪಾಂತರ ಹೊಂದಿರುವುದನ್ನು ಅನೇಕರು ಕುತೂಹಲ, ಅಚ್ಚರಿಯಿಂದ ಗಮನಿಸಿದರು. ಸಿಧ್ಧ ಚೌಕಟ್ಟಿನಿಂದ ಹೊರಬಂದ ಕೃಷಿ ಬರವಣಿಗೆ ತನ್ನ ಸ್ವರೂಪದಲ್ಲಿಯೂ ಬದಲಾವಣೆ ತಂದುಕೊಂಡಿತು.

ಕೃಷಿಕರಿಗೆ ಉಪಯುಕ್ತವಾಗುವ ಮಾಹಿತಿ ಪುಟಗಟ್ಟಲೆ ಇರಬೇಕೆಂದೇನೂ ಇಲ್ಲ; ಒಂದೆರಡು ವಾಕ್ಯಗಳ ಬರಹಗಳೂ ರೈತನಿಗೆ ಆಪ್ತವೆನಿಸಬಲ್ಲವು ಎಂಬುದಕ್ಕೆ ಅಡಿಕೆ ಪತ್ರಿಕೆಯಲ್ಲಿ ಪ್ರಕಟಗೊಂಡ ಅಂತಹ ನೂರಾರು ಮಾಹಿತಿ ತುಣುಕುಗಳೇ ಸಾಕ್ಷಿ. (ಓದಿ: 'ಹನಿಗೂಡಿ ಹಳ್ಳ', ಪ್ರ: ಕೃಷಿ ಮಾಧ್ಯಮ ಕೇಂದ್ರ)

ಮೊದಮೊದಲು 'ಕೃಷಿಕರೂ ಬರೆಯಬಲ್ಲರೇ?' ಎಂದು ಹುಬ್ಬೇರಿಸಿದವರಿಗೆ ಅಡಿಕೆ ಪತ್ರಿಕೆ ಸ್ಪಷ್ಟ ಉತ್ತರ ಕೊಟ್ಟಿತು. ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದವು. ರೈತಪರ ಒಲವು ಹೊಂದಿರುವ ಕೃಷಿ ವಿಜ್ಞಾನಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಅಡಿಕೆ ಪತ್ರಿಕೆ ಯಶಕಂಡಿತು. ಅನೇಕ ವಿಜ್ಞಾನಿಗಳು ಪತ್ರಿಕೆಗೆ ಸರಿಹೊಂದುವ ಶೈಲಿಯಲ್ಲಿ ಬರೆಯಲಾರಂಭಿಸಿದರು. 'ಈ ಲೇಖನವನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಎರಡು ಪ್ರತಿಗಳನ್ನು ಕಳುಹಿಸಿಕೊಡಿ' ಎಂಬ ಧೋರಣೆ ಮಾಯವಾಯಿತು.

ಕೃಷಿಪತ್ರಿಕೋದ್ಯಮದಲ್ಲಿನ ಈ ಎಲ್ಲ ಹೊಸ ಪ್ರಯೋಗಗಳಿಂದಾಗಿ ದಿನ ಪತ್ರಿಕೆಗಳ ಕೃಷಿ ಪುಟಗಳಲ್ಲಿಯೂ ಬದಲಾವಣೆ ಕಂಡುಬಂತು. ಅಲ್ಲಿಯವರೆಗೆ ಬಹುತೇಕ ಕೃಷಿ ವಿಸ್ತರಣಾ ಘಟಕಗಳಿಗಷ್ಟೆ ಸೀಮಿತವಾಗಿದ್ದ ಕೃಷಿ ಪುಟಗಳಲ್ಲಿ ರೈತರು ಬರೆದ ಲೇಖನಗಳೂ ಪ್ರಕಟವಾಗತೊಡಗಿದವು. ಅನೇಕ ಫ್ರೀಲ್ಯಾನ್ಸ್ ಬರಹಗಾರರೂ ಕೃಷಿ-ಗ್ರಾಮೀಣ ವಿಚಾರಗಳ ಕುರಿತು ಆಸಕ್ತಿಯುತ ಲೇಖನಗಳನ್ನು ಬರೆಯಲಾರಂಭಿಸಿದರು. ಇವರೆಲ್ಲ ಲೇಖನಕ್ಕಾಗಿ ಆರಿಸುವ ವಸ್ತುವಿನಲ್ಲೇ ಹೊಸತನವಿರುತ್ತಿತ್ತು. ಆಗ ಸಾವಯವ ಕೃಷಿಯ ಆರಂಭದ ಸಮಯ. ಈ ನಿಟ್ಟಿನಲ್ಲಿ ಕೆಲವರು ಕೈಗೊಂಡಿದ್ದ ಪ್ರಯತ್ನಗಳಿಗೆ ಕನ್ನಡಿ ಹಿಡಿಯುವ ಮೂಲಕ ಕೃಷಿಪತ್ರಿಕೋದ್ಯಮ ಅನೇಕ ರೈತರನ್ನು ಸಾವಯವ ಕೃಷಿಯತ್ತ ಪ್ರೇರೇಪಿಸಿತು.

ಅಡಿಕೆ ಪತ್ರಿಕೆಯ ನಂತರ ಇನ್ನೂ ಕೆಲವು ಕೃಷಿ ಪತ್ರಿಕೆಗಳು ಶುರುವಾದವು. ಅವೆಲ್ಲವುಗಳಿಗೂ ಆಧಾರ ಅಡಿಕೆ ಪತ್ರಿಕೆಯ ಮೂಲಕ ರೂಪಿತವಾದ ಕೃಷಿಪತ್ರಿಕೋದ್ಯಮ ಎಂದರೆ ತಪ್ಪಾಗಲಾರದು.

ತೀರ ಇತ್ತೀಚಿನವರೆಗೂ ಗ್ರಾಮೀಣ ಪತ್ರಿಕೋದ್ಯಮವೆಂದರೆ 'ಹಳ್ಳಿಯಲ್ಲಿರುವ ಸಮಸ್ಯೆ ಅಥವಾ ಅಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಬರೆಯುವುದು ಹಾಗೂ ಹಳ್ಳಿಯಲ್ಲಿ ಸರಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ವಿಮರ್ಶೆಗೆ ಒಡ್ಡುವುದು' ಎಂಬ ಸರಳ ವ್ಯಾಖ್ಯೆ ಪ್ರಚಲಿತದಲ್ಲಿತ್ತು. ಆದರೆ ಇಂದು ಹೆಚ್ಚಿನ ಕೃಷಿ ಪತ್ರಿಕೆಗಳಲ್ಲಿ ಗ್ರಾಮೀಣ ವಲಯಕ್ಕೆ ಸಂಬಂಧಿಸಿದ ಹತ್ತಾರು ವಿಷಯಗಳ ಮೇಲೆ ಬೆಳಕು ಚೆಲ್ಲುವ ಬರಹಗಳೂ ಕಂಡುಬರುತ್ತವೆ. ಹಳ್ಳಿಯೊಂದನ್ನು ತೀವ್ರವಾಗಿ ಕಾಡುತ್ತಿರುವ ಸಮಸ್ಯೆ, ಪ್ರಗತಿಯ ಹಾದಿಯಲ್ಲಿ ಗ್ರಾಮವೊಂದರ ಸಾಧನೆ, ಅರಣ್ಯೀಕರಣ, ಸ್ವಸಹಾಯ ಸಂಘಗಳ ಚಟುವಟಿಕೆ, ಗ್ರಾಮೀಣ ಆಚರಣೆ, ಪ್ರತಿಭೆ, ಹವ್ಯಾಸ, ಉದ್ದಿಮೆ ಇತ್ಯಾದಿ ವಿವಿಧ ಸಂಗತಿಗಳನ್ನು ಬಿಂಬಿಸುವ ಲೇಖನಗಳು ಗ್ರಾಮೀಣ ಪತ್ರಿಕೋದ್ಯಮದ ಹರವನ್ನು ವಿಸ್ತಾರಗೊಳಿಸಿವೆ. ಹೀಗೆ ಕೃಷಿ ಮತ್ತು ಗ್ರಾಮೀಣ ವಿಚಾರಗಳ ಬಗ್ಗೆ ಹೊಸ ದೃಷ್ಟಿಕೋನದಿಂದ ಬರೆಯುವ ಕ್ರಮ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿದೆ.

ಧಾರವಾಡದಲ್ಲಿ 2000ನೇ ಇಸವಿ ಡಿಸೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬಂದ ಪರ್ಯಾಯ ಕೃಷಿಮಾಧ್ಯಮ ಕೇಂದ್ರ ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಬಲವರ್ಧನೆಗಾಗಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.

 ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಮೂಲಭೂತ ಅಂಶಗಳು:
 • ಬರಹಗಳಲ್ಲಿ ರೈತಪರ ದೃಷ್ಟಿಕೋನ ಮುಖ್ಯ.
 • ಹೊಸಹೊಸ ವಿಷಯಗಳ ಬಗ್ಗೆ ಬರೆಯುವುದು ಸೂಕ್ತ.
 • ಪುಸ್ತಕಗಳನ್ನು ಆಧರಿಸಿ ಬರೆಯುವುದಕ್ಕಿಂತ ರೈತರ ಅನುಭವಗಳ ಮೇಲೆ ಬೆಳಕುಚೆಲ್ಲುವುದು ಒಳ್ಳೆಯದು. ಕ್ಷೇತ್ರಭೇಟಿ ಅಗತ್ಯ.
 • ವಿಷಯದ ಒಂದೇ ಮಗ್ಗುಲನ್ನು ಪ್ರಸ್ತಾಪಿಸುವ ಬದಲು ಬೇರೆಬೇರೆ ಮಗ್ಗುಲುಗಳ ಬಗ್ಗೆ ವಿವರಿಸುವುದು ಅಗತ್ಯ.
 • ಬರಿಗಣ್ಣಿಗೆ ಕಾಣದ ಸಂಗತಿಗಳನ್ನೂ ಗ್ರ್ರಹಿಸುವಷ್ಟು ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು.
 • ಬರವಣಿಗೆಗೆ ಯಶೋಗಾಥೆಗಳೇ ಆಗಬೇಕೆಂದಿಲ್ಲ; ಸೋಲಿನ ಕತೆಗಳ ಕುರಿತು ಬರೆಯುವುದು ಕೂಡ ಮುಖ್ಯ.
 • ಲೇಖನ ಸಕಾಲದಲ್ಲಿ ಪ್ರಕಟಗೊಳ್ಳುವುದು ಅಗತ್ಯ.
 • ಲೇಖನವನ್ನು ಓದಿದಾಗ ಓದುಗರಲ್ಲಿ ಸಾಮಾನ್ಯವಾಗಿ ಮೂಡಬಹುದಾದ ಸಂದೇಹ, ಪ್ರಶ್ನೆಗಳನ್ನು ಊಹಿಸಿ ಅವುಗಳಿಗೆ ಉತ್ತರಿಸುವ ಮೂಲಕ ಲೇಖನವನ್ನು ಪರಿಷ್ಕರಿಸುವುದು ಅಗತ್ಯ.
 • ಅತಿ ರಂಜನೆ, ಅತಿಶಯೋಕ್ತಿ ಬೇಡ. ಟೀಕಿಸುವ ವೇಳೆಯಲ್ಲಿಯೂ ಅದು ಸಕಾರಾತ್ಮಕವಾಗಿರಬೇಕು.
 • ಸಾಮಾನ್ಯ ಓದುಗರಿಗೂ ಅರ್ಥವಾಗುವಂತಹ ಸರಳವಾದ ಭಾಷೆಯಲ್ಲಿ ಲೇಖನ ಬರೆಯುವುದು ಅಗತ್ಯ.
 • ವಿಷಯವನ್ನು ಹಂಚಿಕೊಳ್ಳುವ ರೀತಿಯಲ್ಲಿ ಬರವಣಿಗೆ ಇರಬೇಕು. ಉಪದೇಶದ ಮಾದರಿಯಲ್ಲಿ ಅಲ್ಲ.
 • ಅರೆಬೆಂದ, ಅಪೂರ್ಣ ಅಥವಾ ಅಸ್ಪಷ್ಟ ಮಾಹಿತಿಯನ್ನು ನೀಡಬಾರದು. ಇದರಿಂದ ಅಪಾಯವೇ ಹೆಚ್ಚು.
 • ಸಂಘಸಂಸ್ಥೆಗಳು ಅಥವಾ ಕಂಪೆನಿಗಳ ಬಗ್ಗೆ ಬರೆಯುವಾಗ ಅದು ಪ್ರಚಾರ ಲೇಖನದಂತಿರಬಾರದು. ವಸ್ತುನಿಷ್ಠ ಬರವಣಿಗೆ ಮುಖ್ಯ.
 • ಹೊಸ ಬೆಳೆ, ಹೊಸ ತಂತ್ರಜ್ಞಾನ ಅಥವಾ ಹೊಸ ಪದ್ಧತಿಯನ್ನು ಅಳವಡಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ರೈತರಿಗೆ ಬಿಟ್ಟ ವಿಚಾರ ಎಂಬುದು ಲೇಖಕರ ಗಮನದಲ್ಲಿರಬೇಕು.
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media